ಕೋಟ್ಯಾಧಿಪತಿ, ಶತಕೋಟ್ಯಾಧಿಪತಿ ಆಗುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಲಕ್ಷಾಧಿಪತಿ ಆದರೂ ಕೂಡಾ ಬಡವರಿಗೆ, ದುಡಿಯುವ ವರ್ಗಕ್ಕೆ ದೊಡ್ಡ ಮೊತ್ತ ಹೌದು. ಹಾಗಿರುವಾಗ ಚೆನ್ನೈನ ಕ್ಯಾಬ್ ಡ್ರೈವರ್ ಒಬ್ಬರು ಶತ ಕೋಟ್ಯಾಧಿಪತಿ ಆಗಿದ್ದಾರೆ. ಆದರೆ ಬರೀ 30 ನಿಮಿಷಕ್ಕೆ?!
ರಾಜ್‌ಕುಮಾರ್ ಎಂಬ ಚೆನ್ನೈ ಕ್ಯಾಬ್ ಡ್ರೈವರ್‌ಗೆ ಬ್ಯಾಂಕ್‌ನ ಮೆಸೇಜ್ ನೋಡಿ ಆಶ್ಚರ್ಯವಾಗಿದೆ. ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ಈ ಕ್ಯಾಬ್ ಡ್ರೈವರ್‌ನ ಖಾತೆಗೆ 9,000 ಕೋಟಿ ರೂಪಾಯಿಗಳನ್ನು ತಪ್ಪಾಗಿ ಜಮೆ ಮಾಡಿದೆ. ಈ ಮೊತ್ತ ಜಮೆ ಆಗುವುದಕ್ಕೂ ಮುನ್ನ ಕ್ಯಾಬ್ ಡ್ರೈವರ್ ಖಾತೆಯಲ್ಲಿದ್ದದ್ದು ಬರೀ 105 ರೂಪಾಯಿ ಎಂದು ವರದಿ ಹೇಳಿದೆ.

ಮೊದಲು ರಾಜ್‌ಕುಮಾರ್ ತನ್ನ ಖಾತೆಗೆ ಹಣ ಜಮೆ ಆಗಿರುವ ಮೆಸೇಜ್ ಬಂದಾಗ ಇದು ತಮಾಷೆ ಆಗಿರಬಹುದು, ಸ್ಕ್ಯಾಮ್ ಆಗಿರಬಹುದು ಎಂದು ಹಾಗೆಯೇ ಬಿಟ್ಟರು. ಆದರೆ ಇದು ನಿಜವಾಗಿ ಬ್ಯಾಂಕ್‌ನಿಂದ ಆದ ತಪ್ಪು ಎಂದು ತಿಳಿದಾಗ ಅವರಿಗೆ ಆಘಾತವಾಗಿದೆ.
ಆದರೆ ಕ್ಯಾಬ್ ಡ್ರೈವರ್ ಸುಮಾರು 30 ನಿಮಿಷ ಶತಕೋಟ್ಯಾಧಿಪತಿ ಎನಿಸಿಕೊಂಡಿದ್ದಾರೆ. ಹಾಗೆಯೇ 30 ನಿಮಿಷಗಳಲ್ಲಿ, ಬ್ಯಾಂಕ್ ದೋಷವನ್ನು ಸರಿಪಡಿಸುವ ಮೊದಲು ರಾಜ್‌ಕುಮಾರ್ 21,000 ರೂಪಾಯಿಗಳನ್ನು ತರಾತುರಿಯಲ್ಲಿ ಸ್ನೇಹಿತರಿಗೆ ವರ್ಗಾಯಿಸಿದ್ದಾರೆ. ಅದಾದ ಬಳಿಕ ಬ್ಯಾಂಕ್ ಹಣವನ್ನು ರಾಜ್‌ಕುಮಾರ್ ಖಾತೆಯಿಂದ ವರ್ಗಾಯಿಸಿದೆ.
ರಾಜ್‌ಕುಮಾರ್ ಪಳನಿ ಸಮೀಪದ ನೈಕ್ಕರಪಟ್ಟಿ ಗ್ರಾಮದವರಾಗಿದ್ದಾರೆ. ತನ್ನೊಂದಿಗೆ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುವ ಸ್ನೇಹಿತರೊಂದಿಗೆ ಕೋಡಂಬಾಕ್ಕಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸೆಪ್ಟೆಂಬರ್ 9 ರಂದು ದಣಿದು ಮಧ್ಯಾಹ್ನ ಸ್ವಲ್ಪ ನಿದ್ರೆ ಮಾಡಲು ನಿರ್ಧರಿಸಿದರು.
ಮಧ್ಯಾಹ್ನ 3 ಗಂಟೆಗೆ, ರಾಜ್‌ಕುಮಾರ್ ಫೋನ್‌ಗೆ ಅವರ ಬ್ಯಾಂಕ್ ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ (ಟಿಎಂಬಿ) ನಿಂದ ಎಸ್‌ಎಂಎಸ್ ಅಥವಾ ಸಂದೇಶ ಬಂದಿದೆ. ಆ ಮೆಸೇಜ್ ನೋಡಿದಾಗ ಖಾತೆಗೆ ಭಾರೀ ಪ್ರಮಾಣದಲ್ಲಿ ಹಣ ಜಮೆಯಾಗಿರುವುದು ಕಂಡು ಬಂದಿದೆ. ರಾಜ್‌ಕುಮಾರ್ ಒಮ್ಮೆಲೇ ಆಶ್ಚರ್ಯಗೊಂಡಿದ್ದಾರೆ. ಹಲವಾರು ಸೊನ್ನೆಗಳನ್ನು ನೋಡಿ ಅದೆಷ್ಟು ಎಂದು ಲೆಕ್ಕಹಾಕುವಷ್ಟು ಕೂಡಾ ತಲೆ ಓಡದಂತಾಗಿದೆ.
ಅದಾದ ಬಳಿಕ ತೂತುಕುಡಿ ಬ್ಯಾಂಕ್ ಶಾಖೆಯ ಪ್ರತಿನಿಧಿಗಳು ರಾಜ್‌ಕುಮಾರ್ ಅವರನ್ನು ಭೇಟಿಯಾಗಿ, ಬ್ಯಾಂಕ್‌ನ ದೋಷದ ಬಗ್ಗೆ ತಿಳಿಸಿದ್ದಾರೆ. ಹಾಗೆಯೇ ಹಣವನ್ನು ವರ್ಗಾವಣೆ ಮಾಡದಂತೆ ಸಲಹೆ ನೀಡಿದ್ದಾರೆ. ಅದಕ್ಕೂ ಮುನ್ನವೇ ರಾಜ್‌ಕುಮಾರ್ ಇದರಲ್ಲಿ 21,000 ರೂಪಾಯಿ ಸ್ನೇಹಿತರಿಗೆ ವರ್ಗಾಯಿಸಿದ್ದಾರೆ.
ಇನ್ನು ಇದಾದ ಬಳಿಕ ರಾಜ್‌ಕುಮಾರ್ ತನ್ನ ಕಾನೂನು ಸಲಹೆಗಾರರೊಂದಿಗೆ ಬ್ಯಾಂಕಿನ ಟಿ ನಗರ ಶಾಖೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಸಭೆ ನಡೆದಿದ್ದು, ಎರಡೂ ಕಡೆಯವರು ಪರಸ್ಪರ ಮಾತುಕತೆ ನಡೆಸಿ, ಒಂದು ನಿರ್ಧಾರ ಮಾಡಿಕೊಂಡಿದ್ದಾರೆ. "ನಾನು ಇಲ್ಲಿಯವರೆಗೆ ಹಿಂಪಡೆದಿರುವ ಮೊತ್ತವನ್ನು ಹಿಂದಿರುಗಿಸಬೇಕಾಗಿಲ್ಲ ಎಂದು ಬ್ಯಾಂಕ್ ಹೇಳಿದೆ. ನನಗೆ ಕಾರು ಸಾಲವನ್ನು ಕೂಡಾ ಬ್ಯಾಂಕ್ ನೀಡಿದೆ," ಎಂದು ರಾಜಕುಮಾರ್ ಹೇಳಿದರು.


Click it and Unblock the Notifications