ಅಮರಾವತಿ, ಜೂನ್ 11: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಒಂದು ದಿನ ಮೊದಲು, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ಅಮರಾವತಿ ರಾಜ್ಯದ ಏಕೈಕ ರಾಜಧಾನಿಯಾಗಲಿದೆ ಎಂದು ಘೋಷಿಸಿದರು.
ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಎನ್‌ಡಿಎ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಶಾಸಕರ ಜಂಟಿ ಸಭೆಯನ್ನು ಉದ್ದೇಶಿಸಿ ನಾಯ್ಡು ಈ ಘೋಷಣೆ ಮಾಡಿದರು. ನಮ್ಮ ಸರ್ಕಾರದಲ್ಲಿ ಮೂರು ರಾಜಧಾನಿಗಳ ನೆಪದಲ್ಲಿ ಆಟ ನಡೆಯುವುದಿಲ್ಲ. ನಮ್ಮ ರಾಜಧಾನಿ ಅಮರಾವತಿ. ಅಮರಾವತಿಯೇ ರಾಜಧಾನಿ" ಎಂದು ನಾಯ್ಡು ಪ್ರತಿಪಾದಿಸಿದರು.

2014 ಮತ್ತು 2019 ರ ನಡುವೆ ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ, ಅವರು ರಾಜಧಾನಿಯಾಗಿ ಅಮರಾವತಿಯ ಕಲ್ಪನೆಯನ್ನು ವಿವರಿಸಿದರು. ಆದಾಗ್ಯೂ, 2019 ರಲ್ಲಿ ಟಿಡಿಪಿ ಅಧಿಕಾರವನ್ನು ಕಳೆದುಕೊಂಡಾಗ ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಭರ್ಜರಿ ಜಯ ಸಾಧಿಸಿದಾಗ ನಾಯ್ಡು ಅವರ ಈ ಕಲ್ಪನೆ ಹಿನ್ನಡೆ ಅನುಭವಿಸಿತ್ತು.
ರೆಡ್ಡಿ ಅವರು ಅಮರಾವತಿ ರಾಜಧಾನಿ ನಗರ ಯೋಜನೆಗಳ ಮೇಲೆ ತಣ್ಣೀರು ಎರಚಿದ್ದರು. ಮೂರು ರಾಜಧಾನಿಗಳ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು, ನಾಯ್ಡು ಈಗ ಒಂದೇ ರಾಜಧಾನಿಯನ್ನು ಹೊಂದುವ ನಿರ್ಧಾರದೊಂದಿಗೆ ಬದಲಾಯಿಸಿದ್ದಾರೆ. ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಎನ್‌ಡಿಎ ಮೈತ್ರಿಕೂಟ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಏಕಕಾಲಿಕ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ 164 ವಿಧಾನಸಭೆ ಮತ್ತು 21 ಲೋಕಸಭೆ ಸ್ಥಾನಗಳ ಬಹುಮತದೊಂದಿಗೆ ಭರ್ಜರಿ ಜಯ ಸಾಧಿಸಿದೆ.


Click it and Unblock the Notifications