ಬೆಂಗಳೂರು, ನ. ೪: ಭಾರತದ ನಂಬರ್ ಒನ್ ಶೈಕ್ಷಣಿಕ ತಂತ್ರಜ್ಞಾನ ಕಂಪನಿ ಎನಿಸಿದ ಬೈಜೂಸ್ ತನ್ನ ಸಾಮಾಜಿಕ ಯೋಜನೆಯೊಂದಕ್ಕೆ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರನ್ನು ಗ್ಲೋಬಲ್ ಬ್ರ್ಯಾಂಡ್ ಅಂಬಾಸಡರ್ ಆಗಿ ಆರಿಸಿಕೊಂಡಿದೆ.
ವಿಶ್ವದ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುವ ಲಿಯೋನೆಲ್ ಮೆಸ್ಸಿ ಅವರು ಬೈಜೂಸ್‌ನ 'ಎಜುಕೇಶನ್ ಫಾರ್ ಆಲ್' ಯೋಜನೆಯ ಚೊಚ್ಚಲ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. 'ಎಜುಕೇಶನ್ ಫಾರ್ ಆಲ್' ಯೋಜನೆ ಮೂಲಕ ಬೈಜೂಸ್ ಪ್ರತಿಯೊಬ್ಬರಿಗೂ ಮೂಲಭೂತ ಮತ್ತು ಸಮಗ್ರ ಶಿಕ್ಷಣ ಒದಗಿಸುವ ಗುರಿ ಹೊಂದಿದೆ. ಬೈಜೂಸ್‌ನ ಸೋಷಿಯಲ್ ಇಂಪ್ಯಾಕ್ಟ್ ವಿಭಾಗದ ಭಾಗವಾಗಿರುವ 'ಎಜುಕೇಶನ್ ಫಾರ್ ಆಲ್'ಗೆ ಮೆಸ್ಸಿಯನ್ನು ಜೋಡಿಸುವ ಮೂಲಕ ಬೈಜೂಸ್ ಜಾಗತಿಕ ಮಟ್ಟದಲ್ಲಿ ದೃಢ ಹೆಜ್ಜೆಗಳನ್ನು ಇಡುವ ಕೆಲಸ ಸುಗಮಗೊಂಡಿದೆ.
ಸರ್ವರಿಗೂ ಶಿಕ್ಷಣ ಕೊಡುವ ಬೈಜೂಸ್‌ನ ಯೋಜನೆಗೆ ಬ್ರ್ಯಾಂಡ್ ಅಂಬಾಸಡರ್ ಆಗಲು ಮೆಸ್ಸಿ ಸಹಿ ಹಾಕಿದ್ದಾರೆ. "ಬೈಜೂಸ್‌ನ ಜಾಗತಿಕ ಹೆಜ್ಜೆಯನ್ನು ಹೆಚ್ಚಲು ಮತ್ತು ಎಲ್ಲರಿಗೂ ಸಮಾನವಾದ, ಕೈಗೆಟುಕುವಂತಹ, ಸುಲಭವಾಗಿ ಶಿಕ್ಷಣ ಸಿಗುವಂತೆ ಮಾಡುವ ನಮ್ಮ ಬದ್ಧತೆಗೆ ಈ ಒಪ್ಪಂದ ಪೂರಕವಾಗಿದೆ" ಎಂದು ಬೈಜೂಸ್ ಸಂಸ್ಥೆ ಹೇಳಿಕೆ ನೀಡಿದೆ.
ಮೆಸ್ಸಿ ಜನಪ್ರಿಯತೆ
ಈಗ ಸಕ್ರಿಯವಾಗಿರುವ ಫುಟ್ಬಾಲಿಗರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಲಯೋನೆಲ್ ಮೆಸ್ಸಿ ಅತ್ಯುತ್ತಮ ಆಟಗಾರರೆಂದು ಪರಿಗಣಿಸಲ್ಪಡುತ್ತಾರೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಕೂಡ ಆಗಿದ್ದಾರೆ. ಜರ್ಮನಿಯ ಫುಟ್ಬಾಲ್ ಲೀಗ್‌ನಲ್ಲಿ ಹಲವು ವರ್ಷ ಆಡಿದ್ದ ಅವರು ಇದೀಗ ಫ್ರಾನ್ಸ್ ಫುಟ್ಬಾಲ್ ಲೀಗ್‌ನಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್ ತಂಡದ ಪರ ಆಡುತ್ತಿದ್ದಾರೆ.
ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿದೆ. ವಿಶ್ವಾದ್ಯಂತ ೩೫೦ ಕೋಟಿ ಜನರು ಫುಟ್ಬಾಲ್ ವೀಕ್ಷಿಸುತ್ತಾರೆ. ಲಿಯೋನೆಲ್ ಮೆಸ್ಸಿಗೆ ಸೋಷಿಯಲ್ ಮೀಡಿಯಾದಲ್ಲಿ ೪೫ ಕೋಟಿ ಫಾಲೋಯರ್‌ಗಳಿದ್ದಾರೆ. ಕತಾರ್‌ನಲ್ಲಿ ಈ ತಿಂಗಳು ಆರಂಭಗೊಳ್ಳುವ ಫೀಫಾ ವಿಶ್ವಕಪ್‌ಗೆ ಬೈಜೂಸ್ ಸಂಸ್ಥೆ ಅಧಿಕೃತ ಸ್ಪಾನ್ಸರ್ ಆಗಿದೆ. ಈಗ ಮೆಸ್ಸಿಯನ್ನು ತನ್ನ ಯೋಜನೆಗೆ ಜೋಡಿಸಿಕೊಳ್ಳುವ ಮೂಲಕ ಬೈಜೂಸ್ ಫುಟ್ಬಾಲ್ ಮತ್ತು ಮೆಸ್ಸಿ ಜನಪ್ರಿಯತೆ ನೆರವಿನಿಂದ ಜಾಗತಿಕವಾಗಿ ಬೆಳೆವಣಿಗೆ ಸಾಧಿಸುವ ತವಕದಲ್ಲಿದೆ
ಬೈಜೂಸ್‌ನ ಸರ್ವರಿಗೂ ಶಿಕ್ಷಣ ಅಭಿಯಾನಕ್ಕೆ ಇರುವ ಜಾಹೀರಾತುಗಳಲ್ಲಿ ಲಿಯೋನೆಲ್ ಮೆಸ್ಸಿ ಕಾಣಿಸಿಕೊಳ್ಳಲಿದ್ದಾರೆ. ಆಟದ ಬಗ್ಗೆ ತಮಗಿರುವ ಬದ್ಧತೆ, ಜ್ಞಾನ, ಪರಿಶ್ರಮದ ಮೂಲಕ ಮೆಸ್ಸಿ ಅವರು ವಿಶ್ವಾದ್ಯಂತ ಕೋಟ್ಯಂತರ ಯುವ ಸಮುದಾಯದವರಿಗೆ ಆದರ್ಶಪ್ರಾಯರೆನಿಸುತ್ತಾರೆ ಎಂಬುದು ಬೈಜೂಸ್ ನಿರೀಕ್ಷೆ.
ಬೈಜೂಸ್ ಸಂಸ್ಥಾಪಕರ ಹೇಳಿಕೆ
"ನಮ್ಮ ಜಾಗತಿಕ ರಾಯಭಾರಿಯಾಗಿ ಲಿಯೋನೆಲ್ ಮೆಸ್ಸಿ ಅವರನ್ನು ಹೊಂದುವುದು ನಮಗೊಂದು ಗೌರವ. ಬಹಳ ಅಪರೂಪದ ಪ್ರತಿಭೆ. ವಿಶ್ವಾಸಾರ್ಹತೆ, ವಿನಮ್ರತೆ ಇವೆಲ್ಲವೂ ಬೈಜೂಸ್‌ನ ಮೌಲ್ಯಗಳಿಗೆ ತಾಳೆಯಾಗುತ್ತದೆ. ಬೈಜೂಸ್‌ನ 'ಎಜುಕೇಶನ್ ಫಾರ್ ಆಲ್' ಯೋಜನೆಗೆ ಇದು ಪೂರಕವಾಗಿದೆ. ವ್ಯಕ್ತಿಯ ಕ್ಷಮತೆ ಹೆಚ್ಚಿಸುವ ಶಕ್ತಿಗೆ ಪ್ರತೀಕವಾಗಲು ಮೆಸ್ಸಿಗಿಂತ ಹೆಚ್ಚು ಸೂಕ್ತರಿಲ್ಲ. ಸಾರ್ವಕಾಲಿಕ ಶ್ರೇಷ್ಠ ಆಟ ಅದೇ ಸಂದರ್ಭದಲ್ಲಿ ಸಾರ್ವಕಾಲಿಕ ಶ್ರೇಷ್ಠ ಕಲಿಕೆಗಾರನೂ ಹೌದು ಎನ್ನುವುದಕ್ಕೆ ಮೆಸ್ಸಿ ಉದಾಹರಣೆ. ಈ ಸಹಯೋಗವು ವಿಶ್ವಾದ್ಯಂತ ಕೋಟ್ಯಂತರ ಜನರಿಗೆ ಸ್ಫೂರ್ತಿ ನೀಡುವ ವಿಶ್ವಾಸ ಇದೆ. ನಿಮ್ಮ ಜೊತೆ ಮೆಸ್ಸಿ ಇದ್ದರೆ ಏನು ಬೇಕಾದರೂ ಸಾಧ್ಯ ಎಂಬುದು ಫುಟ್ಬಾಲ್ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ" ಎಂದು ಬೈಜೂಸ್‌ನ ಸಹ-ಸಂಸ್ಥಾಪಕ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.
ಮೆಸ್ಸಿ ಹೇಳಿದ್ದು
"ಎಲ್ಲರೂ ಕಲಿಕೆ ಇಷ್ಟಪಡಬೇಕೆಂಬ ಬೈಜೂಸ್‌ನ ಉದ್ದೇಶ ನನಗೆ ಪ್ರಿಯವಾಯಿತು. ಅದಕ್ಕೆ ನಾನು ಬೈಜೂಸ್ ಜೊತೆ ಸಹಭಾಗಿಯಾಗಲು ನಿರ್ಧರಿಸಿದೆ. ಉತ್ತಮ ಗುಣಮಟ್ಟದ ಶಿಕ್ಷಣದಿಂದ ಬದುಕು ಪರಿವರ್ತನೆಯಾಗುತ್ತದೆ. ವಿಶ್ವಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ವೃತ್ತಿ ದಿಕ್ಕನ್ನೇ ಬೈಜೂಸ್ ಪರಿವರ್ತಿಸಿದೆ. ಯುವ ಕಲಿಕೆಗಾರರು ಅತ್ಯುನ್ನತ ಹಂತಕ್ಕೆ ಹೋಗಲು ಮತ್ತು ನೆಲಸಲು ಸ್ಪೂರ್ತಿ ಸಿಗಬಹುದು ಎಂದು ಆಶಿಸಿದ್ದೇನೆ" ಎಂದು ಅರ್ಜೆಂಟೀನಾದ ಫುಟ್ಬಾಲ್ ಕ್ಯಾಪ್ಟನ್ ಲಿಯೋನೆಲ್ ಮೆಸ್ಸಿ ತಿಳಿಸಿದ್ದಾರೆ.
ಲಿಯೋನೆಲ್ ಮೆಸ್ಸಿ ಕೂಡ ಬಹಳಷ್ಟು ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ೨೦೦೭ರಲ್ಲಿ ಸ್ಥಾಪಿಸಿದ ಲಿಯೋ ಮೆಸ್ಸಿ ಫೌಂಡೇಶನ್ ಮೂಲಕ ಅವರು ಮಕ್ಕಳಿಗೆ ಸಮಾನ ಕಲಿಕಾ ಅವಕಾಶ ಇರಬೇಕೆಂಬ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಜೂಸ್ ಜೊತೆ ಮೆಸ್ಸಿ ಮೈತ್ರಿ ಬಹಳ ಸಹಜ ಎಂದೆನ್ನಲಾಗಿದೆ.
ಬೈಜು ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್ ಅವರಿಬ್ಬರು ಸೇರಿ ೨೦೧೧ರಲ್ಲಿ ಬೆಂಗಳೂರಿನಲ್ಲಿ ಬೈಜೂಸ್ ಸಂಸ್ಥೆ ಸ್ಥಾಪಿಸಿದರು. ೨೦೧೫ರಲ್ಲಿ ಬೈಜೂಸ್ ಆ್ಯಪ್ ಬಿಡುಗಡೆಯಾಯಿತು. ಕೆಲವೇ ವರ್ಷಗಳಲ್ಲಿ ೧೧.೫ ಕೋಟಿ ನೊಂದಾಯಿತ ವಿದ್ಯಾರ್ಥಿಗಳಿದ್ದಾರೆನ್ನಲಾಗಿದೆ. ಈ ಕಂಪನಿಯ ಒಟ್ಟು ಮೌಲ್ಯ ೨ ಲಕ್ಷ ಕೋಟಿ ರೂ ಸಮೀಪ ಇದೆ ಎನ್ನಲಾಗಿದೆ.


Click it and Unblock the Notifications