ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಾಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಎಲ್ಲಿ ನಿರ್ಮಾಣವಾಗುತ್ತೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ದಿನ ಹೋದಂತೆ ಸರ್ಕಾರ ಪ್ರಶ್ನೆಗಳ ಸುರಿಮಳೆಯೇ ಕೇಳುತ್ತಿದೆ. ಅಲ್ಲದೇ ಸರ್ಕಾರ ಕೂಡಾ ಎರಡನೇ ಏರ್‌ಪೋರ್ಟ್‌ಗಾಗಿ (Bengaluru 2nd Airport) ನಿರಂತರ ಶ್ರಮಿಸುತ್ತಿದ್ದು, ಈಗಾಗಲೇ ಮೂರು ಸ್ಥಳಗಳನ್ನು ಗುರುತಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (AAI) ನೀಡಿದೆ. ಇತ್ತೀಚೆಗಷ್ಟೇ ಟೆಕ್ ಸಮ್ಮಿಟ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), 2ನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಿದ್ಧತೆ ನಡೆಸಿದೆ ಎಂದು ಹೇಳಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಹೌದು, ಡಿಕೆಶಿ ಎರಡನೇ ವಿಮಾನ ನಿಲ್ದಾಣದ ಬಗ್ಗೆ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಕೈಗಾರಿಕಾ ಸಚಿವ ಈ ಬಗ್ಗೆ ಮಾತನಾಡಿದ್ದು, ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಗೊಂದಲಕ್ಕೆ ತೆರೆ ಎಳೆದ ಎಂ.ಬಿ.ಪಾಟೀಲ್!
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ನಿರ್ಮಾಣದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಳೆದ ವಾರ, ಬೆಂಗಳೂರು ದಕ್ಷಿಣ ಭಾಗದಲ್ಲಿ ಸ್ಥಾಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ್ದರು. ಆದರೆ, ಡಿಕೆಶಿ ಹೇಳಿಕೆ ಬೆನ್ನಲ್ಲೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು "ಅಂತಹ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
ಎಂ.ಬಿ. ಪಾಟೀಲ್ ಹೇಳಿದ್ದೇನು?
ಮಾಧ್ಯಮದ ಜೊತೆ ಮಾತನಾಡಿದ ಸಚಿವ ಪಾಟೀಲ್ ಅವರು, ಪ್ರಸ್ತುತ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಕನಕಪುರ ರಸ್ತೆಯ ಸಮೀಪದ ಸೋಮನಹಳ್ಳಿ ಮತ್ತು ಚೂಡಹಳ್ಳಿ ಬಳಿಯ ಎರಡು ಭೂಮಿಗಳು, ಹಾಗೂ ನೆಲಮಂಗಲದ ಬಳಿಯ ಕುಣಿಗಲ್ ರಸ್ತೆಯೊಂದನ್ನು ಇದಕ್ಕಾಗಿ ಗುರುತಿಸಲಾಗಿದೆ.
"ಉಪಮುಖ್ಯಮಂತ್ರಿಗಳು ಮಾತಿನ ಸುಳಿಯಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಮಾತ್ರ ಹೇಳಿದ್ದಾರೆ. ಪ್ರಸ್ತುತ ಯಾವುದೇ ನಿರ್ದಿಷ್ಟ ಸ್ಥಳದ ಬಗ್ಗೆ ನಿರ್ಧಾರಕ್ಕೆ ಬಂದಿಲ್ಲ. ಸ್ಥಳವನ್ನು ಅಂತಿಮಗೊಳಿಸುವ ಮೊದಲು ಹಲವಾರು ಪ್ರಕ್ರಿಯೆಗಳನ್ನು ಸಂಪೂರ್ಣಗೊಳಿಸಬೇಕು" ಎಂದು ಪಾಟೀಲ್ ಹೇಳಿದ್ದಾರೆ.
ಸ್ಥಳ ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸುವುದಕ್ಕಾಗಿ, ಸರ್ಕಾರ ಶೀಘ್ರದಲ್ಲೇ ಸಲಹಾ ಸಂಸ್ಥೆಗಳಿಗೆ ಟೆಂಡರ್ ಆಹ್ವಾನಿಸಲಿದೆ. ಈ ತಿಂಗಳ ಆರಂಭದಲ್ಲಿ ಭಾರತೀಯ ವಿಮಾನಯಾನ ಪ್ರಾಧಿಕಾರ (AAI) ಹೇಳಿರುವ ಕೆಲವು ಪ್ರಕ್ರಿಯೆಗಳನ್ನು ಸಲಹಾ ಸಂಸ್ಥೆಗಳು ಮುಗಿಸಲಿದೆ ಎಂದು ಹೇಳಿದರು.
AAI ವರದಿಯಲ್ಲೇನಿದೆ?
ಎಎಐ ವರದಿಯು, ಸರ್ಕಾರ ಪರಿಗಣಿಸಿದ ಮೂರು ಸ್ಥಳಗಳಲ್ಲಿ ಭೂಪ್ರದೇಶ ಮತ್ತು ವಾಯುಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದೆ. "ನಾವು ಎರಡು ಟೆಂಡರ್‌ಗಳನ್ನು ಬಿಡುಗಡೆ ಮಾಡುತ್ತೇವೆ. ಮೊದಲ ಟೆಂಡರ್‌ನಲ್ಲಿ ಎಎಐ ವರದಿಯಿಂದ ನಾವು ಕಲಿತ ಅಂಶಗಳ ಆಧಾರದ ಮೇಲೆ ಕೆಲಸ ಕೈಗೊಳ್ಳಲಾಗುತ್ತದೆ" ಎಂದು ಪಾಟೀಲ್ ವಿವರಿಸಿದರು.
"ಸ್ಥಳೀಯ ಸಲಹಾ ಸಂಸ್ಥೆಯೊಂದನ್ನು ನೇಮಿಸಿಕೊಂಡು ಕಾಮಗಾರಿ ಮತ್ತು ಸ್ಥಳದ ಅನುಕೂಲತೆಯ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುತ್ತೇವೆ. ಎಲ್ಲಾ ಅಗತ್ಯ ಅನುಮತಿಗಳನ್ನು, ಪ್ರಯಾಣಿಕರ ದಟ್ಟಣೆ ಮತ್ತು ಇತರ ಸೂಕ್ಷ್ಮ ವಿಷಯಗಳನ್ನು ಅಲ್ಲಿ ಪರಿಶೀಲಿಸುತ್ತೇವೆ" ಎಂದು ಹೇಳಿದರು.
"ಆ ನಂತರ ಈ ವರದಿಯನ್ನು ಮುಖ್ಯಮಂತ್ರಿ ಮತ್ತು ರಾಜ್ಯ ಸಚಿವ ಸಂಪುಟಕ್ಕೆ ಸಲ್ಲಿಸಲಾಗುವುದು. ನಂತರ ಅವರು ಸ್ಥಳವನ್ನು ಅಂತಿಮಗೊಳಿಸುತ್ತಾರೆ. ಅದರ ನಂತರ, ವಿನ್ಯಾಸದ ಮೇಲೆ ಹೆಚ್ಚು ಗಮನಹರಿಸುವ ಎರಡನೇ ಟೆಂಡರ್ ಅನ್ನು ಹೊರಡಿಸಲಾಗುತ್ತದೆ" ಎಂದು ಪಾಟೀಲ್ ತಿಳಿಸಿದ್ದಾರೆ.


Click it and Unblock the Notifications