ಬೆಂಗಳೂರು, ಏಪ್ರಿಲ್ 30: ಭಾರತದ ಷೇರು ಮಾರುಕಟ್ಟೆ ಈಗ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದ್ದು, ಹೂಡಿಕೆದಾರರ ಪಾಲಿಗೆ ಭರ್ಜರಿ ಲಾಭ ತರುವ ನಿಧಿಯಂತೆ ಆಗಿದೆ. ಅದರಲ್ಲೂ ನಿನ್ನೆ ಒಂದೇ ದಿನದಲ್ಲಿ, ಹೂಡಿಕೆದಾರರು ಗಳಿಸಿದ ಲಾಭ 2.48 ಲಕ್ಷ ಕೋಟಿ ರೂಪಾಯಿ ಎಂದರೆ ನಿಮಗೆ ಆಶ್ಚರ್ಯ ಆಗದೇ ಇರುವುದಿಲ್ಲ.
ಬ್ಯಾಂಕಿಂಗ್, ಮೂಲಸೌಕರ್ಯ ಷೇರು ಖರೀದಿಯ ಹಿನ್ನೆಲೆ ಷೇರು ಸೂಚ್ಯಂಕ ಭರ್ಜರಿ ಏರಿಕೆ ಕಾಣುತ್ತಿವೆ. ಈ ಕಾರಣಕ್ಕೆ ಹೂಡಿಕೆದಾರರ ಸಂಪತ್ತಿಗೆ ಒಂದೇ ದಿನ 2.48 ಲಕ್ಷ ಕೋಟಿ ಸೇರ್ಪಡೆ ಆಗಿದೆ. ಬಿಎಸ್‌ಇ ಕಂಪನಿಗಳ ಒಟ್ಟು ಮೌಲ್ಯ ನಿನ್ನೆಗೆ ₹406 ಲಕ್ಷ ಕೋಟಿ ರೂಪಾಯಿ ದಾಟಿದೆ. ಅಲ್ಲದೆ ಇಂದು ಕೂಡ ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರಿಸುತ್ತಿದೆ. ಹೀಗೆ ಹೂಡಿಕೆದಾರರಿಗೆ ಭರ್ಜರಿ ಲಾಭ ಬರುತ್ತಿದೆ. ನಿನ್ನೆ ಒಂದೇ ದಿನ ಮುಂಬೈ ಷೇರುಪೇಟೆಯ ಸೂಚ್ಯಂಕ ಸೆನ್ಸೆಕ್ಸ್ 941 ಅಂಶ & ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 223 ಅಂಶ ಹೆಚ್ಚಳವಾಗಿದ್ದವು. ಜೊತೆಗೆ, ಇಂದು ಕೂಡ ಅದೇ ಓಟವನ್ನು ಮುಂದುವರಿಸಿದೆ ಷೇರುಪೇಟೆ.

ವಿದೇಶಿ ಹೂಡಿಕೆಯೂ ಹೆಚ್ಚಳ
ಇನ್ನು ಅತಿಹೆಚ್ಚು ಲಾಭ ಗಳಿಸಿರುವ ಷೇರುಗಳು ಯಾವುವು ಎಂದರೆ, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಷೇರುಗಳಿಂದ ಹಿಡಿದು, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಬಜಾಜ್ ಫೈನಾನ್ಸ್ & ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ ಮೇಲೆ ಏರಿದ ಹಿನ್ನೆಲೆಯಲ್ಲಿ ಭರ್ಜರಿ ಲಾಭ ಸಿಕ್ಕಿದೆ. ಇದರ ಜೊತೆಗೆ ಲೋಕಸಭೆ ಚುನಾವಣೆ ಸಮಯದಲ್ಲಿ ಷೇರು ಪೇಟೆಯ ಓಟ ಮುಂದುವರಿದಿದೆ. ಹೀಗಾಗಿ ವಿದೇಶದಿಂದ ಬರುತ್ತಿರುವ ಬಂಡವಾಳ ಕೂಡ ಏರಿಕೆ ಆಗುತ್ತಿದೆ. ಹಾಗೇ ಜಾಗತಿಕ ಮಟ್ಟದಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು, ಹೂಡಿಕೆದಾರರು ಖುಷಿಯಿಂದ ಮುಂದೆ ಬರುತ್ತಿದ್ದಾರೆ.
8 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ!
ಭಾರತದ ಜೊತೆ ಜಗತ್ತಿನ ಪ್ರಮುಖ ಷೇರು ಪೇಟೆಗಳಲ್ಲಿ ಕೂಡ ಉತ್ತಮ ಲಾಭ ಬರುತ್ತಿದ್ದು ಹೂಡಿಕೆ ಮಾಡಿದವರಿಗೆ ಭರ್ಜರಿ ಲಾಭ ಸಿಗುತ್ತಿದೆ. ಐಸಿಐಸಿಐ ಬ್ಯಾಂಕ್‌ನ ಷೇರಿನ ಮೌಲ್ಯವು ನಿನ್ನೆ ಒಂದೇ ದಿನ ಶೇ 5 ರಷ್ಟು ಏರಿಕೆ ಆಗಿತ್ತು. ಇದರಿಂದ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ 36,555 ಕೋಟಿ ರೂಪಾಯಿ ಸೇರ್ಪಡೆ ಆಗಿದೆ. ಈ ಮೂಲಕ ಈಗ, ಐಸಿಐಸಿಐ ಬ್ಯಾಂಕ್‌ನ ಮಾರುಕಟ್ಟೆಯ ಮೌಲ್ಯವು 8.14 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಒಟ್ಟಾರೆ ಈ ಬೆಳವಣಿಗೆ ಭಾರತದ ಷೇರು ಮಾರುಕಟ್ಟೆಯ ಭವಿಷ್ಯದ ಬೆಳವಣಿಗೆಗೆ ಕೂಡ ಪೂರಕ, ಎಂದು ತಜ್ಞರು ಇದೀಗ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications