ಐಟಿಸಿ ಹಾಗೂ ಆಕ್ಸಿಸ್ ಬ್ಯಾಂಕ್ ನಲ್ಲಿ ಕೇಂದ್ರ ಸರ್ಕಾರ ಹೊಂದಿರುವ 7.94 ಹಾಗೂ 4.69 ಪರ್ಸೆಂಟ್ ಪಾಲಿನ ಷೇರನ್ನು ಸಂಪೂರ್ಣವಾಗಿ ಮಾರಿ, 22 ಸಾವಿರ ಕೋಟಿ ರುಪಾಯಿ ಸಂಗ್ರಹಿಸುವುದಕ್ಕೆ ಎದುರು ನೋಡುತ್ತಿದೆ ಎಂದು ವರದಿ ಆಗಿದೆ. ಸ್ಪೆಸಿಫೈಡ್ ಅಂಡರ್ ಟೇಕಿಂಗ್ ಆಫ್ ದಿ ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ (SUUTI) ಮೂಲಕ ಷೇರು ಮಾರ್ಕೆಟ್ ನಲ್ಲಿ ಬಲ್ಕ್ ಡೀಲ್ ಮಾಡಲಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದ್ದು, ಈ ವಾರದ ಕೊನೆಗೆ ಅಥವಾ ಮುಂದಿನ ವಾರದ ಆರಂಭದಲ್ಲಿ ವ್ಯವಹಾರ ಪೂರ್ತಿ ಮಾಡುವ ಭರವಸೆಯನ್ನು ಸರ್ಕಾರ ಹೊಂದಿದೆ. ಬುಧವಾರದಂದು (ಮೇ 6, 2020) ಐಟಿಸಿ ಕಂಪೆನಿ ಷೇರುಗಳು 6 ಪರ್ಸೆಂಟ್ ನಷ್ಟು ಇಳಿಕೆ ದಾಖಲಿಸಿದೆ. ಇನ್ನು ಆಕ್ಸಿಸ್ ಬ್ಯಾಂಕ್ ಷೇರು 388 ರುಪಾಯಿಗೆ ದಿನದ ವಹಿವಾಟು ಮುಗಿಸಿದೆ.
ವ್ಯವಹಾರ ನಡೆಸುವ ದಿನ 2- 3 ಪರ್ಸೆಂಟ್ ರಿಯಾಯಿತಿ ನೀಡುವ ಸಾಧ್ಯತೆ ಇದ್ದು, ಎಲ್ ಐಸಿ ಸೇರಿದಂತೆ ವಿವಿಧ ಮ್ಯೂಚುವಲ್ ಫಂಡ್ ಗಳು ಈ ಷೇರು ಮಾರಾಟ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಐವತ್ತೊಂದು ಲಿಸ್ಟೆಡ್ ಮತ್ತು ಅನ್ ಲಿಸ್ಟೆಡ್ ಕಂಪೆನಿಗಳಲ್ಲಿ SUUTI ಅಲ್ಪ ಪ್ರಮಾಣದ ಷೇರನ್ನು ಹೊಂದಿದೆ. ಆ ಪೈಕಿ ಹೆಚ್ಚಿನ ಮೌಲ್ಯ ಆಕ್ಸಿಸ್ ಬ್ಯಾಂಕ್, ಐಟಿಸಿ ಹಾಗೂ ಎಲ್ ಅಂಡ್ ಟಿಯಲ್ಲಿ ಇವೆ.

ಆದರೆ, ಎಲ್ ಅಂಡ್ ಟಿಯಲ್ಲಿ ಈಗಾಗಲೇ ಷೇರುಗಳನ್ನು ಮಾರಾಟ ಮಾಡಲಾಗಿದೆ ಎಂಬುದು ಗಮನಿಸಬೇಕಾದ ಅಂಶ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 2.10 ಲಕ್ಷ ಕೋಟಿ ರುಪಾಯಿ ಬಂಡವಾಳ ಹಿಂತೆಗೆತದ ಗುರಿ ಹಾಕಿಕೊಳ್ಳಲಾಗಿದೆ. ಅದರಲ್ಲಿ ಎಲ್ ಐಸಿಯಲ್ಲಿ ಇರುವ ಅಲ್ಪ ಪ್ರಮಾಣದ ಪಾಲನ್ನು 90 ಸಾವಿರ ಕೋಟಿ ರುಪಾಯಿಯನ್ನು ಐಪಿಒ ಮೂಲಕ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಜತೆಗೆ ಐಡಿಬಿಐ ಬ್ಯಾಂಕ್ ಈಕ್ವಿಟಿ ಮಾರಾಟದ ಉದ್ದೇಶವೂ ಇದೆ.


Click it and Unblock the Notifications