ಬೆಂಗಳೂರು, ಜೂನ್ 17: ಮುಂದಿನ ಕೆಲವು ದಿನಗಳವರೆಗೆ ಬೆಂಗಳೂರು ಮತ್ತು ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಾನ್ಸೂನ್ ದುರ್ಬಲಗೊಂಡಿತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಮಳೆಯ ನಿರೀಕ್ಷೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನೆಟ್ಟಿರುವ ಹೆಚ್ಚಿನ ಸಂಖ್ಯೆಯ ಸಸಿಗಳು ಒಣಗುತ್ತಿದ್ದು, ಅಧಿಕಾರಿಗಳು ನೀರುಣಿಸಲು ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಮುಂದಿನ ಎರಡು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಸರಾಸರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕಳೆದ ವಾರಗಳಿಗಿಂತ ಒಂದು ಡಿಗ್ರಿ ಹೆಚ್ಚಾಗಲಿದೆ. ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಐಎಂಡಿ ಅಧಿಕಾರಿ ಸಿಎಸ್ ಪಾಟೀಲ್ ಹೇಳಿದ್ದಾರೆ.

"ತೇವವಾದ ನೈಋತ್ಯ ಮಾರುತಗಳು ದುರ್ಬಲಗೊಳ್ಳುವುದು ತಾತ್ಕಾಲಿಕ. ಮುಂದಿನ ವಾರದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ'' ಎಂದು ಪಾಟೀಲ್ ಹೇಳಿದರು. ಬೆಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ, ಉತ್ತರ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಭಾಗಗಳಲ್ಲಿ ಜೂನ್ 20 ರವರೆಗೆ ಲಘು ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಆಂತರಿಕ ಕರ್ನಾಟಕದ ಭಾಗಗಳಾದ ವಿಜಯಪುರ, ಧಾರವಾಡ, ಕಲಬುರಗಿ, ದಕ್ಷಿಣ ಒಳನಾಡು ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಹಾಸನ, ಕೋಲಾರ, ಮೈಸೂರು, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರು, ರಾಯಚೂರು ಸೇರಿದಂತೆ ರಾಜ್ಯದಾದ್ಯಂತ ಅನೇಕ ಪ್ರತ್ಯೇಕ ಸ್ಥಳಗಳಲ್ಲಿ (30-40 kmph) ಲಘುವಾದ ಗಾಳಿಯೊಂದಿಗೆ ಲಘು ಮಳೆಯಾಗುತ್ತದೆ ಎಂದು ಅವರು ಹೇಳಿದರು.
IMD ಗುಡುಗು ಮತ್ತು ಮಿಂಚಿನ ಮಳೆಯ ಮುನ್ಸೂಚನೆ ನೀಡಿದೆ. ಜೂನ್ 20 ರ ನಂತರ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಪಾಟೀಲ್ ಹೇಳಿದರು. ಏತನ್ಮಧ್ಯೆ, ಗೋಕರ್ಣ ಸೇರಿದಂತೆ ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಭಾನುವಾರ 2 ಸೆಂ, ಶಿರೋಲಿ ಮತ್ತು ಮಂಗಳೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.


Click it and Unblock the Notifications