ಗುರುವಾರ ಆರಂಭಿಕ ವಹಿವಾಟಿನಲ್ಲಿ ಲಾಭವನ್ನು ಕಂಡಿದ್ದ ಷೇರು ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ ಭಾರೀ ನಷ್ಟವನ್ನು ಕಂಡಿದೆ. ಯುಎಸ್ ಫೆಡರಲ್ ರಿಸರ್ವ್ ದರವನ್ನು ಭಾರೀ ಏರಿಕೆ ಮಾಡಲಾಗಿದೆ. ಇದರ ಪರಿಣಾಮವು ಷೇರು ಮಾರುಕಟ್ಟೆಯ ಮೇಲೆ ಬಿದ್ದಿದೆ.
ಬಿಎಸ್‌ಇ ಸೆನ್ಸೆಕ್ಸ್ 1045.60 ಅಂಕ ಅಥವಾ ಶೇಕಡ 1.99ರಷ್ಟು ಕೆಳಕ್ಕೆ ಕುಸಿದು, 51,495.79ಕ್ಕೆ ತಲುಪಿದೆ. ಇನ್ನು ಈ ಸಂದರ್ಭದಲ್ಲೇ ನಿಫ್ಟಿ 331.55 ಅಂಕ ಅಥವಾ ಶೇಕಡ 2.11ರಷ್ಟು ಕುಸಿದು 15,360.60ಕ್ಕೆ ತಲುಪಿದೆ. ಈ ವರ್ಷದಲ್ಲಿ ಮೊದಲ ಬಾರಿಗೆ ಷೇರು ಮಾರುಕಟ್ಟೆಯು ಇಷ್ಟೊಂದು ಕೆಳಕ್ಕೆ ಕುಸಿದು ವಹಿವಾಟು ಅಂತ್ಯ ಮಾಡಿದೆ.
ಬುಧವಾರ ಸೆನ್ಸೆಕ್ಸ್ 52,541.39 ಮತ್ತು ನಿಫ್ಟಿ 15,692.15ರಲ್ಲಿ ವಹಿವಾಟು ಅಂತ್ಯ ಮಾಡಿದ್ದವು. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಎಚ್‌ಡಿಎಫ್‌ಸಿ ಟ್ವಿನ್ಸ್ ಭಾರೀ ಕುಸಿತವನ್ನು ಕಂಡಿದೆ. ಆದರೆ ಗುರುವಾರ ಡಾಲರ್ ಮೌಲ್ಯವು ಕುಸಿತ ಕಂಡಿದೆ.

ಯಾವ ಷೇರಿಗೆ ಲಾಭ, ಯಾವ ಷೇರಿಗೆ ನಷ್ಟ?
ಟಾಟಾ ಸ್ಟೀಲ್ಸ್, ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ವಿಪ್ರೋ, ಭಾರ್ತಿ ಏರ್‌ಟೆಲ್, ಬಜಾಜ್ ಫಿನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎನ್‌ಟಿಪಿಸಿ ಭಾರೀ ನಷ್ಟವನ್ನು ಅನುಭವಿಸಿದೆ. ಆದರೆ ನೆಸ್ಟ್ಲೆ ಇಂಡಿಯಾ ಮಾತ್ರ ಲಾಭವನ್ನು ಕಂಡಿದೆ.
ಹೂಡಿಕೆದಾರರಿಗೆ ಭಾರೀ ನಷ್ಟ
ಸೆನ್ಸೆಕ್ಸ್, ನಿಫ್ಟಿ ಕುಸಿತ ಕಂಡ ಕಾರಣದಿಂದಾಗಿ ಗುರವಾರ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಸುಮಾರು ಐದು ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಬಿಎಸ್‌ಇ ಮಾರುಕಟ್ಟೆ ಮೌಲ್ಯವು 244.65 ಲಕ್ಷ ಕೋಟಿಯಿಂದ 239.20 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ. ಒಟ್ಟಾಗಿ ಹೂಡಿಕೆದಾರರಿಗೆ 5.05 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ.


Click it and Unblock the Notifications