ಬೆಂಗಳೂರು, ಮೇ 15: ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಝೆರೋಧಾ ಮುಖ್ಯಸ್ಥ, ಕರ್ನಾಟಕ ಮೂಲದ ನಿಖಿಲ್ ಕಾಮತ್ ಕೂಡ ಇದ್ದಾರೆ. ಹತ್ತು ವರ್ಷಗಳ ಹಿಂದೆ ಷೇರು ಟ್ರೇಡಿಂಗ್‌ಗಾಗಿ ಅತ್ಯಾಧುನಿಕ ತಾಂತ್ರಿಕ ಫೀಚರ್‌ಗಳೊಂದಿಗೆ ಸ್ಥಾಪಿಸಿದ್ದ ಈ ಸ್ಟಾರ್ಟಪ್ ಇದೀಗ ದೇಶದ ಅತಿದೊಡ್ಡ ಟ್ರೇಡಿಂಗ್ ಆಪ್ ಆಗಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಆದರೆ ಕೋಟ್ಯಾಧಿಪತಿ ನಿಖಿಲ್ ಕಾಮತ್ ಅವರು ಈಗ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ.
ಮದುವೆಯಾಗಿ ಸಂಸಾರದಲ್ಲಿಯೂ ಕೆಲವೊಂದು ಪರಿಸ್ಥಿತಿಗಳನ್ನು ಎದುರಿಸಿರುವ ಕಾಮತ್ ಅವರು ಮಕ್ಕಳಿಗಾಗಿ 18ರಿಂದ 20 ವರ್ಷ ಹಾಳು ಮಾಡಿಕೊಳ್ಳಲು ರೆಡಿಯಿಲ್ಲ ಎಂದು ಹೇಳಿದ್ದಾರೆ. ಕಾಮತ್ ಅವರು ಹೇಳಿರುವ ಈ ಮಾತು ಈಗ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ನಿಖಿಲ್ ಅವರು, ವಯಸ್ಸಾದಾಗ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಹೆಚ್ಚಿನವರು ಮದುವೆ ಮಾಡಿ ಸುಂದರ ಸಂಸಾರವನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ವೃದ್ಧಾಪ್ಯದಲ್ಲಿ ಮಕ್ಕಳು ನಮ್ಮನ್ನು ನೋಡಿಕೊಳ್ಳಬೇಕು ಎನ್ನುವ ಜೀವನದ ಭದ್ರತೆಗಾಗಿ ನಾನು ನನ್ನ ಜೀವನದ 20 ವರ್ಷಗಳನ್ನು ವ್ಯಯಿಸುವುದಕ್ಕೆ ಸಿದ್ಧನಿಲ್ಲ ಎಂಬುದನ್ನು ನೇರವಾಗಿ ಹೇಳಿದ್ದಾರೆ.
ಒಂದು ಜನರೇಷನ್ ಮಕ್ಕಳ ಮೂಲಕ ಮುಂದಿನ ತಲೆಮಾರಾಗಿ ಬೆಳೆಯಬೇಕೆಂಬ ವಂಶಪಾರ್ಯಂಪರೆಯಲ್ಲಿಯೂ ತಮಗೆ ನಂಬಿಕೆ ಇಲ್ಲ ಎಂದಿದ್ದಾರೆ.
ವಾಸ್ತವದಲ್ಲಿ ಸತ್ತ ಮೇಲೆ ನಮ್ಮನ್ನು ಯಾರು ಕೂಡ ನೆನಪಿಟ್ಟುಕೊಳ್ಳುವುದಿಲ್ಲ. ನಾವು ಹೇಗೆ ಇದ್ದೇವೆಯೋ ಅದಕ್ಕಿಂತ ಹೆಚ್ಚಾಗಿ ನಮ್ಮ ಬಗ್ಗೆ ನಾವು ಹೆಚ್ಚಿನ ಮಹತ್ವದ ವ್ಯಕ್ತಿ ಅಂದುಕೊಂಡಿರುತ್ತೇವೆ. ಆದರೆ, ಹುಟ್ಟಿದ ನಾವೆಲ್ಲರೂ ಒಂದಲ್ಲ ಒಂದು ದಿನ ಈ ಭೂಮಿ ಮೇಲಿನ ಪ್ರಾಣಿಗಳಂತೆ ಸತ್ತು ಹೋಗುತ್ತೇವೆ. ಆದರೆ, ಸತ್ತ ಮೇಲೆ ಯಾರನ್ನು ಯಾರು ಕೂಡ ನೆನಪಿಸಿಕೊಳ್ಳುವುದಿಲ್ಲ. ಇದು ವಾಸ್ತವ ಜೀವನ ಎನ್ನುತ್ತಾರೆ ಕಾಮತ್.
ಸತ್ತ ಮೇಲೆ ನೆನಪಿಟ್ಟುಕೊಳ್ಳಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ನಾವು ಹೇಗಿರುತ್ತೇವೆಯೋ ಅದೇ ರೀತಿ ಚೆನ್ನಾಗಿ ಬದುಕಬೇಕು. ಬದುಕಿನಲ್ಲಿ ನಾವು ಯಾರನ್ನು ಭೇಟಿಯಾಗುತ್ತೇವೆಯೋ ಅವರೊಂದಿಗೆ ಚೆನ್ನಾಗಿ ಇರಬೇಕು ಎನ್ನುತ್ತಾರೆ.
ಈ ಹಿಂದೆ ಕೂಡ ನಿಖಿಲ್ ಕಾಮತ್ ಅವರು ಸಾವಿನ ಬಗ್ಗೆ ಮಾತನಾಡಿದ್ದರು. ನನ್ನ ಪ್ರಕಾರ ಪ್ರತಿಯೊಬ್ಬರು ಕೂಡ ಸಾವಿನ ಬಗ್ಗೆ ಅರ್ಥಮಾಡಿಕೊಳ್ಳಬೇಕು. ನನಗೆ 37 ವರ್ಷ. ಭಾರತದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಜೀವಿತಾವಧಿ 72 ವರ್ಷ. ಇನ್ನು ನನಗೆ 35 ವರ್ಷಗಳಷ್ಟೇ ಬಾಕಿ ಉಳಿದಿದೆ. ಹೀಗಿರುವಾಗ, ಹಣವನ್ನು ಬ್ಯಾಂಕ್‌ನಲ್ಲಿ ಕೂಡಿಡುವುದರಲ್ಲಿ ಅರ್ಥವಿಲ್ಲ. ಹೀಗಾಗಿ, ನಾನು ಅಂದುಕೊಂಡಿರುವುದಕ್ಕೆ ಈ ಹಣವನ್ನು ಖರ್ಚು ಮಾಡಬೇಕು. ಹೀಗಾಗಿ, ನಾನು ಗಳಿಸಿದ ಹಾಗೂ ಮುಂದೆ ಗಳಿಸುವ ಹಣವನ್ನು ಬ್ಯಾಂಕ್ ಅಥವಾ ಬ್ಯಾಂಕ್‌ನಂಥ ಸಂಸ್ಥೆಗೆ ನೀಡದೆ ಅದರಿಂದ ನನಗೆ ಬೇಕಾಗಿರುವುದನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.


Click it and Unblock the Notifications