ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ಮತ್ತು ಇತರ ಬಿಜೆಪಿಯೇತರ ರಾಜ್ಯಗಳ ವಿರುದ್ಧ ಹಣ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಹಣ ಬಿಡುಗಡೆ ವಿಷಯದಲ್ಲಿ ನಾವು ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಆರೋಪವನ್ನು ರಾಜಕೀಯ ಎಂದು ಹೇಳಿಕೊಂಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಉತ್ತಮವಾಗಿ ಇರಿಸಲಾಗಿದೆ. ಹೀಗಾಗಿ, ಯಾರ ಆಶಯಗಳು ಮತ್ತು ಕಲ್ಪನೆಗಳಿಗೆ ಅನುಗುಣವಾಗಿ ಬದಲಾಯಿಸಲಾಗುವುದಿಲ್ಲ ಎಂದ ಸಚಿವೆ ಹಣಕಾಸಿನ ಒತ್ತಡಕ್ಕೆ ಕರ್ನಾಟಕ ಸರ್ಕಾರದ ಚುನಾವಣಾ ಖಾತರಿಗಳೇ ಕಾರಣ ಎಂದು ಬೆರಳು ತೋರಿಸಿದರು.

ಕರ್ನಾಟಕ ಸರ್ಕಾರ ತನ್ನ ನ್ಯಾಯಸಮ್ಮತ ಬಾಕಿಯಿಂದ ವಂಚಿತವಾಗಿದೆ ಎಂಬ ಆರೋಪವನ್ನು ಮಂಡಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ. "ಯಾವುದೇ ಹಣಕಾಸು ಸಚಿವರು 'ನನಗೆ ಈ ರಾಜ್ಯ ಇಷ್ಟವಿಲ್ಲ, ಪಾವತಿ ನಿಲ್ಲಿಸಿ' ಎಂದು ಹೇಳಿಕೊಂಡು ಮಧ್ಯಪ್ರವೇಶಿಸುವ ಸಾಧ್ಯತೆಯಿಲ್ಲ. ಅದು ಅಸಾಧ್ಯ, ಹಾಗೆ ಆಗಲು ಸಾಧ್ಯವೇ ಇಲ್ಲ. ವ್ಯವಸ್ಥೆಗಳನ್ನು ಉತ್ತಮವಾಗಿ ಇರಿಸಲಾಗಿದೆ," ಎಂದು ತಿಳಿಸಿದರು.
ನೇರ ತೆರಿಗೆಗಳ ಅಡಿಯಲ್ಲಿ ಸಂಗ್ರಹಿಸಲಾದ ನಿಧಿಯ ವಿಕೇಂದ್ರೀಕರಣವನ್ನು ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಮಾಡಲಾಗುತ್ತದೆ. ಆದರೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಯಂತೆ ಸಂಗ್ರಹಿಸಲಾದ ಸಂಪೂರ್ಣ ಹಣವು ರಾಜ್ಯಗಳಿಗೆ ಹೋಗುತ್ತದೆ ಎಂದು ಅವರು ಒತ್ತಿ ಹೇಳಿದರು.
15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಭಾಗಿಸಬಹುದಾದ ತೆರಿಗೆಯಿಂದ ಶೇ.41ರಷ್ಟು ಹಣವನ್ನು ರಾಜ್ಯಗಳಿಗೆ ನೀಡಬೇಕು. ಜಿಎಸ್‌ಟಿ ನಿಧಿಯ ವಿಕೇಂದ್ರೀಕರಣದ ಕುರಿತು, ನಿರ್ಮಲಾ ಅವರು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಅಡಿಯಲ್ಲಿ ಸಂಗ್ರಹಿಸಲಾದ ನಿಧಿಯ ವಿತರಣೆಯನ್ನು ಜಿಎಸ್‌ಟಿ ಕೌನ್ಸಿಲ್ ನಿಯತಕಾಲಿಕವಾಗಿ ಪರಿಶೀಲಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
"ನನ್ನ ಇಚ್ಛೆ ಮತ್ತು ಅಭಿಪ್ರಾಯಗಳ ಪ್ರಕಾರ ನಿಯಮಗಳನ್ನು ಬದಲಾಯಿಸುವ ಹಕ್ಕು ನನಗಿಲ್ಲ. ನನಗೆ ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ. ಕೆಲವು ರಾಜ್ಯಗಳ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂಬ ಈ ಆತಂಕವು ರಾಜಕೀಯವಾಗಿ ವಿನಾಶಕಾರಿ ನಿರೂಪಣೆಯಾಗಿದೆ. ಇದನ್ನು ಹೇಳಲು ನನಗೆ ವಿಷಾದವಿದೆ, ಪಟ್ಟಭದ್ರ ಹಿತಾಸಕ್ತಿಗಳು ಹೇಳಲು ಸಂತೋಷಪಡುತ್ತವೆ," ಎಂದು ಹೇಳಿದರು.
ಕರ್ನಾಟಕ ಮತ್ತು ಇತರ ಬಿಜೆಪಿಯೇತರ ಆಡಳಿತದ ರಾಜ್ಯಗಳಾದ ತಮಿಳುನಾಡು, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳವು ನರೇಂದ್ರ ಮೋದಿ ಸರ್ಕಾರವು ನಿಧಿ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸುತ್ತಿದೆ.
"15 ನೇ ಹಣಕಾಸು ಆಯೋಗದ ಅಡಿಯಲ್ಲಿ ಕರ್ನಾಟಕವು 1.87 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಮತ್ತು ರಾಜ್ಯಕ್ಕೆ ಈ ದೊಡ್ಡ ಅನ್ಯಾಯದ ವಿರುದ್ಧ ಈ ವಾರ ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ," ಎಂದು ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದ ಎಲ್ಲಾ ಕಾಂಗ್ರೆಸ್ ಶಾಸಕರು ಫೆಬ್ರವರಿ 7 ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.


Click it and Unblock the Notifications