ಈ ಹಿಂದಿನ ಸೆಷನ್‌ನಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಏರಿಕೆ ಕಂಡಿದ್ದ ಷೇರು ಮಾರುಕಟ್ಟೆ ಶುಕ್ರವಾರ ವಹಿವಾಟಿನ ಅಂತ್ಯಕ್ಕೆ ನಷ್ಟವನ್ನು ಅನುಭವಿಸಿದೆ. ಮಾಹಿತಿ ತಂತ್ರಜ್ಞಾನ, ಹಣಕಾಸು ಮತ್ತು ಇಂಧನ ಷೇರುಗಳು ಭಾರೀ ಕುಸಿತ ಕಂಡಿದೆ.
ಬಿಎಸ್‌ಇ ಸೆನ್ಸೆಕ್ಸ್ ಇಂದು 1,017 ಪಾಯಿಂಟ್‌ಗಳು ಅಥವಾ ಶೇಕಡಾ 1.84 ರಷ್ಟು ಕುಸಿದು 54,303ಕ್ಕೆ ವಹಿವಾಟು ಅಂತ್ಯ ಮಾಡಿದೆ. ಎನ್‌ಎಸ್‌ಇ ನಿಫ್ಟಿ 276 ಪಾಯಿಂಟ್‌ಗಳು ಅಥವಾ 1.68 ಶೇಕಡಾ ಕೆಳಗೆ ಇಳಿದು 16,202 ಕ್ಕೆ ವಹಿವಾಟು ಸ್ಥಿರವಾಗಿದೆ.
ಶುಕ್ರವಾರದ ವಹಿವಾಟಿನಲ್ಲಿ ಹೂಡಿಕೆದಾರರು ಸುಮಾರು 3.11 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಎಲ್ಲಾ ಬಿಎಸ್‌ಇ ಕಂಪನಿಗಳ ಮಾರುಕಟ್ಟೆ ಮೌಲ್ಯವು ರೂಪಾಯಿ 2,51,84,358.86 ಕೋಟಿಗೆ ಕುಸಿದಿದೆ. ನಿಫ್ಟಿ ಮಿಡ್‌ಕ್ಯಾಪ್ ಶೇಕಡಾ 0.83 ರಷ್ಟು, ಸ್ಮಾಲ್ ಕ್ಯಾಪ್ ಶೇಕಡಾ 1.10 ರಷ್ಟು ಕುಸಿತ ಕಂಡಿದೆ.

ಐಟಿ, ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಮತ್ತು ನಿಫ್ಟಿ ಆಯಿಲ್ ಮತ್ತು ಗ್ಯಾಸ್ ಕ್ರಮವಾಗಿ ಶೇಕಡಾ2.17, ಶೇಕಡಾ 2.24 ಮತ್ತು ಶೇಕಡಾ 2.08ರಷ್ಟು ಕೆಳಕ್ಕೆ ಇಳಿದಿದೆ. ಬಜಾಜ್ ಫೈನಾನ್ಸ್ ನಿಫ್ಟಿಯಲ್ಲಿ ಟಾಪ್ ಲೂಸರ್ ಆಗಿದೆ. ಷೇರುಗಳು ಶೇಕಡಾ 4.08 ರಷ್ಟು ಕುಸಿದು ರೂಪಾಯಿ 5,658 ಕ್ಕೆ ತಲುಪಿದೆ. ಇನ್ನು ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ, ಹಿಂಡಾಲ್ಕೊ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಭಾರೀ ನಷ್ಟವನ್ನು ಕಂಡಿದೆ.
ಯಾವೆಲ್ಲಾ ಷೇರುಗಳಿಗೆ ನಷ್ಟ, ಯಾವ ಷೇರಿಗೆ ಲಾಭ?
ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ರಿಲಯನ್ಸ್, ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಸನ್ ಫಾರ್ಮಾ ಭಾರೀ ನಷ್ಟವನ್ನು ಕಂಡಿದೆ. ಈ ನಡುವೆ ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಡಾ ರೆಡ್ಡೀಸ್, ಟೈಟಾನ್, ಹಿಂದೂಸ್ತಾನ್ ಯೂನಿಲಿವರ್, ಮಾರುತಿ, ನೆಸ್ಲೆ ಇಂಡಿಯಾ ಮತ್ತು ಎನ್‌ಟಿಪಿಸಿ ಲಾಭವನ್ನು ಕಂಡಿದೆ.
ಈ ನಡುವೆ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಸಾರ್ವಕಾಲಿಕ ಕುಸಿತ ಕಂಡಿದೆ. ಪ್ರತಿದಿನ ಷೇರುಗಳು ಪಾತಾಳಕ್ಕೆ ಇಳಿಯುತ್ತಿದೆ. ಶುಕ್ರವಾರ ವಹಿವಾಟಿನಲ್ಲಿ ರೂಪಾಯಿ 708.70 ಕ್ಕೆ ಇಳಿದಿದೆ. ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರು 1.70 ರಷ್ಟು ಇಳಿದು ರೂಪಾಯಿ 709.70 ಕ್ಕೆ ಸ್ಥಿರವಾಯಿತು.


Click it and Unblock the Notifications