ಹಣದುಬ್ಬರದ ಸಮಸ್ಯೆ ಸದ್ಯ ದೇಶದಲ್ಲಿ ದಿನೇ ದಿನೇ ವಿಪರೀತವಾಗುತ್ತಿದೆ. ದುಬಾರಿ ದುನಿಯಾದಲ್ಲಿ ಜನ ಸಾಮಾನ್ಯರಿಗೆ ಜೀವನ ಸಾಗಿಸೋದೆ ಕಷ್ಟವಾಗಿಬಿಟ್ಟಿದೆ. ತರಕಾರಿ, ಮಾಂಸ, ಮೊಟ್ಟೆ, ಚಿನ್ನ, ಬೆಳ್ಳಿ ಹೀಗೆ ಎಲ್ಲಾ ಖರ್ಚುಗಳು ಹೆಚ್ಚಾಗಿದೆ. ಖರ್ಚುಗಳು ಹೆಚ್ಚಾದಂತೆ ಎಲ್ಲವೂ ದುಬಾರಿಯೆಂಬ ಭಾವನೆ ಎಲ್ಲರಿಗೂ ವ್ಯಕ್ತವಾಗುತ್ತದೆ. ಅದೇ ಪರಿಸ್ಥಿತಿ ಇದೀಗ ದೇಶದಲ್ಲಿ ಕ್ರಮೇಣ ನಿರ್ಮಾಣವಾಗುತ್ತಿದೆ. ಅತ್ತ ಚಳಿಗಾಲದಲ್ಲೂ ಕೋಳಿ ಮಾಂಸ, ಮೊಟ್ಟೆ (Chicken Meat, Egg) ಬೆಲೆ ಜನರಿಗೆ ಬಿಸಿ ಮುಟ್ಟಿಸಿದಂತಿದೆ.

ಹೌದು, ಸಾಮಾನ್ಯವಾಗಿ ಚಳಿಗಾಲದಲ್ಲಿ ಕೋಳಿ, ಮೊಟ್ಟೆ ಬೆಲೆ ಇಳಿಕೆಯಾಗುತ್ತದೆ. ಆದ್ರೆ ಈ ಬಾರಿ ತಡೆಯೋಕು ಆಗದ ಚಳಿ ಇದ್ದರೂ, ಮಾಂಸ ಹಾಗೂ ಮೊಟ್ಟೆ ಬೆಲೆ ಏರಿಕೆ ಕಂಡಿದೆ. ಮೊಟ್ಟೆ ಉತ್ಪಾದನಾ ಪ್ರಮಾಣ ಕೂಡಾ ಇಳಿಕೆಯಾಗಿದ್ದು, ಕೋಳಿಗಳಿಗೂ ಚಳಿ ತಟ್ಟಿದೆ. ಅದೇ ಕಾರಣದಿಂದ ಇದೀಗ ಕೋಳಿ ಮಾಂಸ, ಕೋಳಿ ಮೊಟ್ಟೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ದುಬಾರಿಯಾಯ್ತು ಕೋಳಿ, ಮೊಟ್ಟೆ!
ಒಂದು ಕಾಲದಲ್ಲಿ 150-170 ರೂ.ಗೆ ಕೋಳಿ ಮಾಂಸ ಇಂದು 300 ರೂ.ಗೆ ತಲುಪಿದೆ. 5-6 ರೂ. ಇದ್ದ ಕೋಳಿ ಮೊಟ್ಟೆ ದರ ಇಂದು 8 ರೂ.ಗೆ ತಲುಪಿದೆ. ಇದು ಮೂರು ತಿಂಗಳ ಹಿಂದಲ್ಲ, ಕೇವಲ ಒಂದೇ ತಿಂಗಳಲ್ಲಿ ಕಂಡ ಬೆಳವಣಿಗೆ. ಸದ್ಯ ಈ ಬೆಲೆ ಏರಿಕೆಗೆ ಕಾರಣ ಚಳಿ ವಾತಾವರಣ ಎಂದು ಹೇಳಲಾಗಿದೆ. ಫಾರಂಗಳಲ್ಲಿ ವಿಪರೀತ ಚಳಿಯಿಂದಾಗಿ ಕೋಳಿಗಳು ತತ್ತರಿಸಿ ಹೋಗಿದೆ. ಅಲ್ಲದೇ ಇದರಿಂದ ಮೊಟ್ಟೆ ಉತ್ಪಾದನಾ ಪ್ರಮಾಣ ಕೂಡಾ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ದಿಢೀರ್ ಏರಿಕೆಗೆ ಕಾರಣವೇನು?
ಸಾಮಾನ್ಯವಾಗಿ ತಿಂಗಳಿಗೆ 28 ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು, ಸದ್ಯ ಚಳಿ ವಾತಾವರಣದಿಂದ 22 ರಿಂದ 24 ಮೊಟ್ಟೆಗಳನ್ನು ಇಡುತ್ತಿದೆ ಎಂದು ವರದಿಯಾಗಿದೆ. ಇನ್ನು 2.2 ಕೆಜಿ ತೂಕ ಬರುತ್ತಿದ್ದ ಕೋಳಿಗಳು, ಸದ್ಯ ಚಳಿ ಪ್ರಭಾವದಿಂದಾಗಿ 1.8 ಕೆಜಿ ತೂಕಕ್ಕೆ ಬರುತ್ತಿದೆ. ಇದರಿಂದ ಮಾರಾಟಗಾರರ ಮೇಲೂ ಪರಿಣಾಮ ಬೀರುತ್ತಿದೆ. ಅದೇ ಕಾರಣದಿಂದ ಪರಿಸ್ಥಿತಿಯನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡಿದೆ ಎಂದು ವರದಿಯಾಗಿದೆ. ಚಳಿ ಹೆಚ್ಚಾಗುತ್ತಿದ್ದಂತೆ, ಮಾಂಸ, ಮೊಟ್ಟೆ ತಿನ್ನುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕ ಸದ್ಯ ಉತ್ಪಾದನೆ ಸಿಗದ ಕಾರಣ ಈ ಬೆಲೆ ಏರಿಕೆಗೆ ಮುಂದಾಗಿದೆ.
ತೀವ್ರ ಚಳಿ ವಾತಾವರಣ:
ರಾಜ್ಯದಲ್ಲಿ ಇತ್ತೀಚೆಗೆ ಚಳಿ ತೀವ್ರವಾಗಿದೆ. ಇದರಿಂದ ಕೋಳಿಗಳ ಬೆಳವಣಿಗೆಯಲ್ಲೂ ನಿಧಾನವಾಗುತ್ತಿದೆ, ತೂಕ ಕಡಿಮೆಯಾಗುತ್ತಿದೆ. ಅಲ್ಲದೇ ಮೊಟ್ಟೆ ಇಡುವುದು ಕೂಡಾ ಕಡಿಮೆಯಾಗಿದೆ. ವಿಪರೀತ ಚಳಿಯಿಂದಾಗಿ ಕೋಳಿಗಲೇ ಫಾರಂಗಳಲ್ಲಿ ನಡುಗುತ್ತಿದೆ ಎಂದು ವರದಿಯಾಗಿದೆ.
ಬೇಡಿಕೆ ಹೆಚ್ಚಳ:
ಚಳಿಗಾಲದಲ್ಲಿ ಸಾಮಾನ್ಯವಾಗಿ ಮಾಂಸ ಸೇವನೆ ಹೆಚ್ಚಾಗುತ್ತದೆ. ಕ್ರಿಸ್ಮಸ್, ನ್ಯೂಇಯರ್ ಪಾರ್ಟಿಯಿಂದಾಗಿ ಮಾಂಸದ ಬೇಡಿಕೆ ಹೆಚ್ಚಾಗಿತ್ತು.
ಪೂರೈಕೆ ಕಡಿಮೆ:
ಚಳಿಯಿಂದ ಕೋಳಿಗಳು ಕೂಡಾ ತತ್ತರಿಸಿ ಹೋಗಿದೆ. ಆದ್ದರಿಂದ ಉತ್ಪಾದನೆಯೂ ಕುಸಿತ ಕಂಡಿದ್ದರಿಂದ, ಮಾರುಕಟ್ಟೆಗೆ ಕೋಳಿ, ಮೊಟ್ಟೆ ಸರಬರಾಜು ಕಡಿಮೆಯಾಗಿದೆ. ಆದ್ದರಿಂದ ಬೇಡಿಕೆ ಪೂರೈಕೆಯಾಗದ ಹಿನ್ನೆಲೆ ಬೆಲೆ ಏರಿಕೆ ಕಂಡಿದೆ.


Click it and Unblock the Notifications