ಬೈಜೂಸ್ ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕುತ್ತಿದೆ. ಈಗ ಭಾರತ ಸರ್ಕಾರವು ಶಿಕ್ಷಣ-ತಂತ್ರಜ್ಞಾನ ಟೈಟಾನ್ ಬೈಜೂಸ್‌ನ ಖಾತೆ ಪುಸ್ತಕಗಳನ್ನು ಪರಿಶೀಲಿಸಲು ಆದೇಶ ನೀಡಿದೆ. ಕಳೆದ ತಿಂಗಳು ಬೈಜೂಸ್‌ನ ಆಡಿಟರ್ ಮತ್ತು ಮೂವರು ಮಂಡಳಿಯ ಸದಸ್ಯರು ರಾಜೀನಾಮೆಯನ್ನು ನೀಡಿದ್ದಾರೆ. ಅದಕ್ಕೂ ಮುನ್ನ ಬೈಜೂಸ್ ವಿರುದ್ಧ ಹಲವಾರು ಆರೋಪಗಳು ಕೇಳಿಬಂದಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಆರು ವಾರಗಳಲ್ಲಿ ವರದಿಯನ್ನು ಕೇಳಿದೆ ಎಂದು ಹೆಸರು ಹೇಳಲು ಬಯಸದ ವ್ಯಕ್ತಿ ತಿಳಿಸಿದ್ದಾರೆ. ಪರಿಶೀಲನೆ ಮಾಡಿದ ಬಳಿಕ ತಿಳಿಯುವ ವಿಚಾರವನ್ನು ಆಧಾರಿಸಿ ಗಂಭೀರ ವಂಚನೆ ಅಡಿಯಲ್ಲಿ ತನಿಖೆಯನ್ನು ಮಾಡುವ ಅಗತ್ಯವಿದೆಯೇ ಎಂದು ಸರ್ಕಾರ ನಿರ್ಧಾರ ಮಾಡುತ್ತದೆ. ಈ ಪರಿಶೀಲನೆಯು ಬೈಜೂಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಬೈಜೂಸ್‌ಗೆ ಉಂಟಾದ ಹಲವಾರು ಸಂಕಷ್ಟಗಳು
ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಬೈಜೂಸ್ ಸಂಸ್ಥೆಯು ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದೆ. ಈಗ ಈ ಆನ್‌ಲೈನ್ ಶಿಕ್ಷಣ ನೀಡುವ ಆಪ್ ಹೊಂದಿರುವ ಸಂಸ್ಥೆಯಾದ ಬೈಜೂಸ್ ತನ್ನ ಎಲ್ಲ ವಿಭಾಗದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಈಗಾಗಲೇ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಿದೆ. ಸುಮಾರು ಒಂದು ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಯುಎಸ್‌ನ ಸಾಲದಾತರೊಂದಿಗೆ ಪ್ರಸ್ತುತ ಬೈಜೂಸ್ ಕಾನೂನು ಸಮರಕ್ಕೆ ಇಳಿದಿದೆ.
ಈ ಹಿಂದೆ ಅಕ್ಟೋಬರ್ 2022ರಲ್ಲಿ ಬೈಜೂಸ್ ಸುಮಾರು ಶೇಕಡ 5ರಷ್ಟು ಅಥವಾ 2500 ಉದ್ಯೋಗಿಗಳನ್ನು ಮುಂದಿನ ಆರು ತಿಂಗಳ ಅವಧಿಯಲ್ಲಿ ಉದ್ಯೋಗದಿಂದ ವಜಾಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ತನ್ನ ಪತ್ನಿ ದಿವ್ಯಾ ಗೋಕುಲ್‌ನಾಥ್ ಜೊತೆ ಸೇರಿ ರವೀಂದ್ರನ್ ಬೈಜೂಸ್ ಸಂಸ್ಥೆಯನ್ನು 2011ರಲ್ಲಿ ಆರಂಭ ಮಾಡಿದ್ದಾರೆ.
ಅದಾದ ಬಳಿಕ ಸಂಸ್ಥೆಯು ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಆದರೆ ಕಳೆದ ಒಂದು ವರ್ಷದಿಂದ ಬೈಜೂಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದೆ. ಈ ಹಿಂದೆ ಬೈಜೂಸ್‌ನ ಹಳೆ ಉದ್ಯೋಗಿಗಳು ಹಾಗೂ ಪೋಷಕರು ಹಲವಾರು ಆರೋಪಗಳನ್ನು ಮಾಡಿದ್ದರು.
ಕಳೆದ ವರ್ಷ ಅಕ್ಟೋಬರ್‌ನಿಂದ ಈವರಗೆ ಹಲವಾರು ತಿಂಗಳುಗಳವರೆಗೆ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಪಾವತಿಗಳನ್ನು ಬೈಜೂಸ್ ವಿಳಂಬಗೊಳಿಸಿದೆ. ಪಿಎಫ್ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪ ಬೈಜೂಸ್‌ಗೆ ಇದೆ. ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಿಂದ (ಇಪಿಎಫ್‌ಒ) ಕ್ರಮವನ್ನು ಕೈಗೊಳ್ಳುತ್ತಿದೆ.
ಭಾರತದ ಅತ್ಯಂತ ಮೌಲ್ಯಯುತವಾದ ಸ್ಟಾರ್ಟ್‌ಅಪ್ ಆಗಿರುವ ಬೈಜೂಸ್, ಸುಮಾರು ಮೂರರಿಂದ ನಾಲ್ಕು ತಿಂಗಳ ವಿಳಂಬದೊಂದಿಗೆ ಪಿಎಫ್‌ನ ಕೊಡುಗೆಗಳನ್ನು ನೀಡುತ್ತಿದೆ. ವಾಸ್ತವವಾಗಿ, ಕೆಲವು ಉದ್ಯೋಗಿಗಳಿಗೆ, ಬೈಜೂಸ್ ಡಿಸೆಂಬರ್‌ನ ಪಿಎಫ್ ಅನ್ನು ಜೂನ್‌ನಲ್ಲಿ ಜಮೆ ಮಾಡಿದೆ ಎಂದು ಡೇಟಾ ಹೇಳುತ್ತದೆ. ಇಪಿಎಫ್‌ಒನಿಂದ ಪಡೆದ ಡೇಟಾವನ್ನು ಪಿಎಫ್ ಸಲಹೆಗಾರರು ಪರಿಶೀಲಿಸಿದ್ದು, ಇದರಲ್ಲಿ ಹೆಚ್ಚಿನ ತಿಂಗಳುಗಳ ಪಾವತಿಯನ್ನು ವಿಳಂಬ ಮಾಡಲಾಗಿದೆ ಎಂದು ದೃಢಪಟ್ಟಿದೆ.
ಉದ್ಯೋಗಿಗಳ ಸ್ಯಾಲರಿ ಸ್ಲಿಪ್‌ನಲ್ಲಿ ಪಿಎಫ್ ಕೊಡುಗೆಯ ಬಗ್ಗೆ ಉಲ್ಲೇಖ ಮಾಡಲಾಗುತ್ತಿದೆ. ಆದರೆ ಕಳೆದ ವರ್ಷ ನವೆಂಬರ್‌ನಿಂದ ಉದ್ಯೋಗಿಗಳ ಪಿಎಫ್ ಪಾಸ್‌ಬುಕ್‌ಗಳಲ್ಲಿ ಪರಿಶೀಲನೆ ಮಾಡಿದಾಗ ಪಿಎಫ್ ಬಗ್ಗೆ ಉಲ್ಲೇಖವಿಲ್ಲ ಎಂದು ಕಳೆದ ವಾರ ವರದಿಯಾಗಿದೆ. ಇದಾದ ನಂತರ ಕಂಪನಿಯು ಪಿಎಫ್ ಪಾವತಿ ಕೊಡುಗೆಗಳನ್ನು ಮಾಡಲು ಆರಂಭಿಸಿದೆ, ತ್ವರಿತವಾಗಿ ಪಿಎಫ್ ಡೆಪಾಸಿಟ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಬೈಜೂಸ್‌ಗೆ ಪ್ರಶ್ನಿಸಿದಾಗ ಕಂಪನಿಯು ಪ್ರತಿಕ್ರಿಯಿಸಲು ನಿರಾಕರಿಸಿದೆ. ಕಂಪನಿಯು ಸಕಾಲದಲ್ಲಿ ಪಿಎಫ್ ಪಾವತಿಗಳನ್ನು ಮಾಡುತ್ತಿದೆ ಎಂದು ಕಂಪನಿಯ ಮೂಲಗಳು ತಿಳಿಸಿದೆ. ಅಂಕಿಅಂಶಗಳ ಪ್ರಕಾರ, ಕೇವಲ 10,000-13,000 ಉದ್ಯೋಗಿಗಳು ಜನವರಿ, ಫೆಬ್ರವರಿ ಮತ್ತು ಮಾರ್ಚ್‌ನ ಪಿಎಫ್ ಅನ್ನು ಸ್ವೀಕರಿಸಿದ್ದಾರೆ. ಹೆಚ್ಚಿನ ಉದ್ಯೋಗಿಗಳಿಗೆ ಏಪ್ರಿಲ್ ಮತ್ತು ಜೂನ್ ತಿಂಗಳ ಪಿಎಫ್ ಇನ್ನು ಕೂಡಾ ಲಭ್ಯವಾಗಿಲ್ಲ ಎಂದು ಡೇಟಾ ತೋರಿಸಿದೆ.


Click it and Unblock the Notifications