ಭಾರತದಲ್ಲಿ ನದಿ ಜೋಡಣೆ ಮಾಡಬೇಕು ಎಂಬ ಯೋಜನೆಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರೀ ಉತ್ತೇಜನ ನೀಡುತ್ತಿದೆ. ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಗಾಗಿ ಕೇಂದ್ರ ಸರ್ಕಾರವು ಹಣಕಾಸು ಸಂಸ್ಥೆಗಳಿಂದ 60 ಸಾವಿರ ಕೋಟಿ ರುಪಾಯಿ ಮೊತ್ತವನ್ನು ಪಡೆಯಲು ಎದುರು ನೋಡುತ್ತಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿರುವ ಮಾತನ್ನು ಆಧರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನು ಹೊರತುಪಡಿಸಿದಂತೆ ಜಲಶಕ್ತಿ ಸಚಿವಾಲಯ ಅಧಿಕಾರಿಗಳು, 9 ರಾಜ್ಯಗಳು ಪ್ರಸ್ತಾವ ಮಾಡಿರುವ 47 ಅಂತರರಾಜ್ಯ ನದಿ ಜೋಡಣೆಯ ಯೋಜನೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ನದಿ ಜೋಡಣೆ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನೇ ಪುನರ್ ರಚಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆ
ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿ, ನದಿ ಜೋಡಣೆ ಮಾಡುವುದರಿಂದ ಸಮುದ್ರಕ್ಕೆ ಹರಿದು ಹೋಗುತ್ತಿರುವ 1200 ಟಿಎಂಸಿ ಅಡಿ ಗೋದಾವರಿ ನೀರನ್ನು ಉಳಿಸಲು ಸಾಧ್ಯವಾಗುತ್ತದೆ. ಈ ನೀರನ್ನು ತಮಿಳುನಾಡಿನ ರೈತರು ಕೃಷಿ ಚಟುವಟಿಕೆಗಾಗಿ ಬಳಸಿಕೊಳ್ಳಬಹುದು. ಈ ಯೋಜನೆಗಾಗಿ ಕೇಂದ್ರ ಸರ್ಕಾರವು 60 ಸಾವಿರ ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಆ ಹಣದಲ್ಲಿ ಕೃಷ್ಣಾ, ಗೋದಾವರಿ, ಕಾವೇರಿ ಮತ್ತು ಪೆನ್ನಾರ್ ನದಿಗಳನ್ನು ಜೋಡಣೆ ಮಾಡುವ ಉದ್ದೇಶ ಇದೆ ಎಂದು ಹೇಳಿಕೊಂಡಿದ್ದಾರೆ. ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ರತನ್ ಲಾಲ್ ಕಟಾರಿಯಾ ಕೂಡ ಇಂಟರ್ ಲಿಂಕಿಂಗ್ ಆಫ್ ರಿವರ್ಸ್ (ಐಎಲ್ ಆರ್) ವಿಶೇಷ ಸಮಿತಿ ಜತೆ ಸಭೆ ನಡೆಸಿದ್ದಾರೆ. ಆಗ ತಿಳಿದು ಬಂದಿದ್ದು ಏನೆಂದರೆ, ಕೇನ್- ಬೇಟ್ವಾ ಅಂತರರಾಜ್ಯ ನದಿ ಜೋಡಣೆ ಯೋಜನೆ ಬಗ್ಗೆ ಕೂಡ ಚರ್ಚೆ ಆಗಿದೆ. ಇದು ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳನ್ನು ಒಳಗೊಂಡಿದೆ. ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಅಂತಿಮವಾಗಿದೆ. ಇದೀಗ ಎಲ್ಲವೂ ಅಂತಿಮ ರೂಪ ಪಡೆದಿದ್ದು, ಸದ್ಯದಲ್ಲೇ ಕೆಲಸ ಆರಂಭವಾಗುವ ಸಾಧ್ಯತೆ ಇದೆ. ಇನ್ನು ರಾಜ್ಯದೊಳಗೇ ಇರುವ ನದಿಗಳ ಜೋಡಣೆ ಸಾಧ್ಯತೆ- ಅಗತ್ಯದ ಬಗ್ಗೆ ಚರ್ಚೆ ನಡೆಯಬೇಕಿದೆ.
ವಿವಿಧ ನದಿ ಜೋಡಣೆಗಳ ಬಗ್ಗೆ ಚರ್ಚೆ
ಕೇನ್- ಬೆಟ್ವಾ ಅಂತರರಾಜ್ಯ ನದಿ ಜೋಡಣೆ ಹೊರತುಪಡಿಸಿ, ಪಾರ್- ತಾಪಿ- ನರ್ಮದಾ ಜೋಡಣೆ, ದಾಮಗಂಗಾ- ಪಿಂಜಲ್, ದಾಮಗಂಗಾ- ವೈತರಣ- ಗೋದಾವರಿ, ದಾಮಗಂಗಾ (ಏಕ್ ದಾರೆ)-ಗೋದಾವರಿ ಜೋಡಣೆ, ಬೇಡ್ತಿ- ವರದಾ ಜೋಡಣೆ, ಕಾವೇರಿ (ಕಟ್ಟಳೈ)-ವೈಗೈ-ಗುಂಡಾರ್ ಜೋಡಣೆ ಯೋಜನೆ ಬಗ್ಗೆ ಕೂಡ ಪರಿಶೀಲನೆ ಮಾಡಲಾಗಿದೆ. ಗೋದಾವರಿ ನೀರನ್ನು ಕಾವೇರಿ ಕೊಳ್ಳದ ತನಕ ತೆಗೆದುಕೊಂಡು ಹೋಗುವ ಪ್ರಮುಖ ಪ್ರಸ್ತಾವ, ಪೂರ್ವ ರಾಜಸ್ತಾನದ ಕಾಲುವೆ ಯೋಜನೆಗಳನ್ನು ಒಗ್ಗೂಡಿಸುವುದು, ಪರ್ಬತಿ-ಕಾಳಿಸಿಂಧ್-ಚಂಬಲ್ ಜೋಡಣೆ ಮತ್ತು ಮಾನಸ್-ಸಂಕೋಶ್-ತೀಸ್ತಾ-ಗಂಗಾ (ಎಂಎಸ್ ಟಿಜಿ) ಜೋಡಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಭಾರತದ ಜನರಿಗೆ ಪ್ರಯೋಜನ
ಕೇಂದ್ರ ಸರ್ಕಾರದ ಅಧಿಕಾರಿಗಳು 9 ರಾಜ್ಯದ 47 ಅಂತರರಾಜ್ಯ ನದಿ ಜೋಡಣೆ ಯೋಜನೆ ಪ್ರಸ್ತಾವಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನು ಹೊರತುಪಡಿಸಿ, ರಾಷ್ಟ್ರೀಯ ಜಲ ಅಭಿವೃದ್ಧಿ ನಿಗಮ, ರಾಷ್ಟ್ರೀಯ ನದಿ ಜೋಡಣೆ ಪ್ರಾಧಿಕಾರ ಮತ್ತು ನದಿ ಜೋಡಣೆಯ ಟಾಸ್ಕ್ ಫೋರ್ಸ್ ನ ಪುನರ್ ರಚನೆ ಬಗ್ಗೆಯೂ ಚರ್ಚೆ ನಡೆದಿದೆ. ಈ ಯೋಜನೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಗತ್ಯ ಸಂದರ್ಭದಲ್ಲಿ ತಮ್ಮ ಸಲಹೆ- ಸೂಚನೆಗಳನ್ನು ನೀಡಿದ್ದಾರೆ. ಪ್ರಧಾನಿ ಮೋದಿ ಮಾತನಾಡಿ, ಈ ಯೋಜನೆಯು ಭಾರತದ ಜನರಿಗಾಗಿ ಮಾತ್ರ ಮೀಸಲಾದದ್ದು. ಎಲ್ಲೆಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೋ ಹಾಗೂ ಬರದಿಂದ ಬಳಲುತ್ತಿದ್ದಾರೋ ಅಂಥವರಿಗೆ ಈ ಯೋಜನೆಯಿಂದ ಅನುಕೂಲ ಆಗಬೇಕು ಎಂದಿದ್ದಾರೆ.
ವಾಜಪೇಯಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು
ನದಿ ಜೋಡಣೆ ಮಾಡುವುದರಿಂದ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ ಎಂದಿರುವ ಮೋದಿ, 2018ರಲ್ಲಿ ಒಂದು ಹೇಳಿಕೆ ನೀಡಿದ್ದರು. ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ 17ರಷ್ಟು ಮಂದಿ ಭಾರತದಲ್ಲಿ ವಾಸವಿದ್ದಾರೆ. ಆದರೆ ಭಾರತದಲ್ಲಿ ನಾಲ್ಕು ಪರ್ಸೆಂಟ್ ಮಾತ್ರ ನೀರಿದೆ. ನದಿ ಜೋಡಣೆ ಮಾಡಬೇಕು ಎಂಬುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಈ ಯೋಜನೆ ಅಡಿಯಲ್ಲಿ ಹಿಮಾಲಯ ಭಾಗದ 16 ನದಿಗಳು ಹಾಗೂ ಉಳಿದ ಭಾಗದ 14 ನದಿಗಳು ಬರುತ್ತವೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದರು.


Click it and Unblock the Notifications