ಇವತ್ತಿನ ಆರ್ಥಿಕ ಸ್ಥಿತಿಯು 'ಭಗವಂತನ ಆಟ' ಎಂದು ಬಣ್ಣಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಶನಿವಾರ ಕಿಡಿ ಕಾರಿದ್ದಾರೆ. ಹಣಕಾಸು ಸಚಿವೆ 'ದೇವದೂತ'ರಂತೆ ಮಾತನಾಡುತ್ತಿದ್ದಾರೆ. ಕೊರೊನಾ ಬಿಕ್ಕಟ್ಟಿಗೂ ಮುಂಚೆ ಆಗಿರುವ ಆರ್ಥಿಕತೆಯ 'ಅಸಮರ್ಪಕ ನಿರ್ವಹಣೆ' ಬಗ್ಗೆ ವಿವರಿಸಲಿ ಎಂದು ಒತ್ತಾಯಿಸಿದ್ದಾರೆ.
ಆರ್ಥಿಕತೆಗೆ ಕೊರೊನಾ ಬಿಕ್ಕಟ್ಟಿನಿಂದ ಪೆಟ್ಟು ಬಿದ್ದಿದೆ. ಇದು ಭಗವಂತನ ಆಟ. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಇಳಿಕೆಯನ್ನು ಕಾಣಬೇಕಾಗುತ್ತದೆ ಎಂದು ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚಿದಂಬರಂ, ಕೊರೊನಾ ಬಿಕ್ಕಟ್ಟು ಎಂಬುದು ಭಗವಂತನ ಆಟವಾದರೆ, ಅದಕ್ಕೂ ಮುಂಚೆ 2017- 18, 2018- 19 ಹಾಗೂ 2019- 20ರಲ್ಲಿ ಆಗಿರುವ ಆರ್ಥಿಕತೆ ಅಸಮರ್ಪಕ ನಿರ್ವಹಣೆಯನ್ನು ಹೇಗೆ ಬಣ್ಣಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ದೇವದೂತರೇ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇವದೂತರೇ ಎಂಬುದಕ್ಕೆ ದಯವಿಟ್ಟು ಉತ್ತರಿಸಲಿ ಎಂದು ವ್ಯಂಗ್ಯವಾಡಿದ್ದಾರೆ. ಜಿಎಸ್ ಟಿ ಬಾಕಿಯನ್ನು ಪಾವತಿ ಮಾಡಬೇಕಿರುವ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಾಲ ಪಡೆದುಕೊಳ್ಳುವಂತೆ ಸೂಚಿಸಿರುವುದನ್ನು ಸಹ ಒಪ್ಪಲಾಗದ ನಡೆ. ಜಿಎಸ್ ಟಿ ಪರಿಹಾರವನ್ನು ನೀಡಲಾಗದೆ ಮೋದಿ ಸರ್ಕಾರ ಈಗ ರಾಜ್ಯ ಸರ್ಕಾರಗಳ ಮುಂದಿಟ್ಟಿರುವ ಎರಡು ಆಯ್ಕೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಹೊರೆ
ರಾಜ್ಯ ಸರ್ಕಾರಗಳಿಗೆ ಭವಿಷ್ಯದಲ್ಲಿ ಪರಿಹಾರ ಸೆಸ್ ಮೂಲಕ ಬರುವ ಆದಾಯವನ್ನು ಅಡಮಾನ ಮಾಡಿ ಸಾಲ ಪಡೆಯುವುದು ಕೇಂದ್ರ ಸರ್ಕಾರ ನೀಡಿದ ಮೊದಲ ಆಯ್ಕೆ. ಇದರಿಂದ ಸಂಪೂರ್ಣ ಆರ್ಥಿಕ ಹೊರೆ ರಾಜ್ಯಗಳ ಮೇಲೆ ಬೀಳುತ್ತದೆ. ಇನ್ನು ಎರಡನೇ ಆಯ್ಕೆಯಲ್ಲಿ ಆರ್ ಬಿಐ ಮೂಲಕ ಸಾಲ ಪಡೆಯಲು ತಿಳಿಸಲಾಗಿದೆ. ಇದು ಕೂಡ ಮಾರುಕಟ್ಟೆಯಲ್ಲಿ ಸಾಲ ಪಡೆದಂತೆಯೇ. ಆದರೆ ಹೆಸರು ಬೇರೆ ಅಷ್ಟೇ. ಮತ್ತೆ ಸಂಪೂರ್ಣ ಹಣಕಾಸು ಹೊರೆ ರಾಜ್ಯಗಳ ಮೇಲೆ ಬೀಳುತ್ತದೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ಯಾವುದೇ ಹಣಕಾಸು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದಿರುವ ಅವರು, ಇದು ಒಟ್ಟಾರೆ ವಿಶ್ವಾಸದ್ರೋಹ ಹಾಗೂ ನೇರವಾಗಿ ಕಾನೂನು ಉಲ್ಲಂಘನೆ ಎಂದು ಆರೋಪಿಸಿದ್ದಾರೆ. ಈಚೆಗೆ ನಡೆದ ಜಿಎಸ್ ಟಿ ಸಮಿತಿಯ ಸಭೆಯ ನಂತರ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದರು.


Click it and Unblock the Notifications