ಸತತ ಎರಡನೇ ಸೆಷನ್‌ನಲ್ಲಿಯೂ ಷೇರು ಮಾರುಕಟ್ಟೆಯು ಕುಸಿತವನ್ನು ಕಂಡಿದೆ. ಪ್ರಮುಖವಾಗಿ ಟೆಕ್ನಾಲಜಿ, ಕನ್ಸ್ಯೂಮರ್, ಆಟೋಮೊಬೈಲ್, ಫಾರ್ಮಾ ಸ್ಟಾಕ್‌ಗಳು ತೀವ್ರ ಡೌನ್ ಆದ ಕಾರಣದಿಂದಾಗಿ ಷೇರು ಮಾರುಕಟ್ಟೆಯು ಸತತ ಎರಡನೇ ದಿನವೂ ನಷ್ಟವನ್ನು ಕಂಡಿದೆ.
ಕಳೆದ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ವಿತ್ತೀಯ ನೀತಿಯಲ್ಲಿ ಬದಲಾವಣೆ ತಂದಿದೆ. ಕೇಂದ್ರ ಬ್ಯಾಂಕ್ ಈ ಹಣದುಬ್ಬರದ ನಡುವೆ ರೆಪೋ ದರವನ್ನು ಸುಮಾರು 50 ಮೂಲಾಂಕ ಏರಿಕೆ ಮಾಡಿದೆ. ಆದರೆ ಹಣದುಬ್ಬರವು ಕೇಂದ್ರ ಬ್ಯಾಂಕ್ ನಿರೀಕ್ಷೆಯಷ್ಟು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಿಂದಾಗಿ ಜುಲೈನಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಸುಮಾರು 75 ಮೂಲಾಂಕ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಸುದ್ದಿಯು ಹೂಡಿಕೆದಾರರ ಮೇಲೆ ಪ್ರಭಾವ ಉಂಟು ಮಾಡಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಸುಮಾರು 498 ಅಂಕ ಅಥವಾ ಶೇಕಡ 0.89ರಷ್ಟು ಇಳಿಕೆಯಾಗಿ 55,268ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇಯಲ್ಲಿ ನಿಫ್ಟಿಯು 147 ಅಂಕ ಅಥವಾ ಶೇಕಡ 0.88 ರಷ್ಟು ಕೆಳಕ್ಕೆ ಇಳಿದು 16,484ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು ಇಂದು ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 253 ಅಂಕ ಅಥವಾ ಶೇಕಡ 0.45ರಷ್ಟು ಕುಸಿದು 55,514ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇಯಲ್ಲಿ ನಿಫ್ಟಿಯು 84 ಅಂಕ ಅಥವಾ ಶೇಕಡ 0.51ರಷ್ಟು ಕೆಳಕ್ಕೆ ಇಳಿದು 16,547ಕ್ಕೆ ವಹಿವಾಟು ಆರಂಭ ಮಾಡಿದೆ.
ನಿಫ್ಟಿ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 1.25ರಷ್ಟು ಕುಸಿದರೆ ಸ್ಮಾಲ್ ಕ್ಯಾಪ್ ಶೇಕಡ 1.48ರಷ್ಟು ಕುಸಿದಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 14 ಕುಸಿತ ಕಂಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಐಟಿ, ನಿಫ್ಟಿ ಎಫ್‌ಎಂಸಿಜಿ, ನಿಫ್ಟಿ ಕನ್ಸ್ಯೂಮರ್ ಡ್ಯೂರೆಬಲ್ಸ್, ನಿಫ್ಟಿ ಆಟೋ, ನಿಫ್ಟಿ ಫಾರ್ಮಾ ಕ್ರಮವಾಗಿ ಶೇಕಡ 2.83, ಶೇಕಡ 1.39, ಶೇಕಡ 1.29, ಶೇಕಡ 1.18 ಮತ್ತು ಶೇಕಡ 1.18ರಷ್ಟು ಕುಸಿತ ಕಂಡಿದೆ. ಆದರೆ ಈ ಸಂದರ್ಭದಲ್ಲೇ ನಿಫ್ಟಿ ಮೀಡಿಯಾ ಶೇಕಡ 0.86ರಷ್ಟು ಏರಿಕೆಯಾಗಿದೆ.
ಇನ್ಫೋಸಿಸ್ ಟಾಪ್ ನಿಫ್ಟಿ ಲೂಸರ್
ಇನ್ನು ಸ್ಟಾಕ್ ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಟಾಪ್ ನಿಪ್ಟಿ ಲೂಸರ್ ಆಗಿದೆ. ಇನ್ಫೋಸಿಸ್ ಷೇರುಗಳು ಶೇಕಡ 3.51ರಷ್ಟು ಕುಸಿದಿದ್ದು, ರೂಪಾಯಿ 1,450.85ಕ್ಕೆ ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್, ಆಕ್ಸಿಸ್ ಬ್ಯಾಂಕ್, ಡಾ ರೆಡ್ಡೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡಾ ಭಾರೀ ನಷ್ಟವನ್ನು ಕಂಡಿದೆ. ಇನ್ನು ಬಜಾಜ್ ಫಿನ್‌ಸರ್ವ್ ಟಾಪ್ ಗೇನರ್ ಆಗಿದೆ. ಬಜಾಜ್ ಫಿನ್‌ಸರ್ವ್ ಷೇರುಗಳು ಶೇಕಡ 5.50ರಷ್ಟು ಏರಿಕೆಯಾಗಿ, ರೂಪಾಯಿ 13,313ಕ್ಕೆ ತಲುಪಿದೆ.
ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ
ಷೇರು ಮಾರುಕಟ್ಟೆಯಲ್ಲಿ ಒಟ್ಟು 1,156 ಷೇರುಗಳು ಏರಿಕೆಯನ್ನು ಕಂಡಿದ್ದರೆ, 2,170 ಷೇರುಗಳು ಕುಸಿತವನ್ನು ಕಂಡಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, ಎಚ್‌ಯುಎಲ್, ಡಾ ರೆಡ್ಡೀಸ್, ಕೋಟಕ್ ಬ್ಯಾಂಕ್, ವಿಪ್ರೋ, ಎಲ್&ಟಿ, ಎಚ್‌ಸಿಎಲ್ ಟೆಕ್ನಾಲಜೀಸ್, ಟಿಸಿಎಸ್, ಟೈಟಾನ್, ಟೆಕ್ ಮಹೀಂದ್ರಾ, ನೆಸ್ಲೆ ಇಂಡಿಯಾ ಭಾರೀ ನಷ್ಟವನ್ನು ಕಂಡಿದೆ. ಈ ಷೇರುಗಳು ಸುಮಾರು ಶೇಕಡ 3.40ರಷ್ಟು ಕುಸಿತ ದಾಖಲಿಸಿದೆ. ಆದರೆ ಇದೇ ಸಂದರ್ಭದಲ್ಲಿ ಬಜಾಜ್ ಫಿನ್‌ಸರ್ವ್, ಭಾರ್ತಿ ಏರ್‌ಟೆಲ್, ಪವರ್‌ಗ್ರಿಡ್, ಬಜಾಜ್ ಫೈನಾನ್ಸ್, ಐಟಿಸಿ, ಎನ್‌ಟಿಪಿಸಿ, ಎಂ&ಎಂ, ಏಷ್ಯನ್ ಪೇಂಟ್ಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರಿಕೆಯಾಗಿದೆ.
ಎಲ್‌ಐಸಿ, ಜೊಮ್ಯಾಟೊ ಷೇರುಗಳು ಹೇಗಿದೆ?
ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಕುಸಿತವನ್ನು ಕಂಡಿದ್ದ ದೇಶದ ಪ್ರಮುಖ ವಿಮಾ ಸಂಸ್ಥೆ, ಬಹು ದೊಡ್ಡ ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಹಿವಾಟಿನಲ್ಲಿ ಅಂತ್ಯದಲ್ಲೂ ಕುಸಿತವನ್ನು ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರು ಶೇಕಡ 0.52ರಷ್ಟು ಕುಸಿದು ರೂಪಾಯಿ 680.60ಕ್ಕೆ ತಲುಪಿದ್ದರೆ ವಹಿವಾಟಿನ ಅಂತ್ಯದಲ್ಲಿ ಶೇಕಡ 1.29ರಷ್ಟು ಕುಸಿದು ರೂಪಾಯಿ 675.35ಕ್ಕೆ ಇಳಿದಿದೆ. ಇನ್ನು ಜೊಮ್ಯಾಟೊ ಷೇರು ಆರಂಭಿಕ ವಹಿವಾಟಿನಲ್ಲಿ ಶೇಕಡ 6.10ರಷ್ಟು ಇಳಿದು ರೂಪಾಯಿ 44.65ಕ್ಕೆ ತಲುಪಿದ್ದರೆ, ವಹಿವಾಟಿನ ಅಂತ್ಯದಲ್ಲಿ ಶೇಕಡ 12.41ರಷ್ಟು ಕುಸಿದು ರೂಪಾಯಿ 41.65ಕ್ಕೆ ತಲುಪಿದೆ.


Click it and Unblock the Notifications