ಬೈಜೂಸ್ ಬ್ರ್ಯಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಶಿಕ್ಷಣ ತಂತ್ರಜ್ಞಾನ ಸ್ಟಾರ್ಟ್ಅಪ್ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ (ಟಿಎಲ್‌ಪಿಎಲ್) ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿದೆ. ಈಗ ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ (ಎಇಎಸ್‌ಎಲ್) ಗೆ ನೋಟಿಸ್ ಅನ್ನು ಬೈಜೂಸ್ ಕಳುಹಿಸಿದೆ. ಮಾರಾಟದ ಭಾಗವಾಗಿ ಬೇಷರತ್ತಾಗಿ ಒಪ್ಪಿಕೊಂಡಿರುವ ಷೇರು ವಿನಿಮಯವನ್ನು ಪೂರ್ಣಗೊಳಿಸಲು ಒಪ್ಪದ ಕಾರಣದಿಂದಾಗಿ ಆಕಾಶ್ ಎಜುಕೇಷನಲ್ ಸರ್ವಿಸಸ್ ಸಂಸ್ಥಾಪಕರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ವರದಿ ಹೇಳಿದೆ.
2021 ರಲ್ಲಿ, ಬೈಜೂಸ್ 33 ವರ್ಷ ಹಳೆಯದಾದ ಕೋಚಿಂಗ್ ಸೆಂಟರ್ ಆದ ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ (ಎಇಎಸ್‌ಎಲ್) ಅನ್ನು ಖರೀದಿ ಮಾಡಿದೆ. ಇದು ಸುಮಾರು ನಗದು ಮತ್ತು ಸ್ಟಾಕ್ ಒಪ್ಪಂದದಲ್ಲಿ ಮಾಡಿಕೊಂಡ ಸುಮಾರು 940 ಮಿಲಿಯನ್ ಡಾಲರ್ ಡೀಲ್ ಆಗಿದೆ. ಒಪ್ಪಂದದ ಷೇರಿನ ಪಾಲಿನ ಲೆಕ್ಕಾಚಾರವನ್ನು ನಾವು ನೋಡಿದಾಗ ಬೈಜೂಸ್‌ಗೆ ಅಧಿಕ ಪಾಲಿದೆ.

ಯಾರಲ್ಲಿ ಎಷ್ಟಿದೆ ಪಾಲು?
ಎಇಎಸ್‌ಎಲ್‌ನಲ್ಲಿ ಟಿಎಲ್‌ಪಿಎಲ್ ಸುಮಾರು ಶೇಕಡ 43ರಷ್ಟು ಷೇರನ್ನು ಹೊಂದಿದ್ದರೆ, ಅದರ ಸಂಸ್ಥಾಪಕ ಬೈಜೂ ರವೀಂದ್ರನ್ ಪ್ರತ್ಯೇಕವಾಗಿ ಶೇಕಡ 27ರಷ್ಟು ಷೇರನ್ನು ಹೊಂದಿದ್ದಾರೆ. ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆಕಾಶ್ ಚೌಧರಿ ಸುಮಾರು ಶೇಕಡ 18ರಷ್ಟು, ಬ್ಲಾಕ್‌ಸ್ಟೋನ್ ಉಳಿದ 12ರಷ್ಟು ಪಾಲುದಾರಿಕೆಯನ್ನು ಹೊಂದಿದೆ ಎಂದು ಪಿಟಿಐ ವರದಿ ಉಲ್ಲೇಖಿಸಿದೆ.
ಎಇಎಸ್‌ಎಲ್ ಅನ್ನು ಟಿಎಲ್‌ಪಿಎಲ್‌ನೊಂದಿಗೆ ವಿಲೀನಗೊಳಿಸುವ ಒಪ್ಪಂದವು ಮಾರಾಟಗಾರರಾದ ಚೌಧರಿಗೆ ಕೊಂಚ ತೆರಿಗೆ ಮೇಲೆ ಪ್ರಭಾವ ಉಂಟು ಮಾಡಿದೆ. ಆದರೆ ಏನೇ ಆದರೂ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಈ ವಿಲೀನದ ವಿಳಂಬದಿಂದಾಗಿ, ಟಿಎಲ್‌ಪಿಎಲ್ ಬೇಷರತ್ತಾದ ಒಪ್ಪಂದವನ್ನು ಜಾರಿಗೊಳಿಸಿದೆ. ಇನ್ನು ಈ ಒಪ್ಪಂದವನ್ನು ಕಾರ್ಯರೂಪಕ್ಕೆ ತರುವಂತೆ ವಿನಂತಿಸಿ ಚೌಧರಿಗೆ ನೋಟಿಸ್ ನೀಡಿದೆ ಎಂದು ವರದಿ ಹೇಳಿದೆ.
ಆದರೆ ಈ ಸಂಸ್ಥೆಯಲ್ಲಿ ಕಡಿಮೆ ಷೇರುಗಳನ್ನು ಹೊಂದಿರುವವರು ಎಇಎಸ್‌ಎಲ್‌ನಲ್ಲಿನ ತಮ್ಮ ಇಕ್ವಿಟಿ ಹೋಲ್ಡಿಂಗ್ಸ್ ಅನ್ನು ಸಂಸ್ಥೆಯ ಪೋಷಕ ಸಂಸ್ಥೆ ಟಿಎಲ್‌ಪಿಎಲ್‌ನೊಂದಿಗೆ ವಿನಿಮಯ ಮಾಡಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಮಾಹಿತಿಯಿದೆ. ಇನ್ನು ಈ 2021 ರಲ್ಲಿ ನಡೆದ ಈ ಸ್ವಾಧೀನ ಪ್ರಕ್ರಿಯೆಯಲ್ಲಿ ವಹಿವಾಟನ್ನು ಸುಮಾರು ಶೇಕಡ 70ರಷ್ಟು ನಗದು ರೂಪದಲ್ಲಿ ಮಾಡಲಾಗಿದೆ. ಉಳಿದವುಗಳನ್ನು ಟಿಎಲ್‌ಪಿಎಲ್‌ನ ಈಕ್ವಿಟಿಗೆ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿದೆ.
ಮೂಲ ಒಪ್ಪಂದದ ಪ್ರಕಾರ ಷೇರು ವಿನಿಮಯವನ್ನು ಆರಂಭ ಮಾಡಲು ಮಾರ್ಚ್‌ನಲ್ಲಿ ಟಿಎಲ್‌ಪಿಎಲ್ ಸೂಚನೆಯನ್ನು ಅನುಸರಿಸಲು ನಿರಾಕರಿಸಿ ಬ್ಲಾಕ್‌ಸ್ಟೋನ್ ಮತ್ತು ಆಕಾಶ್ ಚೌಧರಿ ಕುಟುಂಬವು ಕಳೆದ ಕೆಲವು ವಾರಗಳಲ್ಲಿ ಬೈಜೂಸ್‌ಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿಯಿದೆ. ಪ್ರಸ್ತುತ ಈ ಷೇರು ವರ್ಗಾವಣೆ ಸಂಬಂಧಿತ ಬಾಧ್ಯತೆಗಳು ಪೂರ್ಣವಾದ ಬಳಿಕ ಟಿಎಲ್‌ಪಿಎಲ್‌ನಲ್ಲಿ ಚೌಧರಿ ಕುಟುಂಬದ ಪಾಲು ಶೇಕಡ ಒಂದಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ ವರದಿ ಹೇಳುತ್ತದೆ.


Click it and Unblock the Notifications