ಆ ವ್ಯಕ್ತಿಯ ಹೆಸರು ಬಾವಗುತ್ತು ರಘುರಾಮ್ ಶೆಟ್ಟಿ ಅಲಿಯಾಸ್ ಬಿ.ಆರ್. ಶೆಟ್ಟಿ. ಉಡುಪಿ ಜಿಲ್ಲೆಯ ಕಾಪುವಿನಿಂದ 1970ರ ದಶಕದಲ್ಲಿ 8 ಅಮೆರಿಕನ್ ಡಾಲರ್ ನೊಂದಿಗೆ ಯುಎಇಗೆ ಹೊರಟ ಸಾಮಾನ್ಯ ವ್ಯಕ್ತಿ ಶೆಟ್ಟಿ 2018ರ ಹೊತ್ತಿಗೆ 420 ಕೋಟಿ ಅಮೆರಿಕನ್ ಡಾಲರ್ ಆಸ್ತಿ ಹೊಂದಿದ್ದರು. ಇದೀಗ ಬಂದಿರುವ ಸುದ್ದಿಯ ಪ್ರಕಾರ, ಬಿ.ಆರ್. ಶೆಟ್ಟಿ ಅವರ Finablr Plc ಕಂಪೆನಿ 1 ಡಾಲರ್ ಗೆ ಮಾರಾಟ ಆಗುತ್ತಿದೆ.
ಯುಎಇ ಹಾಗೂ ಇಸ್ರೇಲ್ ನ ಎರಡು ಸಂಸ್ಥೆಗಳು ಒಟ್ಟಾಗಿ ಒಂದು ಅಮೆರಿಕನ್ ಡಾಲರ್ ಗೆ (ಇವತ್ತಿನ ಲೆಕ್ಕಕ್ಕೆ 73.52 ರುಪಾಯಿ) ಖರೀದಿಸಲಿವೆ. ಹಗರಣದಲ್ಲಿ ತೋಯ್ದು ತೊಪ್ಪೆಯಾದ Finablr Plc ಕಂಪೆನಿ ಉಳಿಸುವುದಕ್ಕೆ ಕಂಡುಕೊಂಡಿರುವ ಮಾರ್ಗ ಇದು. 77 ವರ್ಷದ ಶೆಟ್ಟರ ಇಮೇಜ್ ಗೆ ಭರ್ತಿ ಪೆಟ್ಟು ಬಿದ್ದಿದೆ.
ಅಂದ ಹಾಗೆ ಬಿ.ಆರ್. ಶೆಟ್ಟರು ಯುಎಇಯಲ್ಲಿ ನೆಲೆಗೊಂಡಿದ್ದರು. ಅವರ ಬಳಿ ರೋಲ್ಸ್ ರಾಯ್ಸ್ ಕಾರುಗಳ ಹಿಂಡು, ಖಾಸಗಿ ವಿಮಾನ, ದುಬೈನ ಬುರ್ಜ್ ಖಲೀಫಾದಲ್ಲಿ ಎರಡು ಅಂತಸ್ತು ಖರೀದಿಸಿದ್ದರು. ಇಂಥ ಬಿ.ಆರ್. ಶೆಟ್ಟಿ ಸಾವಿರ ಕೋಟಿ ರುಪಾಯಿಯ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು. ಇಡೀ ಭಾರತ ಆ ಕ್ಷಣದಲ್ಲಿ, ಯಾರಪ್ಪಾ ಇದು ಬಿ.ಆರ್. ಶೆಟ್ಟಿ ಎಂದು ಗೂಗಲ್ ಮಾಡುವಂತಾಯಿತು.

ಆದರೆ, ಈಗ ಪರಿಸ್ಥಿತಿ ಏನಾಗಿದೆ ನೋಡಿ, ಕಳೆದ ತಿಂಗಳು ನವೆಂಬರ್ ನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇಗೆ ಹೊರಟಿದ್ದ ಬಿ.ಆರ್. ಶೆಟ್ಟಿ ಅವರನ್ನು ತಡೆಯಲಾಯಿತು. ಶೆಟ್ಟರ ಪತ್ನಿ ಮಾತ್ರ ಯುಎಇಗೆ ಹೋದರು. ಬಿ.ಆರ್. ಶೆಟ್ಟಿ ಅವರಿಗೆ ಯುಎಇ, ಭಾರತ ಎಲ್ಲ ಕಡೆ ಸಾಲ ಇದೆ.
ಬಗೆಹರಿಸುವುದಕ್ಕೆ ಸಮಸ್ಯೆಯೇ ಇಲ್ಲದಿದ್ದರೆ ದಿನವೇ ಬಹಳ ಬೇಸರ ಎಂದೆನ್ನುತ್ತಿದ್ದ ಬಿ.ಆರ್. ಶೆಟ್ಟಿ ಅವರಿಗೆ ಹಣಕಾಸು ಅವ್ಯವಹಾರದ ಆರೋಪಗಳು ಸಾಲು ಸಾಲಾಗಿ ಮೆತ್ತಿಕೊಂಡಿವೆ. ಶೆಟ್ಟರಿಗೆ ಸೇರಿದ Finablr Plc ಕಳೆದ ಡಿಸೆಂಬರ್ ನಲ್ಲಿ 200 ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿತ್ತು. ಈ ವರ್ಷದ ಏಪ್ರಿಲ್ ನಲ್ಲಿ ಅದರ ಬಹಿರಂಗಪಡಿಸದ 100 ಕೋಟಿ ಅಮೆರಿಕನ್ ಡಾಲರ್ ಸಾಲ ವರದಿ ಆಗಿತ್ತು.
ಈಗ ಆ ಕಂಪೆನಿಯನ್ನು ಉಳಿಸುವ ಪ್ರಯತ್ನವಾಗಿಯೇ ಮಾರಾಟ ಪ್ರಕ್ರಿಯೆ ನಡೆದಿದೆ. Finablr ಲಿಮಿಟೆಡ್ ಸಂಪೂರ್ಣ ಇಶ್ಯೂಡ್ ಷೇರು ಬಂಡವಾಳವನ್ನು ಮಾರಾಟ ಮಾಡಲು ಇಸ್ರೇಲ್ ನ ಗ್ಲೋಬಲ್ ಫಿನ್ ಟೆಕ್ ಇನ್ವೆಸ್ಟ್ ಮೆಂಟ್ಸ್ ಹೋಲ್ಡಿಂಗ್ಸ್ (GFIH) ಜತೆಗೆ "ನಿರ್ದಿಷ್ಟ ಒಂಡಂಬಡಿಕೆ"ಗೆ ಬರಲಾಗಿದೆ ಎಂದು ಘೋಷಿಸಲಾಗಿದೆ.


Click it and Unblock the Notifications