ಬೆಂಗಳೂರು: ಕಾಂಗ್ರೆಸ್ ಪಕ್ಷ (Congress) ಚುನಾವಣಾ ಪ್ರಚಾರಕ್ಕಾಗಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡಾ ಒಂದು. "ಗೃಹಲಕ್ಷ್ಮಿ ಯೋಜನೆ" (Gruhalakshmi Scheme) ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ರಾಜ್ಯದ ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆ ಇದಾಗಿದೆ. ಇನ್ನು ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತದೆ. ಗೃಹಲಕ್ಷ್ಮಿ ಯೋಜನೆ ಜೂನ್ 2023 ರಲ್ಲಿ ಜಾರಿಗೆ ಬಂದಿದೆ. ಆದರೆ ಆರಂಭದಲ್ಲಿ ಸರಾಗವಾಗಿ ಹಣ ಜಮಾ ಆಗುತ್ತಿತ್ತು. ಆದ್ರೆ ಇತ್ತೀಚೆಗೆ ಕೆಲವು ತಿಂಗಳ ಹಣ ಬಾಕಿ ಇರುವುದರಿಂದ ಭಾರೀ ಚರ್ಚೆಗೆ ಗುರಿಯಾಗಿದೆ.

ಗೃಹಲಕ್ಷ್ಮಿ ಯೋಜನೆ ಮೂಲಕ ಒಂದು ಮನೆಯ ಒಬ್ಬ ಮಹಿಳೆಗೆ 2000 ರೂ. ಹಣವನ್ನು ನೀಡಲಾಗುತ್ತದೆ. ಆದ್ರೆ ಈ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಜಮಾ ಆಗಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಅಲ್ಲದೇ ಈ ಬಗ್ಗೆ ಕಳೆದ ಸದನದಲ್ಲೂ ಭಾರೀ ಚರ್ಚೆಯಾಗಿತ್ತು. ಇದೀಗ ಈ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಂಚಿಕೊಂಡಿದ್ದಾರೆ.
ಯಾವಾಗ ಬರುತ್ತೆ ಬಾಕಿ ಹಣ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. 2025ರಲ್ಲಿ ಹಲವಾರು ಅನರ್ಹ ರೇಷನ್ ಕಾರ್ಡ್ ರದ್ದಾದ ಕಾರಣ ಈ ವಿಳಂಬಕ್ಕೆ ಕಾರಣವಾಗಿದೆ. ಆಹಾರ ಇಲಾಖೆಯಿಂದ ವರದಿ ಬಂದ ತಕ್ಷಣ ಎಲ್ಲರಿಗೂ ಬಾಕಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
ಇನ್ನು ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ಬಗಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಹಣಕಾಸು ಇಲಾಖೆಯವರು ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ವಿತರಿಸಲಾಗುತ್ತದೆ ಎಂದು ಹೇಳಿದರು. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಾಕಿ ಉಳಿದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇವೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿಗಳು ಕೂಡಾ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಹಣ ಬಿಡುಗಡೆಯಾಗದಿರಲಿ ಕಾರಣವೇನು?
ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಎರಡು ತಿಂಗಳು ಬಿಡುಗಡೆಯಾಗದಿರಲು ಕಾರಣ ವಿವರಿಸಿದ ಸಚಿವೆ, ರೇಷನ್ ಕಾರ್ಡ್ ಪರಿಷ್ಕರಣೆ, ರೇಷನ್ ಕಾರ್ಡ್ ರದ್ದಾದ ಕಾರಣ ಹಣ ಜಮಾ ಆಗಿಲ್ಲ. ಆಹಾರ ಇಲಾಖೆ ಹೊಸ ಡೇಟಾ ಬಿಡುಗಡೆ ಮಾಡಿದ ನಂತರ, ಎಲ್ಲರಿಗೂ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಿದರು. ರೇಷನ್ ಕಾರ್ಡ್ ಆಧಾರದಿಂದ ಇದುವರೆಗೆ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗುತ್ತಿದೆ. ಆದ್ದರಿಂದ ಅನರ್ಹ ರೇಷನ್ ಕಾರ್ಡ್ ರದ್ದಾಗಿರುವ ಹಿನ್ನೆಲೆ, ಕೆಲವರಿಗೆ ಹಣ ಹೋಲ್ಡ್ ಆಗಿರಬಹುದು.


Click it and Unblock the Notifications