ಭಾರತದಲ್ಲಿ ಇನ್ನು ಮುಂದೆ ಹೊಸ ವ್ಯಾಪಾರ ಆರಂಭಿಸುವುದು ಬಲು ಸರಳವಾಗಲಿದೆ. ದಾಖಲೆಗಳ ಪರಿಶೀಲನೆ ಅದೂ, ಇದೂ ಅಂತ ಅಲೆದಾಡುವ ಅಗತ್ಯವೇ ಇರುವುದಿಲ್ಲ. ದೇಶದ ವ್ಯಾಪಾರಿಗಳಿಗೆ ಇಂಥದೊಂದು ಹೊಸ ಹಾಗೂ ಸರಳ ಸೇವೆಯನ್ನು ನೀಡಲು ಸರ್ಕಾರ ಮುಂದಾಗಿದೆ.
ಈ ಮೊದಲು 15 ದಿನ ತೆಗೆದುಕೊಳ್ಳುತ್ತಿದ್ದ ದಾಖಲೆ ಪರಿಶೀಲನೆಯ ಕೆಲಸ ಇನ್ನು ಕೇವಲ ಐದೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅದಕ್ಕಾಗಿ ಈ ಹಿಂದಿದ್ದ ವ್ಯವಸ್ಥೆಗೆ ಸುಧಾರಣೆ ತರಲಾಗಿದೆ. ಹೆಸರು ನೋಂದಣಿ, ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ 6 ಅರ್ಜಿಗಳನ್ನು ಕ್ರೋಡೀಕರಿಸಿ ಎರಡು ಹೊಸ ಅರ್ಜಿಯ ನಮೂನೆಗಳನ್ನು ಪರಿಚಯಿಸಲಾಗಿದೆ. ಸ್ಪೈಸ್ ಪ್ಲಸ್ ಹಾಗೂ ಎಜಿಲ್ ಪ್ರೋ ಎಂಬ ಎರಡು ಅರ್ಜಿಗಳನ್ನು ಭರ್ತಿ ಮಾಡಿದರೆ ಸಾಕು, ಕೇಂದ್ರ ಸರ್ಕಾರದಿಂದ ವ್ಯಾಪಾರಕ್ಕೆ ಅಗತ್ಯ ಅನುಮತಿ ಪಡೆದುಕೊಳ್ಳಬಹುದಾಗಿದೆ.

ಈ ಎರಡು ಅರ್ಜಿಗಳಲ್ಲಿ ಆರು ಅಂಶಗಳ ಬಗ್ಗೆ ಮಾತ್ರ ಮಾಹಿತಿ ಹಾಗೂ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು. ನೂತನ ಅರ್ಜಿಯು ಅಂತರ್ಜಾಲ ಆಧಾರಿತವಾಗಿದ್ದು, ಭರ್ತಿ ಮಾಡಲು ಹೆಚ್ಚು ಉಪಯುಕ್ತವಾಗಿದೆ. ಈ ಅರ್ಜಿಗಳಲ್ಲಿ ಜಿಎಸ್ ಟಿ ಗುರುತಿನ ಸಂಖ್ಯೆ (GSTIN), ಶಾಶ್ವತ ಖಾತೆ ಸಂಖ್ಯೆ(PAN), ತೆರಿಗೆ ಕಡಿತಗೊಳಿಸುವ ಖಾತೆಯ ಸಂಖ್ಯೆ(TAN), ನೌಕರರ ರಾಜ್ಯ ವಿಮಾ ನಿಗಮ(ESIC), ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO), ಮುಖ್ಯಸ್ಥರ ಗುರುತಿನ ಸಂಖ್ಯೆ(DIN) ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ.
ಇತ್ತೀಚಿಗೆ ಸುಲಭ ವ್ಯಾಪಾರ ಆರಂಭ ವಿಧಾನದ ಬಗ್ಗೆ ವಿಶ್ವಬ್ಯಾಂಕ್ ವರದಿಯೊಂದನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ 190 ರಾಷ್ಟ್ರಗಳ ಪೈಕಿ ಭಾರತವು 136ನೇ ಸ್ಥಾನದಲ್ಲಿತ್ತು. ಇಲ್ಲಿ ವ್ಯಕ್ತಿಯೊಬ್ಬ ಹೊಸ ವ್ಯಾಪಾರ ಆರಂಭಿಸಲು ಕನಿಷ್ಠ 18 ದಿನಗಳು ಬೇಕಾಗಿತ್ತು. ಇದನ್ನು ತಗ್ಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಇದೀಗ ಈ ಕ್ರಮವನ್ನು ತೆಗೆದುಕೊಂಡಿದೆ.


Click it and Unblock the Notifications