ಶಿಕ್ಷಣ ಸಂಸ್ಥೆಯಾದ ಬೈಜೂಸ್ ಒಂದೆರಡು ವರ್ಷಗಳ ಹಿಂದೆ ದೇಶದ ಅತ್ಯಂತ ಯಶಸ್ವಿ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿತ್ತು. ಆದರೆ ಹಣಕಾಸು ವರ್ಷ 2021ರಲ್ಲಿ ಕಂಪನಿಯು 4,564 ಕೋಟಿ ರೂಪಾಯಿಗಳಷ್ಟು ಭಾರೀ ನಷ್ಟವನ್ನು ಕಂಡಿದೆ. ನಂತರ, ಅಕ್ಟೋಬರ್ 2022 ರಲ್ಲಿ, ಕಂಪನಿಯು 2,500 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ. ಅದಾದ ಬಳಿಕ ಈಗ ಸುಮಾರು 4000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಸಂಸ್ಥೆ ಸಜ್ಜಾಗಿದೆ.
ವರದಿಗಳ ಪ್ರಕಾರ ಬೈಜೂಸ್ ಮತ್ತೊಂದು ಹಂತದ ಉದ್ಯೋಗ ಕಡಿತವನ್ನು ಮಾಡಲು ಮುಂದಾಗಿದೆ. ಈ ಬಾರಿ ಸುಮಾರು 4000 ದಿಂದ 5000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಸಂಸ್ಥೆಯು ಮುಂದಾಗಿದೆ. ಇತ್ತೀಚೆಗೆ ಬೈಜೂಸ್ ಸಂಸ್ಥೆಯ ನೂತನ ಸಿಇಒ ಆಗಿ ಅರ್ಜುನ್ ಮೋಹನ್‌ರನ್ನು ನೇಮಕ ಮಾಡಿಕೊಂಡಿದ್ದಾರೆ. ಈಗ ಹೊಸ ಸಿಇಒ ಅಡಿಯಲ್ಲಿ ಉದ್ಯೋಗ ಕಡಿತವನ್ನು ಘೋಷಿಸಲು ಸಂಸ್ಥೆ ಸಜ್ಜಾಗಿದೆ.

4-5 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಬೈಜೂಸ್
ಹೊಸ ಸಿಇಒ ಅಡಿಯಲ್ಲಿ ಬೈಜೂಸ್ ಸುಮಾರು 4 ರಿಂದ 5 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಬಹುದು ಎಂದು ವರದಿ ಹೇಳಿದೆ. ಇದು ಬೇರೆ ಬೇರೆ ವಿಧದ ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ. ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿಗಳನ್ನು ಹೆಚ್ಚಾಗಿ ಪರಿಣಾಮ ಅನುಭವಿಸಬೇಕಾಗಬಹುದು. ಆದರೆ ಆಕಾಶ್ ಸಂಸ್ಥೆಯ ಉದ್ಯೋಗಿಗಳ ವಜಾ ನಡೆಯದು ಎಂದು ವರದಿ ಉಲ್ಲೇಖಿಸಿದೆ.
ಹೊಸ ಸಿಇಒ ಈಗಾಗಲೇ ಈ ನಿರ್ಧಾರಗಳನ್ನು ಕಂಪನಿಯ ಹಿರಿಯ ನಾಯಕರಿಗೆ ತಿಳಿಸಿದ್ದಾರೆ ಎಂದು ವರದಿ ಹೇಳುತ್ತದೆ. ಮಾರಾಟ, ಮಾರ್ಕೆಟಿಂಗ್ ಮತ್ತು ಇತರ ಹಲವಾರು ತಂಡಗಳು ಮುಂಬರುವ ಈ ಲೇಆಫ್‌ಗೆ ಗುರಿಯಾಗುವ ಸಾಧ್ಯತೆಯಿದೆ. ಇನ್ನು "ರಚನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ, ವೆಚ್ಚ ಕಡಿತ ಮಾಡಿ ನಗದು ಹರಿವು ನಿರ್ವಹಣೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತದ ನಿರ್ಧಾರ ಮಾಡಲಾಗುತ್ತಿದೆ," ಎಂದು ವಕ್ತಾರರು ಹೇಳಿದ್ದಾರೆ.
ಉದ್ಯೋಗಿಗಳಿಗೆ ಮಾಜಿ- ಬೈಜೂಸ್ ಸಿಇಒ ಪತ್ರ
ಅಕ್ಟೋಬರ್ 2022 ರಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿದ ನಂತರ, ಬೈಜೂಸ್ ಸಿಇಒ ಇಮೇಲ್‌ನಲ್ಲಿ ಉದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದರು. "ನಾವು ನಮ್ಮ 2500 ಸಹೋದ್ಯೋಗಿಗಳನ್ನು ವಜಾ ಮಾಡಬೇಕಾಗಿದೆ. ನಮ್ಮ ಉದ್ಯೋಗಿಗಳನ್ನು ನೋಡಿಕೊಳ್ಳುವಲ್ಲಿ ಮತ್ತು ಅವರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ವಿಚಾರದಲ್ಲಿ ನಾವು ಯಾವಾಗಲೂ ಹೆಮ್ಮೆಪಡುತ್ತೇವೆ. ಈಗ ನೋವಿನಿಂದ ಬೀಳ್ಕೊಡುತ್ತಿದ್ದೇವೆ," ಎಂದು ಈ ಹಿಂದಿನ ಸಿಇಒ ಹೇಳಿದ್ದರು.
ಇದು ಮೊದಲೇನಲ್ಲ
ಜಾಗತಿಕವಾಗಿ ಕಳೆದ ವರ್ಷದಿಂದಲೇ ಉದ್ಯೋಗ ಕಡಿತವು ಆರಂಭವಾಗಿದೆ. ಹಣದುಬ್ಬರ, ಆರ್ಥಿಕ ಹಿಂಜರಿತದ ಆತಂಕದ ನಡುವೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಅಷ್ಟಕ್ಕೂ ಒಂದು ಬಾರಿ ಉದ್ಯೋಗ ಕಡಿತ ಘೋಷಣೆ ಮಾಡಿದ ಬಳಿಕ ಈ ಪ್ರಕ್ರಿಯೆ ನಿಂತಿಲ್ಲ. ಬಹುತೇಕ ಸಂಸ್ಥೆಗಳು ಎರಡು ಮೂರು ಹಂತಗಳಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ. ಅದರಂತೆಯೇ ಬೈಜೂಸ್‌ನಲ್ಲಿಯೂ ಈ ಹಿಂದೆಯೂ ಉದ್ಯೋಗ ಕಡಿತ ಮಾಡಲಾಗಿದೆ.
ಈ ಹಿಂದೆ ಅಕ್ಟೋಬರ್ 2022ರಲ್ಲಿ ಬೈಜೂಸ್ ಸುಮಾರು ಶೇಕಡ 5ರಷ್ಟು ಅಥವಾ 2500 ಉದ್ಯೋಗಿಗಳನ್ನು ಮುಂದಿನ ಆರು ತಿಂಗಳ ಅವಧಿಯಲ್ಲಿ ಉದ್ಯೋಗದಿಂದ ವಜಾಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಅದಾದ ಬಳಿಕ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಬೈಜೂಸ್ ಸಂಸ್ಥೆಯು ತನ್ನ ಎಲ್ಲ ವಿಭಾಗದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಿದೆ ಎಂದು ವರದಿಯಾಗಿದೆ.


Click it and Unblock the Notifications