ಬರ್ಗರ್ ಕಿಂಗ್ ಕಂಪೆನಿಯ ಷೇರು ಲಿಸ್ಟಿಂಗ್ ಆಗಿದ್ದು ಸೋಮವಾರ. ಅಂದರೆ ಇವತ್ತಿಗೆ (ಡಿಸೆಂಬರ್ 17, 2020) ನಾಲ್ಕನೇ ದಿನ. ಅಷ್ಟರಲ್ಲಿ 60 ರುಪಾಯಿಗೆ ವಿತರಣೆ ಆಗಿದ್ದು ಷೇರು ಬಿಎಸ್ ಇ ಸೂಚ್ಯಂಕದಲ್ಲಿ 219 ರುಪಾಯಿ ಮುಟ್ಟಿದೆ. ಬರ್ಗರ್ ಕಿಂಗ್ ಐಪಿಒದಲ್ಲಿ ಒಂದು ಸಾವಿರ ಷೇರು ಸಿಕ್ಕವರ 60,000 ರುಪಾಯಿ ಮೊತ್ತ, ನಾಲ್ಕು ದಿನದ ವಹಿವಾಟಿಗೆ 2,19,000 ರುಪಾಯಿ ಮುಟ್ಟಿದೆ.
265% ಲಾಭ ಕಣ್ರೀ. ಬ್ಯಾಂಕ್ ಗಳಲ್ಲಿ ದುಡ್ಡು ಇಟ್ಟರೆ ಬಹಳ ಸೇಫ್. ಒಂದು ವರ್ಷಕ್ಕೆ ಬಡ್ಡಿ (ಈಗಿನ ಸ್ಥಿತಿಗೆ) 5.5%ನಿಂದ ತೀರಾ ಹೆಚ್ಚೆಂದರೆ 7% ಸಿಗುತ್ತದೆ. ಅಂಥದ್ದರಲ್ಲಿ ಈ ಬರ್ಗರ್ ಕಿಂಗ್ ಷೇರು ಇಷ್ಟು ರಿಟರ್ನ್ಸ್ ನೀಡಿದೆ. ಹಾಗಂತ ಈ ಷೇರು ಖರೀದಿ ಮಾಡಿ ಅಂತ ಶಿಫಾರಸು ಮಾಡೋದು ಈ ವರದಿ ಉದ್ದೇಶ ಅಲ್ಲ. ಇದು ಕೇವಲ ಮಾಹಿತಿ ಮಾತ್ರ.
ಬರ್ಗರ್ ಇಂಡಿಯಾದ ಮಾರುಕಟ್ಟೆ ಮೌಲ್ಯ 8363 ಕೋಟಿ ರುಪಾಯಿಗೆ ತಲುಪಿಕೊಂಡಿದೆ. ಈ ಹಿಂದೆ, 2017ರಲ್ಲಿ ಅಸ್ಟ್ರಾನ್ ಪೇಪರ್ ಅಂಡ್ ಬೋರ್ಡ್ ಮಿಲ್ ಲಿ. ಲಿಸ್ಟಿಂಗ್ ದಿನವೇ 142% ಏರಿಕೆ ಆಗಿತ್ತು. ಆ ನಂತರ ಬರ್ಗರ್ ಇಂಡಿಯಾ ಷೇರಿನದೇ ಅದ್ಭುತ ಪ್ರದರ್ಶನ.

ಕೊರೊನಾ ಲಾಕ್ ಡೌನ್ ನಿರ್ಬಂಧ ತೆರವಾದ ಮೇಲೆ ರೆಸ್ಟೋರೆಂಟ್ ತೆರೆದು, ಒಳ್ಳೆ ವ್ಯವಹಾರ ಆಗುವ ನಿರೀಕ್ಷೆಯಲ್ಲಿ ಬೇಡಿಕೆ ಕುದುರಿಕೊಳ್ಳಬಹುದು ಎಂದು ಹೂಡಿಕೆದಾರರಿದ್ದಾರೆ. ಅಂದ ಹಾಗೆ, ಬರ್ಗರ್ ಕಿಂಗ್ ನ 810 ಕೋಟಿ ರುಪಾಯಿ ಐಪಿಒ ಕಳೆದ ತಿಂಗಳು 156.65 ಪಟ್ಟು ಹೆಚ್ಚು ಬೇಡಿಕೆ ಪಡೆದಿತ್ತು.
ಇನ್ನು ಷೇರು ಲಿಸ್ಟಿಂಗ್ ಆದ ಮೇಲೆ ಇಪ್ಪತ್ತು ಪರ್ಸೆಂಟ್, ಹತ್ತು ಪರ್ಸೆಂಟ್ ಅಂತ ಏರಿಕೆ ಕಾಣುತ್ತಲೇ ಇದೆ. ಗುರುವಾರದಂದು ಹತ್ತು ಪರ್ಸೆಂಟ್ ನಷ್ಟು ಏರಿಕೆ ಕಂಡಿದೆ.


Click it and Unblock the Notifications