ಹಳ್ಳಿಗಳು ಅಂದಾಕ್ಷಣ ಕಚ್ಚಾ ಮನೆಗಳು, ಧೂಳಿನ ರಸ್ತೆಗಳು, ಹಸು- ಎಮ್ಮೆಗಳು ಹಾಗೂ ಕೃಷಿ ಭೂಮಿ... ಇಂಥದ್ದೊಂದು ಚಿತ್ರ ಕಣ್ಣೆದುರು ಸುಳಿಯುತ್ತದೆ. ಆದರೆ ಭಾರತದಲ್ಲಿ ಇರುವ ಈ ಹಳ್ಳಿ ಯಾವ ನಗರಕ್ಕೂ ಕಡಿಮೆ ಇಲ್ಲ. ಈ ಹಳ್ಳಿಯ ಬೀದಿಗಳಲ್ಲಿ ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯು ಕಂಪೆನಿ ಕಾರುಗಳು ಸರ್ವೇ ಸಾಮಾನ್ಯ.
ಈಗ ಹೇಳುತ್ತಿರುವುದು ಗುಜರಾತ್ ರಾಜ್ಯದ ಧರ್ಮಜ್ ಹಳ್ಳಿ ಬಗ್ಗೆ. ಇಲ್ಲಿ ಹಳ್ಳಿ ಹಾಗೂ ನಗರ ಬದುಕು ಎರಡೂ ಬಗೆಯದ್ದನ್ನು ನಡೆಸುವ ಜನರಿದ್ದಾರೆ. ಈ ಹಳ್ಳಿಯನ್ನು ನೋಡಿದಾಕ್ಷಣ ಕಣ್ಣಿಗೆ ಕಾಣಿಸುವಂಥದ್ದು ಇಲ್ಲಿನ ಶ್ರೀಮಂತಿಕೆ. ಸರ್ಕಾರದ ಯಾವ ನೆರವು ಸಹ ಪಡೆಯದೆ ಈ ಹಳ್ಳಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ.
ಧರ್ಮಜ್ ಹಳ್ಳಿಯವರು ಸಾಕಷ್ಟು ಮಂದಿ ವಿದೇಶಗಳಲ್ಲಿ ವಾಸವಿದ್ದು, ತಮ್ಮ ಹಳ್ಳಿಗೆ ಹಣ ಕಳುಹಿಸುತ್ತಾರೆ. ಅಂದ ಹಾಗೆ ಈ ಹಳ್ಳಿ ಬಗ್ಗೆ ಮಾಹಿತಿ ಒಳಗೊಂಡ ಒಂದು ವೆಬ್ ಸೈಟ್ ಇದೆ. ಹಳ್ಳಿಗರು ಹೇಳುವ ಪ್ರಕಾರ, ಇಲ್ಲಿನ ಕನಿಷ್ಠ ಸಾವಿರದೈನೂರು ಕುಟುಂಬಗಳು ಯು.ಕೆ.ನಲ್ಲಿವೆ. ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ಕೆನಡಾದಲ್ಲಿದ್ದರೆ, ಇನ್ನೂರು ಕುಟುಂಬ ಯು. ಎಸ್. ನಲ್ಲಿದೆ.

ಧರ್ಮಜ್ ನ ಪ್ರತಿ ಕುಟುಂಬದಿಂದ ಸರಾಸರಿ ಐದು ಮಂದಿ ವಿದೇಶದಲ್ಲಿ ವಾಸವಿದ್ದಾರೆ. ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತದೆ. ಒಳಚರಂಡಿ ವ್ಯವಸ್ಥೆ, ಉತ್ತಮ ಡಾಂಬರು ರಸ್ತೆ, ಬೀದಿ ದೀಪಗಳು ಹೀಗೆ ಎಲ್ಲ ವ್ಯವಸ್ಥೆ ಇವೆ. ಈ ಗ್ರಾಮದವರು ಮಾಡಿರುವ ಠೇವಣಿ ಮೊತ್ತವೇ ಒಂದು ಸಾವಿರ ಕೋಟಿಗೂ ಹೆಚ್ಚಿದೆ.
ಇಲ್ಲಿನ ಜನರು ತಮ್ಮ ಹಣವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲೇ ಇಡಲು ಬಯಸುತ್ತಾರೆ. ಹಾಗೆ ಇಡುತ್ತಾ ಬಂದ ಠೇವಣಿ ಮೊತ್ತ ಒಂದು ಸಾವಿರ ಕೋಟಿ ದಾಟಿದೆ. ಬ್ರಿಟನ್, ಯು.ಎಸ್., ನ್ಯೂಜಿಲ್ಯಾಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತಿತರ ಕಡೆಗಳಲ್ಲಿ ಈ ಗ್ರಾಮದ ಮೂರು ಸಾವಿರ ಕುಟುಂಬದ ಸದಸ್ಯರು ವಾಸವಿದ್ದಾರೆ.


Click it and Unblock the Notifications