ಬಜೆಟ್ ಬಗ್ಗೆ ಸುದ್ದಿ ಬರತೊಡಗಿವೆ. ಚಿನ್ನ ಕಡಿಮೆ ಆಗುತ್ತದೆ, ಕಬ್ಬಿಣ- ಉಕ್ಕಿನ ಬೆಲೆಯಲ್ಲಿ ಕಡಿಮೆ, ಇನ್ಷೂರೆನ್ಸ್ ಕಡಿಮೆ ಹೀಗೆ. ಹಾಗಿದ್ದರೆ ನಾವು ಸಂತೋಷ ಪಡಬಹುದಲ್ಲವಾ? ಅಪರೂಪಕ್ಕೋ ಅಥವಾ ಕನಿಷ್ಠ ವರ್ಷಕ್ಕೆ ಒಮ್ಮೆ ಕೂಡ ಖರೀದಿ ಮಾಡದ ಚಿನ್ನ- ಬೆಳ್ಳಿ, ಕಬ್ಬಿಣವನ್ನು ಕಡಿಮೆ ಮಾಡಿದರೆ ಏನು ಮಾಡೋಣ? ಅತಿ ದೊಡ್ಡ ನಿರೀಕ್ಷೆ ಅಂತ ಇದ್ದದ್ದು ಪೆಟ್ರೋಲ್- ಡೀಸೆಲ್, ಆದಾಯ ತೆರಿಗೆ, ಮೊಬೈಲ್ ಫೋನ್, ಚಾರ್ಜರ್, ಡಿಟಿಎಚ್ ಇಂಥವು.
ಸಾಮಾನ್ಯ ಜನರ ಪಾಲಿಗೆ ಅತಿ ದೊಡ್ಡ ಹೊರೆಯಾಗುವುದು ಪೆಟ್ರೋಲ್- ಡೀಸೆಲ್ ಬೆಲೆಯೇ. ಏಕೆಂದರೆ, ಸಾಗಣೆ ವೆಚ್ಚ ಜಾಸ್ತಿ ಆಗುತ್ತಿದ್ದಂತೆಯೇ ತರಕಾರಿ, ಹಾಲು- ಹಣ್ಣು, ದಿನಬಳಕೆ ಪದಾರ್ಥಗಳು, ಅಕ್ಕಿ- ಬೇಳೆ ಸಾಗಾಟ ದರ, ಬಸ್ ಪ್ರಯಾಣ ದರ, ಕಟ್ಟಡ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಸಾಗಾಟ ದರ ಹೀಗೆ ಎಲ್ಲವೂ ಏರಿಕೆ ಆಗುತ್ತದೆ. ಏಕೆಂದರೆ ಭಾರತದಲ್ಲಿ ಸರಕು ಸಾಗಾಟಕ್ಕೆ ಬಳಕೆ ಆಗುವ ಬಹುತೇಕ ಲಾರಿ- ಟ್ರಕ್ ಮತ್ತಿತರ ವಾಣಿಜ್ಯ ವಾಹನಗಳಿಗೆ ಬಳಸುವುದೇ ಡೀಸೆಲ್.
ಇನ್ನು ಆದಾಯ ತೆರಿಗೆ ವಿಚಾರಕ್ಕೆ ಬರುವುದಾದರೆ, ಈಗಿನ ರೀತಿಯಲ್ಲಿ ಸ್ಲ್ಯಾಬ್ ನಲ್ಲಿ ಬದಲಾವಣೆಯೇ ಮಾಡದೆ ಉಳಿಸಿದ ಉದಾಹರಣೆ ಕಳೆದ ಒಂದು ದಶಕದಲ್ಲಿಯಂತೂ ಸಿಗಲ್ಲ. ಪ್ರತಿಯೊಂದಕ್ಕೂ ಜಿಎಸ್ ಟಿ ಕಟ್ಟಿಸಿಕೊಳ್ಳಲಾಗುತ್ತಿದೆ. ಜತೆಗೆ ಪ್ರತಿ ತಿಂಗಳು ಲಕ್ಷ ಕೋಟಿ ರುಪಾಯಿ ದಾಟುತ್ತಿದೆ ಆದಾಯ. ಅಂಥದ್ದರಲ್ಲಿ ಆದಾಯ ತೆರಿಗೆ ಸ್ಲ್ಯಾಬ್- ದರದಲ್ಲಿ ಯಾವ ಬದಲಾವಣೆಯೂ ಮಾಡದಿರುವುದರ ಹಿಂದಿನ "ಉದಾತ್ತ" ಉದ್ದೇಶ ಏನು ಎಂಬುದು ಗೊತ್ತಾಗಲ್ಲ.

ಕೊರೊನಾ ಕಾರಣಕ್ಕೆ ನಗದು ಹರಿದಾಡಲಿ ಎಂದು ಸರ್ಕಾರದಿಂದ ನಾನಾ ಘೋಷಣೆ ಮಾಡಲಾಯಿತು. ಯಾವಾಗ ಹೀಗೆ ನಗದು ಪ್ರಮಾಣದ ಹರಿದಾಟ ಹೆಚ್ಚಾಗುತ್ತದೋ ತಾನಾಗಿಯೇ ಒಂದಿಷ್ಟು ಪ್ರಮಾಣದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಅದರ ಬೆನ್ನಿಗೇ ಈಗ ಬಜೆಟ್ ನಲ್ಲಿ ಕೃಷಿ ಸೆಸ್ ಎಂದು ಮತ್ತೆ ಪೆಟ್ರೋಲ್- ಡೀಸೆಲ್ ದರ ಏರಿಸುತ್ತಿರುವುದರಿಂದ ಹಣದುಬ್ಬರ ಇನ್ನೂ ಹೆಚ್ಚಾಗಲಿದೆ.
ಈಗಾಗಲೇ ಕರ್ನಾಟಕದಲ್ಲಿ ವಿದ್ಯುತ್ ದರದಲ್ಲಿ ಏರಿಕೆ ಆಗಿದೆ. ಕೇಂದ್ರ ಬಜೆಟ್ ಪ್ರಕಾರ, ವಿದ್ಯುತ್ ದರ ಇಳಿಕೆ ಆಗುತ್ತದಂತೆ. ಅಷ್ಟರ ಮಟ್ಟಿಗೆ ಆ ಬಗ್ಗೆ ಕುತೂಹಲ ಇದ್ದೇ ಇದೆ. ಇನ್ನು ತಾಮ್ರದ ವಸ್ತುಗಳ ಬೆಲೆಯನ್ನು ಇಳಿಕೆ ಮಾಡುವುದರ ನೇರ ಪ್ರಯೋಜನ ಜನ ಸಾಮಾನ್ಯರಿಗೆ ಹೇಗೆ ಆಗಬಹುದು ಕಾದು ನೋಡಬೇಕಾಗಿದೆ.
ಬಹುತೇಕ ಗಮನಿಸಿದರೆ, ನಿತ್ಯ ಬಳಕೆಯ ಪದಾರ್ಥಗಳೇ ಆದ, ಇದುವರೆಗೂ ಶೇ 10ರಷ್ಟು ಇದ್ದ ಉತ್ಪನ್ನಗಳ ಕೃಷಿ ಸೆಸ್ ಅನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬಟಾಣಿ (ಶೇ 40), ಕಾಬೂಲ್ ಕಡಲೆ (ಶೇ 30), ಕಡಲೆ ಬೇಳೆ (ಶೇ 50), ಚಿಕ್ ಪೀಸ್ (ಶೇ 50), ವಿವಿಧ ಧಾನ್ಯಗಳ ಮೇಲಿನ (ಶೇ 20) ಮೇಲಿನ ಸೆಸ್ ಹೆಚ್ಚಳವಾಗಿದೆ. ಅದೇ ರೀತಿ ಸೇಬಿನ ಬೆಲೆಯೂ ಏರಿಕೆ ಆಗಲಿದೆ.
ಸನ್ನಿವೇಶ ಹೀಗಿರುವಾಗ ಈಗಿನ ಬಜೆಟ್ "ಜನ ಸಾಮಾನ್ಯರಿಗೆ ಹೊರೆಯಲ್ಲ" ಎನ್ನುವ ಅದೇ ಪ್ರತಿ ವರ್ಷದ ಬಜೆಟ್ ಬಾಯಿ ಮಾತನ್ನು ನಂಬುವುದು ಹೇಗೆ?


Click it and Unblock the Notifications