ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಬಾಡಿಗೆ ಮನೆಯೊಂದರಲ್ಲಿ, 500 ಮುಖಬೆಲೆಯ ರಾಶಿ ರಾಶಿ ನೋಟುಗಳು ಪತ್ತೆಯಾಗಿವೆ. ಮಂಗಳವಾರ ಸಂಜೆ ದಾಳಿ ನಡೆಸಿದ ಪೊಲೀಸರೇ ಈ ಕಂತೆ ಕಂತೆ ನೋಟುಗಳನ್ನು ಕಂಡು ಗಾಬರಿಯಾಗಿದ್ದಾರೆ. ಏಕೆಂದರೆ ಈ ನೋಟುಗಳು ನಕಲಿಯಲ್ಲ..ಹಾಗಂತ ಅಸಲಿಯೂ ಅಲ್ಲ. RBIನಿಂದ ಮಾನ್ಯತೆ ಪಡೆದಿಲ್ಲ. ಹಾಗಾದ್ರೆ ಈ ನೋಟುಗಳು ಯಾವುವು ಎಂದು ಪೊಲೀಸರೇ ದಂಗಾಗಿದ್ದಾರೆ. ಅಷ್ಟೇ ಅಲ್ಲ ಈ ವಿಚಾರ ರಾಜ್ಯಮಟ್ಟದಲ್ಲಿ ಕುತೂಹಲ ಮೂಡಿಸಿದೆ. 500 ರೂ. ಮುಖಬೆಲೆಯ ನೋಟುಗಳ ಬಂಡಲ್‌ಗಳು ಹಾಗೂ ಹಣ ಎಣಿಸುವ ಯಂತ್ರವೊಂದು ಪತ್ತೆಯಾಗಿದ್ದು, ಸ್ಥಳೀಯರು ಸೇರಿದಂತೆ ಅಧಿಕಾರಿಗಳಿಗೂ ಚಿಂತೆ ಹುಟ್ಟಿಸಿದೆ.

ಒಂದು ಕ್ಷಣ ದಂಗಾಗಿಸಿದ್ದ ನೋಟುಗಳು ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದವು. ಮೊದ ಮೊದಲು ಪರಿಶೀಲನೆ ವೇಳೆ ಅಧಿಕಾರಿಗಳಿಗೆ ತಕ್ಷಣವೇ ಅಸಾಮಾನ್ಯ ಅಂಶಗಳು ಕಂಡುಬಂದವು. ನೋಟುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುದ್ರೆ ಇರಲಿಲ್ಲ, ಯಾವುದೇ ಗವರ್ನರ್ ಸಹಿ ಇಲ್ಲದೇ, ಸರಣಿ ಸಂಖ್ಯೆಗಳೂ ಕಾಣಿಸಲಿಲ್ಲ. ನಕಲಿ ಕರೆನ್ಸಿಯಾಗಿರುವ ಶಂಕೆಗೆ ತೆರೆ ಎಳೆದಂತಾಯಿತು.
ಹೀಗೇ ನೋಡುವಾಗ ನೋಟಿನ ಹಿಂಭಾಗದಲ್ಲಿ ಉಲ್ಲೇಖವಾಗಿದ್ದ ಅಂಶವೇನೆಂದರೆ, "ಚಲನಚಿತ್ರ ಚಿತ್ರೀಕರಣ ಉದ್ದೇಶಗಳಿಗಾಗಿ ಮಾತ್ರ" ಎಂದಿತ್ತು. ಈ ರೀತಿ ಸ್ಪಷ್ಟ ಉಲ್ಲೇಖವಿದ್ದ ಕಾರಣ, ಈ ನೋಟುಗಳು ಕಾನೂನುಬದ್ಧವಾಗಿ ಬಳಕೆಗೆ ಅನುಮತಿಸಲಾಗದ ದೃಶ್ಯಪ್ರಮಾಣ ವಸ್ತುಗಳಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ, ನೋಟುಗಳ ಮೇಲೆ 'Reserve Bank of India' ಎಂಬ ಬದಲಿಗೆ "Reverse Bank of India" ಎಂದು ಮುದ್ರಿಸಲಾಗಿದೆ. ಈ ಮೂಲಕ ನೋಟುಗಳು ಕಾನೂನುಬದ್ಧ ಚಲಾವಣೆಗೆ ಅನರ್ಹವಾಗಿರುವುದು ಸ್ಪಷ್ಟವಾಗಿದೆ. ಮುಖಬೆಲೆಯ ಬದಲು ಕೇವಲ ಸೊನ್ನೆಗಳ ಮುದ್ರಣವಿರುವ ಹೊಳೆಯುವ ಕಾಗದ ಮೇಲಿನ ಈ ನೋಟುಗಳು ತಪ್ಪಾಗಿ ಬಳಕೆಗೆ ಬರುತ್ತಿದೆಯೇ ಎಂಬುದನ್ನು ಪೊಲೀಸರು ಈಗ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.
ಕಾನೂನುಬದ್ಧ ಚಲಾವಣೆಯ ಲಕ್ಷಣಗಳಿಲ್ಲ:
ಇನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಈ ನೋಟುಗಳಲ್ಲಿ ಯಾವುದೇ ಸರಣಿ ಸಂಖ್ಯೆಯೇ ಇಲ್ಲ. ಹಿಂಭಾಗದಲ್ಲಿ ಇದು 'ಚಲನಚಿತ್ರ ಚಿತ್ರೀಕರಣ ಉದ್ದೇಶಗಳಿಗಾಗಿ ಮಾತ್ರ ಎಂಬ ಸ್ಪಷ್ಟ ಉಲ್ಲೇಖವಿದೆ. ಹೀಗಾಗಿ, ಇದು ನಕಲಿ ಕರೆನ್ಸಿಯ ಪರಿಧಿಗೆ ಬರುವುದಿಲ್ಲ. ಆದರೆ, ಇನ್ನೂ ಅಧಿಕೃತ ಪರಿಶೀಲನೆ ನಡೆಯುತ್ತಿದ್ದು, ಯಾವುದೇ ಕಾನೂನು ಉಲ್ಲಂಘನೆಯಿದೆಯೆ ಎಂಬುದು ನಿರ್ಧರಿಸಲಾಗಬೇಕು ಎಂದು ತಿಳಿದುಬಂದಿದೆ..
ವಾಸಸ್ಥನಲ್ಲಿದ್ದ ವ್ಯಕ್ತಿ ವಶಕ್ಕೆ
ದಾಳಿ ಮಾಡಿದ ವೇಳೆ ಆ ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಯನ್ನು, ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ನೋಟುಗಳ ಉದ್ದೇಶ, ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಅಲ್ಲಿ ಸಂಗ್ರಹಿಸಲಾಗಿತ್ತು ಎಂಬ ಎಲ್ಲ ವಿವರಗಳ ಬಗ್ಗೆ ಸದ್ಯವೂ ತನಿಖೆ ನಡೆಯುತ್ತಿದೆ. ಹಣ ಎಣಿಸುವ ಯಂತ್ರವೂ ಸ್ಥಳದಲ್ಲೇ ಪತ್ತೆಯಾಗಿರುವುದು ಈ ಪ್ರಕರಣಕ್ಕೆ ಇನ್ನಷ್ಟು ಗಂಭೀರತೆಯನ್ನು ತರುತ್ತಿದೆ. ಇದರಿಂದಾಗಿ, ಈ ನೋಟುಗಳು ಕೇವಲ ಚಲನಚಿತ್ರ ಶೂಟಿಂಗ್‌ಗಾಗಿ ಬಳಸಲ್ಪಟ್ಟ ವೈಯಕ್ತಿಕ ವಸ್ತುಗಳೆಂದೇ ನಂಬುವುದು ಇಷ್ಟು ಸುಲಭವಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ತನಿಖೆ ಮುಂದುವರಿಕೆ:
ಈ ಘಟನೆಯ ಹಿನ್ನೆಲೆಯಲ್ಲಿ, ನಕಲಿ ಕರೆನ್ಸಿ ವ್ಯಾಪಾರದೊಂದಿಗಿನ ಸಂಬಂಧವಿದೆಯೆ? ಅಥವಾ ಈ ನೋಟುಗಳು ಬೇರೆ ದುಷ್ಕೃತ್ಯಗಳಿಗೆ ಬಳಸಲಾಗುತ್ತಿದ್ದವೆಯೆ? ಎಂಬ ಶಂಕೆಗಳು ಹುಟ್ಟಿವೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಸಿನಿಮಾ ನೋಟುಗಳ ಈ ವಿಚಿತ್ರ ಕಥೆಗೆ ಇನ್ನಷ್ಟು ತಿರುವುಗಳು ಬಾಕಿಯಿದ್ದರೂ, ಪ್ರಸ್ತುತ ಇದು ಒಂದು ಎಚ್ಚರಿಕೆಯಾಗಬೇಕಾದ ಘಟನೆ. ಇನ್ನಷ್ಟು ನಿಖರ ಮಾಹಿತಿ, ಅಧಿಕೃತ ತನಿಖಾ ವರದಿ ಹೊರಬಂದ ನಂತರವೇ ಇಡೀ ಸತ್ಯ ಎಲ್ಲರ ಮುಂದೆ ಬರಲಿದೆ.


Click it and Unblock the Notifications