ಭಾರ್ತಿ ಏರ್ ಟೆಲ್, ವೊಡಾಫೋನ್ ಐಡಿಯಾ ಸೇರಿದಂತೆ ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಜನವರಿ 23ನೇ ತಾರೀಕಿನೊಳಗೆ ಕಾನೂನಾತ್ಮಕವಾಗಿ ಪಾವತಿಸಬೇಕಾದ 1.47 ಲಕ್ಷ ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆ ಆದೇಶದ ವಿರುದ್ಧ ಪುನರ್ ಪರಿಶೀಲನೆ ಅರ್ಜಿ ಹಾಕಲಾಗಿತ್ತು.
ನಾನ್ ಟೆಲಿಕಾಂ ಆದಾಯವನ್ನು ಒಳಗೊಂಡಂತೆ ಸ್ಟ್ಯಾಟುಟರಿ ಶುಲ್ಕ ಪಾವತಿಸುವಂತೆ ಕಳೆದ ಅಕ್ಟೋಬರ್ ನಲ್ಲಿ ಕೋರ್ಟ್ ಸೂಚಿಸಿತ್ತು. ಇದನ್ನು ಟೆಲಿಕಾಂ ಕಂಪೆನಿಗಳ ಅಡ್ಜಸ್ಟಡ್ ಗ್ರಾಸ್ ರೆವೆನ್ಯೂಸ್ (ಎಜಿಆರ್) ಎಂದೂ ಕರೆಯಲಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ ಪೀಠವು ಪರಿಶೀಲನೆ ಮಾಡಬೇಕೆಂಬ ಅರ್ಜಿಯನ್ನು ತಿರಸ್ಕರಿಸಿದೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಸಂಸತ್ ಗೆ ನೀಡಿದ ಮಾಹಿತಿ ಪ್ರಕಾರ ಭಾರ್ತಿ ಏರ್ ಟೆಲ್, ವೊಡಾಫೋನ್ ಐಡಿಯಾ ಮತ್ತಿತರ ಟೆಲಿಕಾಂ ಕಂಪೆನಿಗಳು ಸೇರಿ ಬಡ್ಡಿ ಹಾಗೂ ದಂಡವನ್ನು ಒಳಗೊಂಡಂತೆ 1.47 ಲಕ್ಷ ಕೋಟಿ ರುಪಾಯಿ ಪಾವತಿಸಬೇಕು.

ಟೆಲಿಕಾಂ ಇಲಾಖೆಯಿಂದ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಏರ್ ಟೆಲ್ ನಿಂದ ಲೈಸೆನ್ಸ್ ಫೀ 21,682.13 ಕೋಟಿ, ವೊಡಾಫೋನ್ 19,823.71 ಕೋಟಿ, ರಿಲಯನ್ಸ್ ಕಮ್ಯುನಿಕೇಷನ್ 16,456.47 ಕೋಟಿ, ಬಿಎಸ್ ಎನ್ ಎಲ್ 2,098.72 ಕೋಟಿ ಮತ್ತು ಎಂಟಿಎನ್ ಎಲ್ 2,537.48 ಕೋಟಿ ಬಾಕಿ ಪಾವತಿ ಮಾಡಬೇಕು.


Click it and Unblock the Notifications