ಬೆಂಗಳೂರು, ಆಗಸ್ಟ್ 4: ನಷ್ಟದ ಸುಳಿಯಲ್ಲಿ ಸಿಕ್ಕಿ ದೊಡ್ಡ ಸುದ್ದಿಯಾಗಿದ್ದ ಬೈಜುಸ್ ವಿಚಾರ ಈಗ ಮತ್ತೆ ಚರ್ಚೆಗೆ ಬಂದಿದೆ. ಬೈಜುಸ್ ಕಂಪನಿ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸಲ್ಲಿಸಿದ್ದ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ರದ್ದುಪಡಿಸಿದೆ.
ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಬೈಜುಸ್ 158 ಕೋಟಿ ಬಾಕಿ ಉಳಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಬಿಸಿಸಿಐ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಶಾಖೆಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಸ್ವೀಕರಿಸಿದ್ದ ನ್ಯಾಯಮಂಡಳಿ ಕಂಪನಿಯ ಆಸ್ತಿಯನ್ನು ವಶಕ್ಕೆ ಪಡೆದಿತ್ತು. ಆಡಳಿತ ಮಂಡಳಿಯ ನಿರ್ದೇಶಕರನ್ನು ಅಮಾನತುಗೊಳಿಸಿದ್ದರಿಂದ ಬೈಜುಸ್ ಸಂಕಷ್ಟಕ್ಕೆ ಸಿಲುಕಿತ್ತು.

ಹಣಕಾಸಿನ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಬೈಜುಸ್ ಮತ್ತು ಬಿಸಿಸಿಐ ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಒಪ್ಪಿಗೆ ನೀಡಲಾಗಿದೆ. ಎನ್‌ಸಿಎಲ್‌ಟಿ ನೀಡಿದ್ದ ಆದೇಶ ರದ್ದುಪಡಿಸಲಾಗಿದೆ ಎಂದು ಚೆನ್ನೈನ ಮೇಲ್ಮನವಿ ನ್ಯಾಯಮಂಡಳಿಯ ವಿಭಾಗೀಯ ಪೀಠ ಹೇಳಿದೆ. ಈ ಕಾರಣದಿಂದ ಕಂಪನಿಯ ಆಡಳಿತವು ಮತ್ತೆ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಹಿಡಿತಕ್ಕೆ ಸಿಕ್ಕಿದೆ. ಇದು ಕೇವಲ ಕಾನೂನಿನ ಮೂಲಕ ಸಂದಿರುವ ಜಯವಲ್ಲ. ಕಳೆದ ಎರಡು ವರ್ಷಗಳಿಂದ ಬೈಜುಸ್ ಕುಟುಂಬದ ನಿರಂತರ ಪ್ರಯತ್ನಕ್ಕೆ ಸಿಕ್ಕಿರುವ ಜಯ ಎಂದು ರವೀಂದ್ರನ್ ಪ್ರತಿಕ್ರಿಯಿಸಿದ್ದಾರೆ.
ದಿವಾಳಿ ಹಂತಕ್ಕೆ ಬಂದಿದ್ದ ಬೈಜುಸ್:
ಕೊರೋನಾ ಸಂದರ್ಭದಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದ ಬೈಜುಸ್ ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿತ್ತು. ಸರಿಯಾಗಿ ಒಂದು ವರ್ಷದ ಹಿಂದೆ ಕೋಟ್ಯಧಿಪತಿಯಾಗಿದ್ದ ವ್ಯಕ್ತಿ ಬೈಜು ರವೀಂದ್ರನ್ ಆಸ್ತಿ ಶೂನ್ಯಕ್ಕೆ ಇಳಿದಿತ್ತು.
ಕೋವಿಡ್ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಬೈಜುಸ್ ಸಂಸ್ಥೆಯ ಸಂಸ್ಥಾಪಕರು ದಿವಾಳಿ ಅಂಚಿಗೆ ಬಂದು ನಿಂತಿದ್ದರು. ಎರಡು ವರ್ಷದ ಹಿಂದಷ್ಟೇ 22 ಬಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟಪ್ ಎನಿಸಿದ್ದ ಬೈಜುಸ್ ಈಗ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಜತೆಗೆ ದಿವಾಳಿ ಪ್ರಕ್ರಿಯೆಯ ಆತಂಕ ಕಾಡುತ್ತಿತ್ತು.ಸಂಸ್ಥೆ ತನ್ನ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಹೆಣಗಾಡುತ್ತಿತ್ತು. ಲೇ ಆಫ್ ಕ್ರಮ ಸಹ ಕೈಗೊಂಡಿತ್ತು.
ಇಡಿ ವಿಚಾರಣೆ, ಅವ್ಯವಹಾರಗಳಾಗಿರುವ ಆರೋಪ, ಫೆಮಾ ನಿಯಮಗಳ ಉಲ್ಲಂಘನೆ ಆರೋಪ ಸಹ ಸಂಸ್ಥೆಯನ್ನು ಸುತ್ತಿಕೊಂಡಿತ್ತು.. 2022ರಲ್ಲಿ ಬ್ಲ್ಯಾಕ್ರಾಕ್ ಸಂಸ್ಥೆ ಬೈಜುಸ್ ಗೆ 22 ಬಿಲಿಯನ್ ಡಾಲರ್ ವ್ಯಾಲುವೇಶನ್ ನೀಡಿತ್ತು. ಆದರೆ, 2021-22ರ ಹಣಕಾಸು ವರ್ಷದಲ್ಲಿ ಬೈಜುಸ್ 1 ಬಿಲಿಯನ್ ಡಾಲರ್ ನಷ್ಟ ತೋರಿಸಿತ್ತು. ಅದಾದ ಬೆನ್ನಲ್ಲೇ ಬ್ಲ್ಯಾಕ್ರಾಕ್ ಮರುಮೌಲ್ಯಮಾಪನ ಮಾಡಿ ಬೈಜುಸ್ ಮೌಲ್ಯವನ್ನು 1 ಬಿಲಿಯನ್ ಡಾಲರ್ ಗರ ಇಳಿಸಿತ್ತು.ಇದು ಸಹ ಮಾರ್ಕೆಟ್ ವಲಯದಲ್ಲಿದೊಡ್ಡ ಪೆಟ್ಟು ನೀಡಿತ್ತು.
ಮದ್ಯದ ದೊರೆ ಎನಿಸಿಕೊಂಡಿದ್ದ ವಿಜಯ್ ಮಲ್ಯ, ರಿಲಯನ್ಸ್ ನ ಅರ್ಧ ಸಾಮ್ರಾಜ್ಯ ಹೊಂದಿದ್ದ ಅನಿಲ್ ಅಂಬಾನಿ ಕೈ ಖಾಲಿ ಮಾಡಿಕೊಂಡು ಸಾಲಗಾರರಾದ ಉದಾಹರಣೆಗಳು ನಮ್ಮ ಮುಂದೆ ಇವೆ. ಇದೇ ಹಾದಿಗಡ ಬೈಜುಸ್ ಬಂದು ನಿಂತಿತ್ತು. ಆದರೆ ಈಗ ಎನ್ ಸಿಎಲ್ ಟಿ ಬಿಸಿಸಿಐ ಅರ್ಜಿ ರದ್ದು ಮಾಡಿರುವುದು ಒಂದು ಹಂತದ ರಿಲೀಫ್ ನೀಡಿದೆ.


Click it and Unblock the Notifications