ಬೇಸಿಲಿನ ಬೇಗೆ ಕಳೆದು ಬೆಂಗಳೂರಿನಲ್ಲಿ ವಾತರವರಣ ತಂಪಾಗಲಿದೆ. ಹೌದು ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಇಂದು ಬೆಂಗಳೂರಿನಲ್ಲಿ RCB ಹಾಗೂ ಗುಜರಾತ್ ಟೈಟನ್ಸ್ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಇದಕ್ಕೆ ಮಳೆ ಅಡ್ಡಿಯಾಗಲಿದೀಯಾ? ಹವಾಮಾನ ಇಲಾಖೆ ಈ ಕುರಿತು ಹೇಳಿರುವ ವರದಿ ಏನು? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ...
ಹೌದು, ಬುಧವಾರ ( ಏ.2) ರಂದು ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ( ಐಎಂಡಿ ) ಮುನ್ಸೂಚನೆ ನೀಡಿದೆ. ಇದರಿಂದ ಬೆಂಗಳೂರಿನಲ್ಲಿ ಏರುತ್ತಿರುವ ತಾಪಮಾನದ ಬಿಸಿ ಕಡಿಮೆಯಾಗಲಿದೆ.

ಸಿಲಿಕಾನ್ ಕಣಿವೆಯಲ್ಲಿ ಹಗಲಿನಲ್ಲಿ ಸುಮಾರು 36 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಳಿತವಾಗುತ್ತಿದ್ದು, ಮಳೆಯ ನಂತರ ಪಾದರಸದ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬರುವ ನಿರೀಕ್ಷೆಯಿದೆ. ಗುರುವಾರ ಮಳೆಯ ನಂತರ ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನೂ ಏಪ್ರಿಲ್ 3ರಿಂದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಇಂದು ಸಂಜೆ ಸಣ್ಣ ಪ್ರಮಾಣದ ಮಳೆಯಾಗಲಿದ್ದು, ನಾಳೆಯಿಂದ ಹೆಚ್ಚಾಗುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ
ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಆಲಿಕಲ್ಲು ಹೆಚ್ಚಿನ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ. ಏಪ್ರಿಲ್ 2 ಮತ್ತು 3 ರಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗಲಿದ್ದು, ಕೆಲವು ಕಡೆ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಧ್ಯಮ ಮಳೆಯಾಗಲಿದೆ. ಬಲವಾದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಸಂಭಾವ್ಯ ಅಡೆತಡೆಗಳ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದ್ದು, ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚನೆಯನ್ನು ನೀಡಿದೆ.
ಏಪ್ರಿಲ್ 3ರಂದು ಎಲ್ಲೆಲ್ಲಿ ಮಳೆ?
ಏಪ್ರಿಲ್ 3 ರಂದು ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತುಮಕೂರು, ಶಿವಮೊಗ್ಗ, ಮೈಸೂರು, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗವ ಸಾಧ್ಯತೆ ಜೋರಾಗಿ ಇದೆ. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆಯನ್ನು ಮಾಡಿದೆ. ಈ ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುತ್ತದೆ ನೀವು ಈ ಬಗ್ಗೆ ಎಚ್ಚರಿಕೆ ಇರಬೇಕು ಎಂದು ಸೂಚನೆಯನ್ನು ನೀಡಿದೆ.
ಹಳಿಯಾಳ, ಧಾರವಾಡ, ಹುನಗುಂದ, ಕಿತ್ತೂರು, ಮತ್ತು ಹುಬ್ಬಳ್ಳಿ ಭಾಗಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಹೆಚ್ಚಾಗುವ ಸಾಧ್ಯವಿದೆ, ಆದ್ದರಿಂದ ಈ ಪ್ರದೇಶಗಳಲ್ಲಿ ಇರುವ ಜನರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ. ಮಳೆಯಿಂದಾಗಿ ಕೃಷಿ, ರಸ್ತೆ ಸಂಚಾರ, ಹಾಗೂ ಜನಸಾಮಾನ್ಯರ ದಿನಚರಿಯಲ್ಲಿ ತೊಂದರೆಯಾಗಬಹುದು. ಆದ್ದರಿಂದ ಸರ್ಕಾರವು ಮತ್ತು ಸಾರ್ವಜನಿಕರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಹೇಳಿದೆ.
ಕೆಲವು ಪ್ರದೇಶಗಳಲ್ಲಿ ಶಾಖ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ, ಆದರೆ ಒಟ್ಟಾರೆಯಾಗಿ, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು ಬೇಸಿಲಿನ ಬೇಗೆಯಿಂದ ಮುಕ್ತಿ ಸಿಗಲಿದೆ.


Click it and Unblock the Notifications