ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (GBA) ಅಡಿಯಲ್ಲಿ, ಡಿಕೆ ಶಿವಕುಮಾರ್ (DK Shiva Kumar) ಅವರ ಬ್ರಾಂಡ್ ಬೆಂಗಳೂರು ಕನಸಿಗೆ ಘೋಷಣೆಯಾಗಿರುವ ಮಹತ್ವದ ಯೋಜನೆಯೇ ಬಿಡದಿ ಇಂಟಿಗ್ರೇಟೆಡ್ ಯೋಜನೆ (Bidadi Township). ಇನ್ನು ಇದನ್ನು ಬಿಡದಿ ಟೌನ್‌ಶಿಪ್ ಯೋಜನೆ ಅಥವಾ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಎಂದು ಕರೆಯಲಾಗುತ್ತದೆ. ಅಲ್ಲದೇ ಕರ್ನಾಟಕ ಸರ್ಕಾರದ ಅತ್ಯಂತ ಬೃಹತ್ ಮತ್ತು ಆಧುನಿಕ ನಗರಾಭಿವೃದ್ಧಿ ಯೋಜನೆಗಳಲ್ಲಿ ಇದೂ ಒಂದಾಗಿದೆ. ಇದನ್ನು ಭಾರತದ ಮೊದಲ ಎಐ ಪವರ್ಡ್ ಸಿಟಿ ಎಂದೂ ಘೋಷಿಸಲಾಗಿದೆ.

ಇದೀಗ ಈ ಬಿಡದಿ ಟೌನ್‌ಶಿಪ್ ಯೋಜನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಯೋಜನೆಯ ಆರಂಭಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಅಂತಿಮ ಅಧಿಸೂಚನೆ ಶೀಘ್ರದಲ್ಲೇ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ರಾಜ್ಯ ಸರ್ಕಾರ ಈ ಯೋಜನೆಗಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯಿಂದ 9 ಹಳ್ಳಿಗಳಲ್ಲಿ ಸುಮಾರು 7,400 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.
ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದು, ಆದರೂ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಇನ್ನು ಭೂಸ್ವಾಧೀನ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ನಡೆಸಲಿದ್ದು, ಸರ್ಕಾರ ಪರಿಹಾರವನ್ನು ನೀಡಲು ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶ ಹೊರಡಿಸಲಿದೆ ಎನ್ನಲಾಗಿದೆ.
ಒಟ್ಟು ಯೋಜನೆಗೆ ಸುಮಾರು 8,000 ದಿಂದ 9,000 ಎಕರೆಗಳವರೆಗೆ ಭೂಮಿ ಬೇಕಾಗುತ್ತದೆ ಎಂದು ಹೇಳಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಸುಮಾರು 7,000 ಕ್ಕೂ ಅಧಿಕ ಎಕರೆ ಖಾಸಗಿ ಭೂಮಿ ಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಲಾಗಿದೆ. ಬೆಂಗಳೂರು ದಕ್ಷಿಣದ ಬಿಡದಿ ಪ್ರದೇಶ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಬಳಿ, ಬೆಂಗಳೂರಿನಿಂದ ಸುಮಾರು 30 ಕಿ.ಮೀ ದೂರದಲ್ಲಿ, ರಾಮನಗರ ಜಿಲ್ಲೆಯ ರಾಮನಗರ ಮತ್ತು ಹಾರೋಹಳ್ಳಿ ತಾಲೂಕುಗಳಲ್ಲಿರುವ 9 ಗ್ರಾಮಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಭೂ ಭಾಗಗಳ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪ್ರಸ್ತಾವನೆಯನ್ನು ಈಗಾಗಲೇ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಜಿಬಿಡಿಎ ಆಯುಕ್ತ ಪಿ.ರಾಜೇಂದ್ರ ಚೋಳನ್, ಶೀಘ್ರದಲ್ಲೇ ಸಚಿವ ಸಂಪುಟದ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದೂ ಹೇಳಿದ್ದಾರೆ.
ರೈತರು, ರಾಜಕೀಯ ನಾಯಕರಿಂದ ವಿರೋಧ!
ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುಮಾರು 3,500 ಕ್ಕೂ ಅಧಿಕ ಕುಟುಂಬಗಳು ತನ್ನ ಜೀವನ ಆಧಾರವಾಗಿ ಈ ಭೂಮಿಯನ್ನು ಅವಲಂಬಿಸಿಕೊಂಡಿದೆ. ಅಲ್ಲದೇ 2006 ರಲ್ಲೊಮ್ಮೆ ಈ ಯೋಜನೆಗೆ ಪ್ರಸ್ತಾಪ ಬಂದಿತ್ತು. ಆದ್ರೆ ರೈತರ ತೀವ್ರ ವಿರೋಧದಿಂದ ಈ ಯೋಜನೆ ನಿಂತಿತ್ತು. ಆದ್ರೆ ಇದೀಗ ಮತ್ತೆ ಆರಂಭದ ಸೂಚನೆ ಸಿಕ್ಕಿದೆ. ಈಗಾಗಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಎಚ್.ಡಿ ಕುಮಾರಸ್ವಾಂಇ, ಆರ್ ಅಶೋಕ್ ಹೀಗೆ ಮುಂತಾದವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಡಿ.ಕೆ ಶಿವಕುಮಾರ್ ಯೋಜನೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.


Click it and Unblock the Notifications