ಮುಂಬೈ, ಮಾರ್ಚ್ 28: ಕಳೆದ 1 ವಾರದಿಂದಲೂ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಲಾಭ ಮಾಡುತ್ತಿದ್ದಾರೆ ಜನ. ಅದರಲ್ಲೂ ಲೋಕಸಭಾ ಚುನಾವಣೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾದ ಸಮಯದಲ್ಲಿ ಭಾರತದ ಷೇರು ಮಾರುಕಟ್ಟೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇಂದು ಒಂದೇ ದಿನ ಸೆನ್ಸೆಕ್ಸ್ ಏರಿಕೆ ಮತ್ತೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿತ್ತು.
ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಪ್ರಮುಖ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ (BSE Sensex) & ಎನ್ಎಸ್ಇ ನಿಫ್ಟಿ (ನಿಫ್ಟಿ 50 ಎಂದು ಕರೆಯಲಾಗುತ್ತೆ) ದಾಖಲೆಯನ್ನು ಬರೆದಿವೆ. ಬಿಎಸ್ಇ ಸೆನ್ಸೆಕ್ಸ್ ಇಂದು ಗರಿಷ್ಠ 1,000 ಅಂಕ ಏರಿಕೆ ಕಂಡು 74,000ದ ಗಡಿ ದಾಟಿತ್ತು. ಈ ನಡುವೆ ಎನ್ಎಸ್ಇ ನಿಫ್ಟಿ ಅಥವಾ ನಿಫ್ಟಿ-50 300ಕ್ಕೂ ಹೆಚ್ಚು ಅಂಕ ಏರಿಕೆ ಕಂಡು 22,400 ಅಂಕಕ್ಕೂ ತಲುಪಿತ್ತು. ಈ ಮೂಲಕ ಇಂದು ಷೇರು ಪೇಟೆಯಲ್ಲಿ ಗೂಳಿ ಅಬ್ಬರಿಸಿದೆ ಭಾರಿ ಲಾಭ ಮಾಡಿಕೊಂಡಿದ್ದಾರೆ ಹೂಡಿಕೆದಾರರು.

22,500ರ ಗಡಿ ದಾಟುತ್ತಾ ನಿಫ್ಟಿ?
ಭಾರತದ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 50 ನೂರಾನೆ ಆನೆ ಬಲ ಇದ್ದಂತೆ. ಏಕೆಂದರೆ ಷೇರು ಪೇಟೆಯಲ್ಲಿ ಏನೇ ಹೆಚ್ಚು ಅಥವಾ ಕಮ್ಮಿ ಆದರೂ ನಿಫ್ಟಿ 50ಯ ಪರಿಣಾಮವೇ ಹೆಚ್ಚು. ನಿಫ್ಟಿ 50ಯಲ್ಲಿ ಬಲಿಷ್ಠವಾದ ಷೇರು ಸಂಸ್ಥೆ ನೊಂದಾಯಿಸಿಕೊಂಡಿವೆ. ಈ ಕಾರಣಕ್ಕೆ ಇಂದು ನಿಫ್ಟಿ 50 ಭರ್ತಿ 300ಕ್ಕೂ ಹೆಚ್ಚು ಅಂಕ ಏರಿಕೆ ಕಂಡು ಇತಿಹಾಸ ನಿರ್ಮಾಣ ಮಾಡಿತ್ತು. ಕೊನೆಗೆ ಒಂದಷ್ಟು ಅಂಕ ಕುಸಿತ ಕಂಡರೂ ಅಂತಿಮವಾಗಿ 203 ಅಂಕ ಏರಿಕೆ ಮೂಲಕ 22,326ಕ್ಕೆ ತನ್ನ ದಿನದ ವಹಿವಾಟು ಮುಗಿಸಿತು ನಿಫ್ಟಿ-50.
ಲೋಕಸಭೆ ಚುನಾವಣೆ ಪ್ರಭಾವ?
ಸಾಮಾನ್ಯವಾಗಿ ಷೇರು ಪೇಟೆ ಮೇಲೆ ಲೋಕಸಭೆ ಚುನಾವಣೆ ಕೂಡ ಪರಿಣಾಮ ಬೀರುತ್ತದೆ ಎಂಬ ಮಾತುಗಳು ಕೂಡ ಇವೆ. ಆದರೆ ಇಂದಿನ ಮಾರುಕಟ್ಟೆ ಏರಿಕೆಗೆ ನಿಖರ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ವಿದೇಶಿ ಷೇರು ಮಾರುಕಟ್ಟೆಗಳು ಈಗ ಭಯದಲ್ಲಿ ಇರುವಾಗ ಭಾರತದ ಷೇರು ಪೇಟೆ ಉತ್ತಮವಾಗಿ ವಹಿವಾಟು ನಡೆಸುತ್ತಿದೆ. ಅಲ್ಲದೆ ಹೂಡಿಕೆ ಮಾಡಿದ ಜನರಿಗೂ ಉತ್ತಮ ಲಾಭವನ್ನೇ ತಂದುಕೊಡುತ್ತಿದೆ. ಹೀಗೆ ವಿದೇಶಿ ಹೂಡಕೆದಾರರು ಕೂಡ ಭಾರತದ ಷೇರು ಮಾರುಕಟ್ಟೆ ಕಡೆಗೆ ಮುಖ ಮಾಡುತ್ತಿದ್ದಾರೆ. ಅಲ್ಲದೆ ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತಿದೆ.
ಭಾರತ ಬಲಿಷ್ಠವಾಗಿ ಬೆಳೆಯುತ್ತಿದೆ ಭಾರತದ ಆರ್ಥಿಕತೆ ಈಗ ಜಗತ್ತಿನ ಟಾಪ್-5 ಆರ್ಥಿಕತೆ ಪೈಕಿ ಒಂದಾಗಿದೆ. ಇನ್ನೇನು ಕೆಲ ವರ್ಷದಲ್ಲಿ ಈ ಸಾಧನೆ ಮತ್ತೊಂದು ಹಂತಕ್ಕೂ ತಲುಪುವ ನಿರೀಕ್ಷೆ ಇದೆ. ಅಲ್ಲದೆ ಭಾರತ ಇನ್ನೇನು ಕೆಲವೇ ವರ್ಷದಲ್ಲಿ ಜಗತ್ತಿನ ಟಾಪ್-3 ಆರ್ಥಿಕತೆ ಹೊಂದಿರುವ ದೇಶಗಳ ಪೈಕಿ ಒಂದಾಗಲಿದೆ ಎನ್ನಲಾಗಿದೆ. ಈ ಮೂಲಕ, ಭಾರತ ಜಗತ್ತಿನ ಗಮನ ಸೆಳೆಯುತ್ತಿದೆ. ಅಲ್ಲದೆ ಹೂಡಿಕೆದಾರರಿಗೆ ಈ ಮೂಲಕ ಲಾಭವೂ ಹೆಚ್ಚಾಗುತ್ತಿದ್ದು, ಅಮೆರಿಕ & ಯುರೋಪ್ ದೇಶಗಳ ಆರ್ಥಿಕತೆ ಸಾಲಿಗೆ ಭಾರತದ ಆರ್ಥಿತೆ ಕೂಡ ಸೇರುತ್ತಿದೆ.


Click it and Unblock the Notifications