ಬುಧವಾರ ಆರಂಭಿಕ ಏರಿಕೆ ಕಂಡಿದ್ದ ಷೇರು ಮಾರುಕಟ್ಟೆಯು ವಹಿವಾಟಿನ ಅಂತ್ಯದಲ್ಲಿ ಲಾಭವನ್ನು ವಿಸ್ತರಿಸಿದೆ. ಸತತ ನಾಲ್ಕನೇ ದಿನದ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಾಭವು ವಿಸ್ತರಣೆಯಾಗಿದೆ. ಯುಎಸ್ ಸ್ಟಾಕ್ ಮಾರುಕಟ್ಟೆಯಲ್ಲಿ ಏಷ್ಯನ್ ಷೇರುಗಳು ಏರಿಕೆ ಕಂಡ ಬೆನ್ನಲ್ಲೇ ಭಾರತೀಯ ಷೇರುಗಳು ಜಿಗಿದಿದೆ.
ಕಚ್ಚಾತೈಲದ ಬೆಲೆಯು ಇಳಿಕೆಯಾಗುತ್ತಿದ್ದಂತೆ ಷೇರು ಮಾರುಕಟ್ಟೆಯು ಏರಿಕೆ ಕಂಡಿದೆ. ಇನ್ನು ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಇತರೆ ಸ್ಟಾಕ್‌ಗಳು ಏರಿಕೆಯನ್ನು ಕಂಡಿದೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 630 ಅಂಕ ಅಥವಾ ಶೇಕಡ 1.15ರಷ್ಟು ಏರಿಕೆಯಾಗಿ, 55,398ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎನ್‌ಎಸ್‌ಇ ನಿಪ್ಟಿ 180 ಅಂಕ ಅಥವಾ ಶೇಕಡ 1.1ರಷ್ಟು ಏರಿಕೆಯಾಗಿ 16,521ಕ್ಕೆ ತಲುಪಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.19ರಷ್ಟು ಹಾಗೂ ಸ್ಟಾಲ್ ಕ್ಯಾಪ್ ಶೇಕಡ 0.81ರಷ್ಟು ಏರಿಕೆಯಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 12 ಏರಿಕೆಯನ್ನು ಕಂಡಿದೆ. ನಿಫ್ಟಿ ಐಟಿ, ನಿಫ್ಟಿ ಎಫ್‌ಎಂಸಿಜಿ, ನಿಫ್ಟಿ ಆಯಿಲ್ & ಗ್ಯಾಸ್ ಕ್ರಮವಾಗಿ ಶೇಕಡ 2.93, ಶೇಕಡ 1.13 ಮತ್ತು ಶೇಕಡ 1.02ರಷ್ಟು ಏರಿಕೆಯಾಗಿದೆ. ಇನ್ನು ನಿಫ್ಟಿ ಆಟೋ ಶೇಕಡ 0.22ರಷ್ಟು ಕುಸಿತ ಕಂಡಿದೆ.
ಒಎನ್‌ಜಿಸಿ ಸ್ಟಾಕ್ ಟಾಪ್ ಗೇನರ್
ಷೇರು ಮಾರುಕಟ್ಟೆಯಲ್ಲಿ ಒಎನ್‌ಜಿಸಿ ಸ್ಟಾಕ್ ಬಾರಿ ಏರಿಕೆ ಕಂಡ ಸ್ಟಾಕ್ ಆಗಿದೆ. ಒಎನ್‌ಜಿಸಿ ಸ್ಟಾಕ್ ಶೇಕಡ 3.71ರಷ್ಟು ಏರಿಕೆಯಾಗಿ ರೂಪಾಯಿ 132.65ಕ್ಕೆ ತಲುಪಿದೆ. ಟೆಕ್ ಮಹೀಂದ್ರಾ, ಟಿಸಿಎಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಹಾಗೂ ರಿಲಯನ್ಸ್ ಸ್ಟಾಕ್‌ಗಳು ಟಾಪ್ ಗೇನರ್ ಆಗಿದೆ. 1,926 ಷೇರುಗಳು ಏರಿಕೆಯಾದರೆ, 1,429 ಷೇರುಗಳು ಕುಸಿತ ಕಂಡಿದೆ.
ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?
30 ಷೇರುಗಳು ಬಿಎಸ್‌ಇ ಸೂಚ್ಯಂಕದಲ್ಲಿ ಟೆಕ್‌ಎಂ, ಎಚ್‌ಸಿಎಲ್ ಟೆಕ್, ಟಿಸಿಎಸ್, ರಿಲಯನ್ಸ್, ಎಸ್‌ಬಿಐ, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ವಿಪ್ರೋ, ಟೈಟಾನ್, ಎಚ್‌ಡಿಎಸ್‌ಸಿ ಬ್ಯಾಂಕ್, ನೆಸ್ಟ್ಲೆ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್ ಸುಮಾರು ಶೇಕಡ 3.61ರಷ್ಟು ಏರಿಕೆಯಾಗಿದೆ. ಈ ಸಂದರ್ಭದಲ್ಲೇ ಎಂ&ಎಂ, ಸನ್ ಫಾರ್ಮಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್‌ಟೆಲ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಪವರ್‌ಗ್ರಿಡ್, ಎಸ್‌ಟಿಪಿಸಿ, ಡಾ ರೆಡ್ಡೀಸ್ ನಷ್ಟವನ್ನು ಕಂಡಿದೆ.
ಎಲ್‌ಐಸಿ ಷೇರುಗಳು ಏರಿಕೆಯೇ, ಇಳಿಕೆಯೇ?
ದೇಶದ ಪ್ರಮುಖ ವಿಮಾ ಸಂಸ್ಥೆ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಇಳಿಕೆ ಕಂಡಿದೆ. ಎಲ್‌ಐಸಿ ಷೇರುಗಳು ಶೇಕಡ 0.13ರಷ್ಟು ಇಳಿಕೆಯಾಗಿ ರೂಪಾಯಿ 687.85ಕ್ಕೆ ತಲುಪಿದೆ. ನಿರಂತರವಾಗಿ ಇಳಿಕೆ ಕಂಡಿದ್ದ ಎಲ್‌ಐಸಿ ಷೇರುಗಳು ಬುಧವಾರ ವಹಿವಾಟಿನ ಆರಂಭದಲ್ಲಿ ಏರಿಕೆ ಕಂಡಿತ್ತು. ಶೇಕಡ 0.68ರಷ್ಟು ಏರಿಕೆಯಾಗಿ, ರೂಪಾಯಿ 693.45ಕ್ಕೆ ತಲುಪಿದೆ.


Click it and Unblock the Notifications