ನವದೆಹಲಿ, ಸೆಪ್ಟೆಂಬರ್ 11: ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ಮಂದಗತಿಗೆ ತಲುಪಿರುವ ದೇಶದ ಉತ್ಪಾದನಾ ವಲಯಕ್ಕೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ 1.68 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಯಿದೆ.
ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಕಂಪನಿಗಳನ್ನು ಆಕರ್ಷಿಸಲು 23 ಬಿಲಿಯನ್ ಡಾಲರ್ ಅಥವಾ 1.68 ಲಕ್ಷ ಕೋಟಿ ಮೌಲ್ಯದ ಪ್ರೋತ್ಸಾಹ ಧನ ನೀಡಲು ಯೋಜಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಬ್ಲೂಮ್‌ಬರ್ಗ್ ನ್ಯೂಸ್ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಟೋಮೊಬೈಲ್, ಸೌರ ಘಟಕ, ಉಕ್ಕಿನಿಂದ ಎಲೆಕ್ಟ್ರಾನಿಕ್ಸ್ ತನಕ ಪ್ರೋತ್ಸಾಹಿಸುವ ಯೋಜನೆಯನ್ನು ಹೊಂದಿದೆ. ಜವಳಿ ಘಟಕಗಳು, ಆಹಾರ ಸಂಸ್ಕರಣಾ ಘಟಕಗಳು ಮತ್ತು ವಿಶೇಷ ಔಷಧ ಉತ್ಪನ್ನ ತಯಾರಕರನ್ನೂ ಸಹ ಯೋಜನೆಗೆ ಪರಿಗಣಿಸಲಾಗುತ್ತದೆ.

ಕೇಂದ್ರ ಸರಕಾರ ಮೊಬೈಲ್ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ವರ್ಷದ ಆರಂಭದಲ್ಲಿ ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಯೊಂದಕ್ಕೆ ಚಾಲನೆ ನೀಡಿತ್ತು. ಇದರ ಪರಿಣಾಮ ಸುಮಾರು ಎರಡು ಡಜನ್ ಕಂಪನಿಗಳು ಭಾರತದಲ್ಲಿ ಮೊಬೈಲ್ ಉತ್ಪಾದನೆ ಹೆಚ್ಚಿಸಲು 1.5 ಬಿಲಿಯನ್ ಡಾಲರ್ (ಸುಮಾರು 11,000 ಕೋಟಿ ರೂ.) ಹೂಡಿಕೆ ಮಾಡಲು ಒಪ್ಪಿದ್ದವು. ಸ್ಯಾಮ್‌ಸಂಗ್, ಫಾಕ್ಸ್‌ಕಾನ್, ವಿಸ್ಟ್ರೋನ್ ಸೇರಿದಂತೆ ನಾನಾ ಕಂಪನಿಗಳು ಮೊಬೈಲ್ ಉತ್ಪಾದನೆ ವೃದ್ಧಿಸಲು ಒಪ್ಪಿವೆ. ಇದೇ ಮಾದರಿಯನ್ನು ಇತರ ಹಲವು ವಲಯಗಳಿಗೆ ವಿಸ್ತರಿಸಲು ಕೇಂದ್ರ ಮುಂದಾಗಿದೆ.
ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 23.9 ರಷ್ಟು ಸಂಕುಚಿತಗೊಂಡಾಗ ಆರ್ಥಿಕತೆಯು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಹೂಡಿಕೆಗಳನ್ನು ಆಕರ್ಷಿಸುವ ಕೆಲಸ ಮಾಡುತ್ತಿದೆ. ಕಾರ್ಪೊರೇಟ್ ತೆರಿಗೆಗಳು ಈಗಾಗಲೇ ಏಷ್ಯಾದಲ್ಲಿ ಅತ್ಯಂತ ಕೆಳಮಟ್ಟದಲ್ಲಿವೆ, ಆದರೆ ವ್ಯವಹಾರದ ಸುಲಭತೆಯನ್ನು ಸುಧಾರಿಸಲು ದಿವಾಳಿತನ ನಿಯಮಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ.


Click it and Unblock the Notifications