ಬೆಂಗಳೂರು: ಮೋಸ ಹೋಗುವವರು ಎಷ್ಟು ದಿನ ಇರುತ್ತಾರೋ, ಮೋಸ ಮಾಡುವವರು ಕೂಡಾ ಅಷ್ಟೇ ದಿನ ಇರುತ್ತಾರೆ ಎಂಬ ಮಾತನ್ನ ಕೇಳಿರಬಹುದು. ಸದ್ಯದ ಪರಿಸ್ಥಿತಿ ಕೂಡಾ. ಮೊಬೈಲ್, ಲ್ಯಾಪ್‌ಟಾಪ್, ಹಾಸ್ಪಿಟಲ್, ಬ್ಯಾಂಕ್ ಹೀಗೆ ಹಲವು ಕಡೆಗಳಲ್ಲಿ ಅಮಾಯಕರು ಮೋಸದ ಬಲೆಗೆ ಬೀಳುತ್ತಿದ್ದಾರೆ. ಇದೀಗ ಅಂಥದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಹುಷಾರಿಲ್ಲ ಎಂದು ಆಸ್ಪತ್ರೆಗೆ ಹೋದ್ರೆ ಆತನ ಕಿಡ್ನಿಯನ್ನೇ ಡ್ಯಾಮೇಜ್ ಮಾಡಿದ್ದಾರೆ. ಅಷ್ಟೇ ಲಕ್ಷಗಟ್ಟಲೆ ಹಣ ವಂಚನೆ ಮಾಡಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಆಯುರ್ವೇದ ಗುರು ಮತ್ತು ಆಯುರ್ವೇದ ಅಂಗಡಿ (Ayurveda) ಮಾಲೀಕರೊಬ್ಬರ ವಿರುದ್ಧ ಇದೀಗ ವಂಚನೆ (Scam) ಮತ್ತು ಕಿಡ್ನಿ ಹಾನಿ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಸುಮಾರು 48 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದು, ಆಯುರ್ವೇದ ಚಿಕಿತ್ಸೆಯಿಂದ ಕಿಡ್ನಿ ಹಾನಿಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಬೆಂಗಳೂರು ಪೊಲೀಸರ ನೈಋತ್ಯ ವಿಭಾಗ ದಾಖಲಿಸಿಕೊಂಡಿದೆ.
ನವೆಂಬರ್ 22 ರಂದು ಎಫ್‌ಐಆರ್ ದಾಖಲಾಗಿದ್ದು, ಬೆಂಗಳೂರಿನ ವಿಜಯ್ ಗುರೂಜಿ ಮತ್ತು ಯಶವಂತಪುರದ ವಿಜಯಲಕ್ಷ್ಮಿ ಆಯುರ್ವೇದ ಅಂಗಡಿಯ ಮಾಲೀಕರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಎಫ್‌ಐಆರ್ ಪ್ರಕಾರ, 2025 ರ ಮೇ 3 ರಂದು ರಸ್ತೆಯ ಬದಿಯ ಆಯುರ್ವೇದ ಶಿಬಿರವೊಂದರಲ್ಲಿ ಲೈಂಗಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರದ ಭರವಸೆ ನೀಡಿ ಸಂತ್ರಸ್ತನನ್ನು ಆಮಿಷಕ್ಕೆ ಒಳಪಡಿಸಲಾಯಿತು ಎನ್ನಲಾಗಿದೆ.
ಆಯುರ್ವೇದ ಔಷಧಿ ಹೆಸರಲ್ಲಿ ಮಹಾಮೋಸ!
ಆರೋಪಿಗಳು ಆರಂಭದಲ್ಲಿ ದೇವರಾಜ್ ಬೂಟಿ (ಪ್ರತಿ ಗ್ರಾಂಗೆ ₹1.6 ಲಕ್ಷ) ಮತ್ತು ಭವನ್ ಬೂಟಿ ತೈಲ (ಪ್ರತಿ ಗ್ರಾಂಗೆ ₹76,000) ನಂತಹ ದುಬಾರಿ ಔಷಧಿಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಚಿಕಿತ್ಸೆ ಫೈಲ್ ಆದ್ರೆ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಬೆದರಿಕೆ ಹಾಕಿ ಮತ್ತೆ ಮತ್ತೆ ಖರೀದಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಎಫ್‌ಐಆರ್ ಅನ್ನು ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್‌ಗಳಾದ 123, 316(2), 318(4) ಮತ್ತು 3(5) ಅಡಿಯಲ್ಲಿ ದಾಖಲಿಸಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ. ಆದ್ದರಿಂದ ಇಂತಹ ಮೋಸದ ಜಾಲಕ್ಕೆ ಹೋಗುವ ಮುನ್ನ ಸರಿಯಾಗಿ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ.
ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್!
ಎರಡು ವಾರದ ಹಿಂದಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 57 ವರ್ಷದ ಮಹಿಳಾ ಟೆಕ್ಕಿಯೊಬ್ಬರು 31.83 ಕೋಟಿ ರೂ.ಗಳನ್ನು ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಇದು ಒಂದೆರಡು ದಿನ ಅಲ್ಲ, ಕಳೆದ 6 ತಿಂಗಳಿಂದ ನಡೆಯುತ್ತಿರುವ ಮಹಾವಂಚನೆ. ಅಷ್ಟೇ ಅಲ್ಲ, ಇದು ಕರ್ನಾಟಕದಲ್ಲಿ ಡಿಜಿಟಲ್ ಅರೆಸ್ಟ್ ಹಗರಣದಲ್ಲಿ ಒಬ್ಬರು ಕಳೆದುಕೊಂಡ ಅತಿದೊಡ್ಡ ಹಣವೆಂದು ಪೊಲೀಸರು ಹೇಳಿದ್ದಾರೆ. ಇಂದಿರಾ ನಗರದ ನಿವಾಸಿ ಆಗಿರುವ ಸಂತ್ರಸ್ತೆ, ಐಟಿ ವೃತ್ತಿಯಲ್ಲಿ ಬಹಳ ಅನುಭವ ವುಳ್ಳವರು. ಇದನ್ನೇ ಗಮನಿಸಿರುವ ಸೈಬರ್ ಖದೀಮರು, ಸಂತ್ರಸ್ತೆಯನ್ನು ಕಳೆದ ಆರು ತಿಂಗಳಿಂದ ಮೋಸದ ಬಲೆಗೆ ಬೀಳಿಸಿ, ನಿರಂತರ ಹಣ ಪೀಕುತ್ತಿದ್ದರು ಎನ್ನಲಾಗಿದೆ.


Click it and Unblock the Notifications