ಬೆಂಗಳೂರು, ಜನವರಿ 13: ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬೆಂಗಳೂರು ಟರ್ಫ್ ಕ್ಲಬ್‌ನ ಬುಕ್ಕಿ ಕೌಂಟರ್‌ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ 3.47 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ತೆರಿಗೆ ವಂಚನೆ, ಅಕ್ರಮ ಬೆಟ್ಟಿಂಗ್, ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಸೇರಿದಂತೆ ಅವ್ಯವಹಾರದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಟರ್ಫ್ ಕ್ಲಬ್ ಬುಕ್ಕಿ ಕೌಂಟರ್ ಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ಶುಕ್ರವಾರ ಮಧ್ಯಾಹ್ನ ಆರಂಭವಾದ ಶೋಧ ಕಾರ್ಯಾಚರಣೆ ಶನಿವಾರ ನಸುಕಿನ 1 ಗಂಟೆ ಸುಮಾರಿಗೆ ಮುಕ್ತಾಯಗೊಂಡಿದೆ.

ಲೆಕ್ಕಕ್ಕೆ ಸಿಗದ ನಗದು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡ ಸಿಸಿಬಿ ಪೊಲೀಸರು ಟರ್ಫ್ ಕ್ಲಬ್‌ನ ಕೌಂಟರ್‌ಗಳಲ್ಲಿ 60 ಬುಕ್ಕಿಗಳನ್ನು ಬಂಧಿಸಿದ್ದಾರೆ. ಬುಕ್ಕಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬುಕ್ಕಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗಾಗಿ ಸಿಸಿಬಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಲೆಕ್ಕಪತ್ರದ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಬುಕ್ಕಿಗಳಿಗೆ ಸಿಸಿಬಿ ತಿಳಿಸಿದೆ. ವರದಿಗಳ ಪ್ರಕಾರ, ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ 26 ಪರವಾನಗಿ ಹೊಂದಿರುವ ಬುಕ್ಕಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸೆಂಬರ್ 2019 ರಲ್ಲಿ ಪೊಲೀಸರು ಟರ್ಫ್ ಕ್ಲಬ್‌ನ ಬುಕ್ಕಿ ಕೌಂಟರ್‌ಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು, ರೂ 96 ಲಕ್ಷ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡರು ಮತ್ತು ಸುಮಾರು 40 ಜನರನ್ನು ವಿಚಾರಣೆ ನಡೆಸಿದರು ಎಂದು ತಿಳಿದು ಬಂದಿದೆ.
ಸಕ್ರಮ, ಅಕ್ರಮ ಬೆಟ್ಟಿಂಗ್:
ವರದಿಗಳ ಪ್ರಕಾರ ಟರ್ಫ್ ಕ್ಲಬ್ ನಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ ಜೋರಾಗಿದ್ದು, ಅಕ್ರಮ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವ ಬೆಟ್ಟಿಂಗ್ ಹಣ ಸಕ್ರಮ ಬೆಟ್ಟಿಂಗ್ ಹಣಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿದೆ ಎನ್ನಲಾಗಿದೆ. ಈ ಬಗ್ಗೆ ಬಿಟಿಸಿ ಅಧ್ಯಕ್ಷ ಅರವಿಂದ್ ರಾಘವನ್ ಮಾತನಾಡಿ, ಅಧಿಕ ತೆರಿಗೆಯಿಂದಾಗಿ ಅಕ್ರಮ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಪಂದ್ಯದ ವಿಜೇತರು ಗೆಲುವಿನ ಮೇಲೆ ಶೇಕಡಾ 28 ಜಿಎಸ್‌ಟಿ ಪಾವತಿಸಬೇಕು ಎಂದು ಹೇಳಿದ್ದಾರೆ.


Click it and Unblock the Notifications