ಕೊರೊನಾ ವಿರುದ್ಧ ಹೋರಾಟಕ್ಕೆ ಪಿಎಂ- CARES ನಿಧಿ ಹಾಗೂ ಭಾರತದ ಇತರ ಆರು ರಾಜ್ಯಗಳಿಗೆ 7 ಕೋಟಿ ರುಪಾಯಿ ನೇರವಾಗಿ ನೀಡಿರುವುದಾಗಿ ಚೀನಾದ ಟೆಲಿಕಾಂ ಕಂಪೆನಿ ಹುವೈ ಹೇಳಿದೆ. ಕೊರೊನಾ ನಿಯಂತ್ರಣಕ್ಕಾಗಿ ರಿಮೋಟ್ ಟೆಂಪರೇಚರ್ ಮಾನಿಟರಿಂಗ್ ನಂಥ ತಂತ್ರಜ್ಞಾನ ಪರಿಷ್ಕಾರವನ್ನು ಭಾರತೀಯ ಅಧಿಕಾರಿಗಳ ಜತೆ ಹಂಚಿಕೊಳ್ಳಲು ಸಿದ್ಧ ಎಂದು ಈಚೆಗೆ ಹುವೈ ಹೇಳಿತ್ತು.
ಹುವೈನ ಭಾರತದ ಸಿಇಒ ಜೇ ಚೆನ್ ಮಾಧ್ಯಮಗಳ ಜತೆಗೆ ಮಾತನಾಡಿ, ಭಾರತದ ಸದ್ಯದ ಸ್ಥಿತಿಗೆ ಚೀನಾದಿಂದ ನಮ್ಮ ಕಲಿಕೆ ಹಾಗೂ ಅನುಭವವನ್ನು ಪರಿಹಾರವಾಗಿ ಬಳಸಲು ಕೆಲಸ ಮಾಡುತ್ತಿದ್ದೇವೆ. ರಿಮೋಟ್ ಟೆಂಪರೇಚರ್ ಮಾನಿಟರಿಂಗ್ ನಂಥ ಹೊಸ ತಂತ್ರಜ್ಞಾನ ಬಳಸಿ, ಕೋವಿಡ್ 19ರಿಂದ ಹೊರಬರಲು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.
5G+ ಥರ್ಮಲ್ ಇಮೇಜಿಂಗ್ ಸಹಾಯದಿಂದ ವೈರಾಣು ನಿಗಾ ಮಾಡಬಹುದು. ಇದರ ಸಹಾಯದಿಂದ ಚಲಿಸುವ ವಸ್ತುಗಳ ತಾಪಮಾನವನ್ನು ಆಗಿಂದಾಗ್ಗೆ ನಿಖರವಾಗಿ ತಿಳಿಯಬಹುದು. ಚೀನಾದಲ್ಲಿ ಕೊರೊನಾ ವೈರಾಣು ಹರಡದಂತೆ ತಡೆಯಲು ಇದೇ ತಂತ್ರಜ್ಞಾನ ಬಳಸಲಾಯಿತು ಎಂದು ಹುವೈ ಕಂಪೆನಿ ಹೇಳಿದೆ.

ಈಚಿನ ಕೊರೊನಾ ಜಾಗತಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಭಾರತ ಸರ್ಕಾರದ ಜತೆಯಾಗಿ ಕೆಲಸ ಮಾಡುವುದಾಗಿ ಹುವೈ ಹೇಳಿದೆ. ನಮ್ಮ ಸಾಮಾಜಿಕ ಜವಾಬ್ದಾರಿಯಾಗಿ ಇದನ್ನು ಪರಿಗಣಿಸಿ, ಸಹಾಯ ಮಾಡುತ್ತೇವೆ ಎಂದು ಚೆನ್ ಹೇಳಿದ್ದಾರೆ. ಅಂದ ಹಾಗೆ ಟೆಲಿಕಾಂ ಆಪರೇಟರ್ ಗಳಾದ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ನಿಂದ ಈಗಾಗಲೇ ಪಿಎಂ- CARES ಫಂಡ್ ಗೆ ದೇಣಿಗೆ ನೀಡಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಐನೂರು ಕೋಟಿ ರುಪಾಯಿ ದೇಣಿಗೆ ಘೋಷಿಸಲಾಗಿದೆ. ಭಾರ್ತಿ ಏರ್ ಟೆಲ್, ಭಾರ್ತಿ ಇನ್ ಫ್ರಾಟೆಲ್ ಮತ್ತಿತರ ಕಂಪೆನಿಗಳು ನೂರು ಕೋಟಿ ರುಪಾಯಿಗೂ ಹೆಚ್ಚು ಮೊತ್ತ ನೀಡುವ ಭರವಸೆ ಕೊಟ್ಟಿವೆ.


Click it and Unblock the Notifications