ವಿಶ್ವದಲ್ಲಿ ಪ್ರತಿ ರಾಷ್ಟ್ರಗಳು ಕೊರೊನಾವೈರಸ್ ಭೀತಿಯಲ್ಲಿವೆ. ಅದರಲ್ಲೂ ಪ್ರಮುಖವಾಗಿ ಚೀನಾ ದೇಶದಲ್ಲಂತೂ ನೂರಾರು ಸಂಖ್ಯೆಯಲ್ಲಿ ಕೊರೊನಾವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. 30 ಸಾವಿರಕ್ಕೂ ಹೆಚ್ಚು ಜನರು ಸೋಂಕಿತರಾಗಿದ್ದಾರೆ. ಇದರ ಜೊತೆಗೆ ಜಾಗತಿಕ ಮಾರುಕಟ್ಟೆಯ ಮೇಲೂ ಕೊರೊನಾವೈರಸ್ ಪ್ರಭಾವ ಬೀರುತ್ತಿದೆ.
ಮಾರಣಾಂತಿಕ ವೈರಾಣು ಕೊರೊನಾ ನಿಯಂತ್ರಣಕ್ಕೆ ತರಲು ಚೀನಾ ದೇಶವು ಹರಸಾಹಸ ಪಡುತ್ತಿದೆ. ಈಗಾಗಲೇ ಚೀನಾ ಮಾತ್ರವಲ್ಲ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ವ್ಯಾಪಾರ-ವಹಿವಾಟು, ಪ್ರಮುಖವಾಗಿ ಪ್ರವಾಸೋದ್ಯಮದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.
ಸರಕುಗಳ ಆಮದು ಮೇಲೆ ನಿಷೇಧ
ಚೀನಾ, ಮ್ಯಾನ್ಮಾರ್ ಮತ್ತು ಆಗ್ನೇಯ ಏಷ್ಯಾದ ದೇಶಗಳಿಂದ ಪ್ಯಾಕೇಜ್ ಮಾಡಲಾದ ಆಹಾರ ಪದಾರ್ಥಗಳ ಆಮದನ್ನು ಈಶಾನ್ಯ ರಾಜ್ಯ ಮಣಿಪುರ ನಿಷೇಧಿಸಿದೆ. ಜೊತೆಗೆ ಆಂಧ್ರ ಪ್ರದೇಶದಿಂದ ಮೆಣಸಿನಕಾಯಿ ಮತ್ತು ಮಹಾರಾಷ್ಟ್ರದಿಂದ ಹತ್ತಿಯಂತಹ ವಿವಿಧ ರಫ್ತು ಉತ್ಪನ್ನಗಳನ್ನು ಚೀನಾ ಆಮದಿಗೆ ನಿರಾಕರಿಸಿದ ಕಾರಣ ಸ್ಥಳೀಯ ರೈತರ ಮತ್ತು ಕೈಗಾರಿಕೆಗಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ.
ಅತಂತ್ರವಾದ ತೈಲ ಮಾರುಕಟ್ಟೆ
ಏಷ್ಯಾದ ದೇಶಗಳಲ್ಲಿ ಹೆಚ್ಚುವರಿಯಾಗಿ ಪೆಸಿಫಿಕ್ ಪ್ರದೇಶ, ಮಧ್ಯಪ್ರಾಚ್ಯ ತೈಲಗಳ ಮೇಲೆ ಚೀನಾ ದೇಶವು ಹೆಚ್ಚು ಅವಲಂಬಿತವಾಗಿದೆ. ಇದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ. 2019ರಲ್ಲಿ ಚೀನಾದ ತೈಲ ಬೇಡಿಕೆ ನಿತ್ಯ 13.9 ಮಿಲಿಯನ್ ಬ್ಯಾರೆಲ್ ನಷ್ಟಿತ್ತು. ಇದು ಜಾಗತಿಕ ಮಾರುಕಟ್ಟೆಯ 14 ಪರ್ಸೆಂಟ್‌ರಷ್ಟು ಬೇಡಿಕೆಯಾಗಿದೆ. 2003ರಲ್ಲಿ ನಿತ್ಯ 5.6 ಮಿಲಿಯನ್ ಬ್ಯಾರೆಲ್ ನಷ್ಟು ಅಂದರೇ 7 ಪರ್ಸೆಂಟ್‌ರಷ್ಟಿತ್ತು. ಹೀಗಾಗಿ, ಚೀನಾದ ಪ್ರತಿಯೊಂದು ಆರ್ಥಿಕ ವಿದ್ಯಮಾನ ವಿಶ್ವದ ಯಾವುದೇ ರಾಷ್ಟ್ರದ ಮೇಲೋ ಒಂದಿಲ್ಲೊಂದು ರೀತಿಯಲ್ಲಿ ಕರಿನೆರಳು ಬೀರಲಿದೆ.
ಆಟೋಮೊಬೈಲ್, ವಾಹನೋದ್ಯಮದ ಮೇಲೆ ಪೆಟ್ಟು
ಚೀನಾದಿಂದ ತಯಾರಾಗುವ ಯಂತ್ರಗಳ ಬಿಡಿಭಾಗಗಳು ದಕ್ಷಿಣ ಕೊರಿಯಾದ ಕಡಲ ತೀರ ತಲುಪಲು ಸಾಧ್ಯವಾಗದ ಕಾರಣ, ಸಿಯೋಲ್ ಮೂಲದ ಹ್ಯುಂಡೈ ಕಂಪನಿಯು ತನ್ನ ಹದಿಮೂರು ವಾಹನ ತಯಾರಿಕಾ ಘಟಕಗಳ ಪೈಕಿ ಏಳು ಘಟಕಗಳನ್ನು ಸ್ಥಗಿತಗೊಳಿಸಿದೆ. ಇಷ್ಟಲ್ಲದೆ ಬಹುತೇಕ ಕಡೆ ಇದರ ಪರಿಣಾಮ ಬೀರುತ್ತಿದೆ.
ಸಾರ್ಸ್‌ಗಿಂತ ಹೆಚ್ಚು ಪರಿಣಾಮ ಬೀರುತ್ತಿರುವ ಕೊರೊನಾ
ಎಚ್ ಐಎಸ್ ಮಾರ್ಕೆಟ್ ವರದಿಯ ಪ್ರಕಾರ, 2003ರಲ್ಲಿನ ಸಾರ್ಸ್ ವೈರಸ್‌ಗಿಂತ ಕೊರೊನಾ ಅಪಾಯಕಾರಿಯಾಗಿದೆ. ಇದು ಏಕಾಏಕಿ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಸಾರ್ಸ್ ಸೋಂಕು ಹಬ್ಬಿದ್ದ ಸಮಯದಲ್ಲಿ ಚೀನಾ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿತ್ತು. ಆಗ ವಿಶ್ವದ ಜಿಡಿಪಿಯಲ್ಲಿ ಕೇವಲ 4.2 ಪರ್ಸೆಂಟ್‌ರಷ್ಟು ಚೀನಾದ ಜಿಡಿಪಿ ಇತ್ತು.
ಆದರೆ ಈಗ ಚೀನಾ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶ್ವದ ಜಿಡಿಪಿಯ 16.3 ಪರ್ಸೆಂಟ್‌ರಷ್ಟಿದೆ. ಆದ್ದರಿಂದ, ಚೀನಾದ ಆರ್ಥಿಕತೆಯ ಯಾವುದೇ ಏರಿಳಿತವು ಪ್ರಪಂಚದಾದ್ಯಂತ ಏರಿಳಿತದ ಅಲೆಗಳಿಗೆ ಕಾರಣವಾಗಲಿದೆ ಎಂದು ಎಚ್‌ಐಎಸ್ ವರದಿ ಹೇಳಿದೆ.


Click it and Unblock the Notifications