ನವದೆಹಲಿ, ಅ. 20: ಕೆನರಾ ಬ್ಯಾಂಕ್ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಲಾಭ ಪಡೆದಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗಿನ 3 ತಿಂಗಳಲ್ಲಿ ಕೆನರಾ ಬ್ಯಾಂಕ್‌ನ ನಿವ್ವಳ ಲಾಭ 2,525 ಕೋಟಿ ರೂಪಾಯಿ ಇದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ 1,333 ಕೋಟಿ ರೂ ನಿವ್ವಳ ಲಾಭ ಕೆನರಾ ಬ್ಯಾಂಕ್‌ಗೆ ದಕ್ಕಿತ್ತು. ಅಂದರೆ ಅದರ ಲಾಭದಲ್ಲಿ ಶೇ. 89ರಷ್ಟು ಹೆಚ್ಚಳವಾಗಿದೆ.
ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಕೆನರಾ ಬ್ಯಾಂಕ್‌ನ ಒಟ್ಟು ಆದಾಯ 24,932.19 ಕೋಟಿ ರೂ ಆಗಿದೆ. ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ ಅದರ ಆದಾಯ 21,331.49 ಕೋಟಿ ರೂ ಇತ್ತು.
ಕೆನರಾ ಬ್ಯಾಂಕ್‌ನ ಎನ್‌ಪಿಎಗಳು ಶೇ. 6.37ಕ್ಕೆ ಇಳಿದಿದೆ. ಎನ್‌ಪಿಎ ಎಂದರೆ ವಸೂಲಾತಿಯಾಗದ ಸಾಲಗಳು. ನಿವ್ವಳ ಎನ್‌ಪಿಎ ಕೂಡ ಶೇ. 2.19ಕ್ಕೆ ಇಳಿದಿದೆ.
ಬಡ್ಡಿಯಿಂದ ಗಳಿಸಿರುವ ಆದಾಯ ಕೂಡ ಈ ತ್ರೈಮಾಸಿಕದಲ್ಲಿ ಶೇ. 18.5ರಷ್ಟು ಹೆಚ್ಚಾಗಿ 7,434 ಕೋಟಿ ರೂ ಆಗಿದೆ.
ಷೇರು ಏರಿಕೆ:
ಕೆನರಾ ಬ್ಯಾಂಕ್‌ನ ಆದಾಯದ ಮಾಹಿತಿ ಪ್ರಕಟವಾಗುತ್ತಿದ್ದಂತೆಯೇ ಗುರುವಾರ ಷೇರುಪೇಟೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ. 4ರಷ್ಟು ಹೆಚ್ಚಾಗಿ ಹೋಗಿದೆ. ಅ. 20ರ ಬ್ಯುಸಿನೆಸ್ ಎಂಡ್‌ನಲ್ಲಿ ಕೆನರಾ ಬ್ಯಾಂಕ್‌ನ ಷೇರು 259.3 ರೂಪಾಯಿ ಮಾರಾಟವಾಗಿತ್ತು.

ಐದು ಡಿಬಿಯುಗಳು:
ಇತ್ತೀಚಿನ ಬೆಳವಣಿಗೆಯಲ್ಲಿ ಕೆನರಾ ಬ್ಯಾಂಕ್ ಕರ್ನಾಟಕದ ಎರಡು ಕಡೆ ಸೇರಿದಂತೆ ದೇಶದ ಐದು ಕಡೆ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ಗಳನ್ನು ಸ್ಥಾಪಿಸಿದೆ. ದೇವನಹಳ್ಳಿ ಮತ್ತು ರಾಯಚೂರಿನಲ್ಲಿ ಕೆನರಾ ಬ್ಯಾಂಕ್‌ನ ಡಿಬಿಯುಗಳಿವೆ. ಕೇರಳದ ಎರ್ನಾಕುಲಂ, ತಮಿಳುನಾಡಿನ ವಿರುದ್ಧನಗರ್ ಮತ್ತು ಲಕ್ಷದೀಪ್‌ನಲ್ಲಿ ಇತರ ಮೂರು ಡಿಬಿಯು ಸ್ಥಾಪನೆ ಆಗಿವೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ಗಳಿಗೆ ಚಾಲನೆ ಕೊಟ್ಟಿದ್ದರು. ಬ್ಯಾಂಕಿಂಗ್ ಅನ್ನು ಸಂಪೂರ್ಣ ಡಿಜಿಟಲೈಸ್ ಮಾಡುವ ನಿಟ್ಟಿನಲ್ಲಿ ಈ ಹೆಜ್ಜೆ ಇಡಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳು ಡಿಬಿಯುಗಳನ್ನು ಆರಂಭಿಸಿವೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಲಿದೆ.
ಆನ್‌ಲೈನ್ ಬ್ಯಾಂಕಿಂಗ್‌ಗೆ ಉತ್ತೇಜನ ಕೊಡುವುದು ಈ ಡಿಬಿಯುಗಳ ಆಶಯ. ಬ್ಯಾಂಕ್ ಕಚೇರಿಗಳಲ್ಲಿ ಸಿಗುವ ಎಲ್ಲಾ ಸೇವೆಗಳೂ ಡಿಜಿಟಲ್ ಘಟಕಗಳಲ್ಲಿ ಲಭ್ಯ ಇರುತ್ತವೆ. ಎಲ್ಲಿಯೂ ಕಾಗದಗಳಿಂದ ವ್ಯವಹಾರ ಇರುವುದಿಲ್ಲ.


Click it and Unblock the Notifications