ಷೇರು ಮಾರುಕಟ್ಟೆಯು ಸತತ ಎರಡನೇ ಸೆಷನ್‌ನಲ್ಲಿ ಲಾಭವನ್ನು ವಿಸ್ತರಿಸಿದೆ. ಕಳೆದ ಶುಕ್ರವಾರ ನಡೆದ ವಹಿವಾಟಿನಲ್ಲಿ ಷೇರು ಪೇಟೆಯು ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿತ್ತು. ಸೋಮವಾರವೂ ಏರಿಕೆ ಕಂಡು ವಹಿವಾಟು ಅಂತ್ಯ ಮಾಡಿದೆ.
ಪ್ರಮುಖವಾಗಿ ಟೆಕ್ನಾಲಜಿ ಹಾಗೂ ಮೆಟಲ್ ಸ್ಟಾಕ್ ಏರಿಕೆಯು ಷೇರು ಮಾರುಕಟ್ಟೆಗೆ ಬಲವನ್ನು ತುಂಬಿದೆ. ಇನ್ನು ಯುಎಸ್ ಷೇರುಗಳು ಇಂದು ಏರಿಕೆಯನ್ನು ಕಂಡಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 760 ಅಂಕ ಅಥವಾ ಶೇಕಡ 1.41ಕ್ಕೆ ಏರಿ 54,521ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 229 ಅಂಕ ಅಥವಾ ಶೇಕಡ 1.43ರಷ್ಟು ಏರಿ 16,279ಕ್ಕೆ ತಲುಪಿದೆ.
ನಿಫ್ಟಿ ಮಿಡ್ ಕ್ಯಾಪ್ 100 ಶೇಕಡ 1.40ರಷ್ಟು ಹೆಚ್ಚಳ ಕಂಡಿದ್ದರೆ, ಸ್ಮಾಲ್ ಕ್ಯಾಪ್ ಶೇಕಡ 1.59ರಷ್ಟು ಏರಿಕೆ ಕಂಡಿದೆ. 15 ಸೆಕ್ಟರ್ ಗೇಜ್‌ನಲ್ಲಿ 13 ಲಾಭವನ್ನು ಕಂಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಐಟಿ, ನಿಫ್ಟಿ ಪಿಎಸ್‌ಯು ಬ್ಯಾಂಕ್, ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡ 3.13, ಶೇಕಡ 2.77, ಶೇಕಡ 2.49ರಷ್ಟು ಹೆಚ್ಚಳವಾಗಿದೆ. ಆದರೆ ನಿಫ್ಟಿ ಎಫ್‌ಎಂಸಿಜಿ ಹಾಗೂ ನಿಫ್ಟಿ ಫಾರ್ಮಾ ಷೇರುಗಳು ಕ್ರಮವಾಗಿ ಶೇಕಡ 0.09 ಮತ್ತು ಶೇಕಡ 0.15ರಷ್ಟು ಏರಿಕೆಯಾಗಿದೆ.
ಹಿಂಡಾಲ್ಕೋ ಷೇರು ಭಾರೀ ಏರಿಕೆ
ಇನ್ನು ಸ್ಟಾಕ್ ಮಾರುಕಟ್ಟೆಯಲ್ಲಿ ಹಿಂಡಾಲ್ಕೋ ಷೇರು ಟಾಪ್ ನಿಫ್ಟಿ ಗೇನರ್ ಆಗಿದೆ. ಹಿಂಡಾಲ್ಕೋ ಷೇರುಗಳು ಶೇಕಡ 4.75ರಷ್ಟು ಏರಿಕೆಯಾಗಿ ರೂಪಾಯಿ 367.20ಕ್ಕೆ ತಲುಪಿದೆ. ಇನ್ನು ಇಂದೇ ಸಂದರ್ಭದಲ್ಲಿ ಇಂಡಸ್‌ಇಂಡ್ ಬ್ಯಾಂಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್ ಕೂಡಾ ಟಾಪ್ ಗೇನರ್ ಆಗಿದೆ. ಬಾಂಬೆ ಸ್ಟಾಕ್ ಮಾರುಕಟ್ಟೆಯಲ್ಲಿ 2,354 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1,093 ಷೇರುಗಳು ಇಳಿಕೆ ಕಂಡಿದೆ.
ಯಾವೆಲ್ಲಾ ಷೇರು ಏರಿಕೆ, ಕುಸಿತ?
30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಇಂಡಸ್‌ಇಂಡ್ ಬ್ಯಾಂಕ್, ಇನ್ಫೋಸಿಸ್, ಟೆಕ್ಎಂ, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್ ಅಲ್ಟ್ರಾಟೆಕ್ ಸಿಮೆಂಟ್, ಕೋಟಕ್ ಮಹೀಂದ್ರಾ ಬ್ಯಾಂಕ್, ವಿಪ್ರೋ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ ಸುಮಾರು ಶೇಕಡ 4.34ರಷ್ಟು ಏರಿಕೆ ಕಂಡಿದೆ. ಇದೇ ಸಂದರ್ಭದಲ್ಲಿ ಡಾ ರೆಡ್ಡೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಂ&ಎಂ, ನೆಸ್ಟ್ಲೆ ಇಂಡಿಯಾ, ಮಾರುತಿ, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ, ಎನ್‌ಟಿಪಿಸಿ ಷೇರುಗಳು ನಷ್ಟವನ್ನು ದಾಖಲಿಸಿದೆ.
ಎಲ್‌ಐಸಿ ಷೇರು ಏರಿಕೆಯೇ, ಕುಸಿತವೇ?
ನಿರಂತರವಾಗಿ ಏರಿಕೆ ಕಂಡು, 700 ರೂಪಾಯಿ ಗಡಿಯನ್ನು ದಾಟಿದ್ದ ದೇಶದ ಪ್ರಮುಖ ವಿಮಾ ಸಂಸ್ಥೆ, ಬಹು ದೊಡ್ಡ ಹೂಡಿಕೆದಾರ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಕುಸಿತ ಕಂಡಿದೆ. ಎಲ್‌ಐಸಿ ಷೇರುಗಳು ಶೇಕಡ 1.72ರಷ್ಟು ಕುಸಿತ ಕಂಡು ರೂಪಾಯು 696.35ಕ್ಕೆ ಇಳಿದಿದೆ. ಇನ್ನು ಇಂದು ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಏರಿಕೆಯನ್ನು ದಾಖಲಿಸಿದ್ದವು. ಶೇಕಡ 0.17ರಷ್ಟು ಏರಿಕೆಯಾಗಿ, ರೂಪಾಯಿ 709.75ಕ್ಕೆ ತಲುಪಿತ್ತು.


Click it and Unblock the Notifications