ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಆದರೆ ಸಾಮಾನ್ಯ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಹಣದುಬ್ಬರದಿಂದ ಸ್ವಲ್ಪ ಪರಿಹಾರ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದ್ರಲ್ಲೂ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ದರ ಅಗ್ಗವಾಗಬಹುದು. ಮಾಹಿತಿ ಪ್ರಕಾರ 5 ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಸರ್ಕಾರ ಕಡಿತಗೊಳಿಸಬಹುದು.
ಹೌದು, ಕಚ್ಚಾ ತೈಲ ಬೆಲೆಗಳು ಒಂದೇ ಮಟ್ಟದಲ್ಲಿ ಉಳಿದಿದ್ದರೆ, ಐದು ರಾಜ್ಯಗಳಲ್ಲಿ ಚುನಾವಣೆಗೆ ಮುನ್ನ, ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬಹುದು. ಸರ್ಕಾರ ತೆರಿಗೆಯನ್ನು ಕಡಿಮೆ ಮಾಡಿದರೆ ಅದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುತ್ತದೆ.
ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಚುನಾವಣೆ ನಡೆಯಲಿದೆ. ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಪ್ರಾರಂಭವಾಗಿ ಮೇ 2 ಕ್ಕೆ ಕೊನೆಗೊಳ್ಳಲಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಪ್ರತಿಪಕ್ಷಗಳು ಬಿಜೆಪಿಯನ್ನು ಟೀಕಿಸಬಹುದು.
ಪೆಟ್ರೋಲ್ ಲೀಟರ್‌ಗೆ 100 ರೂ. ಗಡಿದಾಟಿದೆ
ಪ್ರಸ್ತುತ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $ 70 ಆಗಿದೆ. ಇದಲ್ಲದೆ, ಕಳೆದ 11 ದಿನಗಳಲ್ಲಿ ಭಾರತದಲ್ಲಿ ತೈಲ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ 11 ದಿನಗಳನ್ನು ಹೊರತುಪಡಿಸಿ, ಕಳೆದ ಕೆಲವು ತಿಂಗಳುಗಳಲ್ಲಿ ತೈಲ ಬೆಲೆಗಳಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100 ರೂ. ಗಡಿದಾಟಿದೆ. ಹೀಗಾಗಿ ಸರ್ಕಾರವು ತೈಲದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಯೋಚಿಸುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟಾರೆ ತೆರಿಗೆ ಎಷ್ಟು?
ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮೇಲೆ ಶೇ. 60 ಮತ್ತು ಡೀಸೆಲ್ ಮೇಲೆ ಶೇ 54 ರಷ್ಟು ತೆರಿಗೆ ವಿಧಿಸುತ್ತವೆ. ಪೆಟ್ರೋಲ್‌ನ ಮೂಲ ಬೆಲೆ ಪ್ರತಿ ಲೀಟರ್‌ಗೆ 33.26 ರೂ. ಆಗಿದ್ದರೆ, ಶಿಪ್ಪಿಂಗ್ ಶುಲ್ಕ ಪ್ರತಿ ಲೀಟರ್‌ಗೆ 0.28 ರೂ., ಅಬಕಾರಿ ಸುಂಕ 32.90 ರೂ. ಮತ್ತು ಮಾರಾಟಗಾರರ ಕಮಿಷನ್ 3.69 ರೂ. ಇದಲ್ಲದೆ, ಪ್ರತಿ ಲೀಟರ್‌ಗೆ 21 ರೂ.ಗಳ ವ್ಯಾಟ್ ವಿಧಿಸಲಾಗುತ್ತದೆ.
2020ರಲ್ಲಿ ಅಬಕಾರಿ ಸುಂಕ ಭಾರೀ ಹೆಚ್ಚಳ
ಕೋವಿಡ್-19 ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್‌ನಲ್ಲಿ ಆದಾಯವೇ ಕಾಣದ ಕೇಂದ್ರ ಸರ್ಕಾರವು ತನ್ನ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾದ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಮಾರ್ಚ್ 2020ರಿಂದ ಮೇ 2020ರ ಅವಧಿಯಲ್ಲಿ ಪೆಟ್ರೋಲ್ ಮೇಲೆ ಲೀಟರ್‌ಗೆ 13 ರೂ ಹಾಗೂ ಡೀಸೆಲ್ ಮೇಲೆ 16ರೂ ಹೆಚ್ಚಿಸಲಾಗಿತ್ತು. ಪ್ರಸ್ತುತ ಪ್ರತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ 31.8 ರೂ ಇದ್ದರೆ, ಪೆಟ್ರೋಲ್ ಮೇಲಿನ ಸುಂಕ 32.9 ರೂ. ಇದೆ.
2014-15ರಲ್ಲೂ ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು!
ಜಾಗತಿಕ ತೈಲ ಬೆಲೆಗಳು ಕುಸಿದಾಗ ಅದರಿಂದ ಉಂಟಾಗುವ ಲಾಭಗಳನ್ನು ಗ್ರಾಹಕರಿಗೆ ವಿತರಿಸದೆ ಸರ್ಕಾರವು ನವೆಂಬರ್ 2014 ಮತ್ತು ಜನವರಿ 2016 ರ ನಡುವೆ ಒಂಬತ್ತು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು.
ಒಟ್ಟಾರೆಯಾಗಿ, ಪೆಟ್ರೋಲ್ ದರದ ಸುಂಕವನ್ನು ಪ್ರತಿ ಲೀಟರ್‌ಗೆ 11.77 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಆ 15 ತಿಂಗಳಲ್ಲಿ ಡೀಸೆಲ್‌ಗೆ 13.47 ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಸರ್ಕಾರದ ಅಬಕಾರಿ ಸುಂಕದ ಆದಾಯವು 2014-15ರಲ್ಲಿ 99,000 ಕೋಟಿ ರೂಪಾಯಿಗಳಿಂದ 2016-17ರಲ್ಲಿ ಎರಡು ಪಟ್ಟು 2,42,000 ಕೋಟಿ ರೂ.ಗೆ ಏರಿದೆ.


Click it and Unblock the Notifications