70 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸೌರೀಕರಣ ಘಟಕವನ್ನು ಇಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆಯನ್ನು ಮಾಡಿದ್ದಾರೆ. ಈ ಯೋಜನೆಯಿಂದಾಗಿ ಹಗಲಿನಲ್ಲೇ 5 ಗಂಟೆ 3 ಫೇಸ್ ವಿದ್ಯುತ್ ಇರಲಿದೆ ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಪಿಎಂ-ಕುಸುಮ್ ಯೋಜನೆಯ ಮೂಲಕ ನಮ್ಮ ಸರ್ಕಾರ ಪ್ರತಿ ವರ್ಷ 19,000 ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣ ನೀಡುತ್ತಿದೆ.ಆದರೆ ಹಿಂದಿನ ಬಿಜೆಪಿ ಸರ್ಕಾರದ ಎರಡು ವರ್ಷಗಳಲ್ಲಿ ಈ ಯೋಜನೆ ಆರಂಭಿಸಲೇ ಇಲ್ಲ ಈ ಯೋಜನೆಯನ್ನು ನಾವು ಅಧಿಕಾರಕ್ಕೆ ಬಂದು ಜಾರಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂಧನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಡಾ.ಎಚ್.ನರಸಿಂಹಯ್ಯ ಸಾಂಸ್ಕೃತಿಕ ಕೇಂದ್ರ, ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಕುಸುಮ್ ಸೌರೀಕರಣ ಯೋಜನೆಗೆಗೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆಯನ್ನು ನೀಡಿ 'ಲಿಪಿ-ಮನೆ' ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದಾರೆ.
70 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸೌರೀಕರಣ ಘಟಕದಿಂದ ರೈತರಿಗೆ ಹಗಲಿನಲ್ಲೇ 3 ಫೇಸ್ ವಿದ್ಯುತ್ ಅನ್ನು 5 ಗಂಟೆಗಳ ಕಾಲ ಒದಗಿಸಲಾಗುತ್ತಿದೆ. ಸಂಪೂರ್ಣ ಗುಣಮಟ್ಟದ ವಿದ್ಯುತ್ ರೈತರ ಪಂಪ್ ಸೆಟ್ ಗಳಿಗೆ ಸಿಗುತ್ತಿರುವುದರಿಂದ ವಿದ್ಯುತ್ ಅಪವ್ಯಯ ಆಗುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.
'ಪಿಎಂ-ಕುಸುಮ್ʼ ಯೋಜನೆ ಹೆಸರಿಗೆ ಮಾತ್ರ ಇದು ಕೇಂದ್ರದ ಯೋಜನೆ. ಆದರೆ ರಾಜ್ಯ ಸರ್ಕಾರ ಶೇ.50 ರಷ್ಟು ಹಣ ಕೊಡುತ್ತದೆ. ಶೇ.20 ರಷ್ಟು ಹಣ ಹೂಡಿಕೆದಾರರದ್ದು. ಕೇಂದ್ರ ಸರ್ಕಾರ ಕೊಡುವುದು ಕೇವಲ ಶೇ.30 ರಷ್ಟು ಹಣ ಮಾತ್ರ. ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ರಾಜ್ಯದ ಪಾಲು ಹೆಚ್ಚಿದೆ.
ಮುಂದಿನ 3 ವರ್ಷಗಳಲ್ಲಿ 60 ಸಾವಿರ ಮೆ.ವ್ಯಾ ಗೆ ಉತ್ಪಾದನೆಯ ಗುರಿ
ಒಂದು ಮೆವ್ಯಾ ವಿದ್ಯುತ್ ಉತ್ಪಾದನೆಗೆ 3 ಕೋಟಿ ಖರ್ಚಾದರೆ ಒಂದು ಕೋಟಿ ಮಾತ್ರ ಕೇಂದ್ರ ಸರ್ಕಾರದ್ದು. ಉಳಿದದ್ದಷ್ಟನ್ನೂ ನಾವು ಕೊಡುತ್ತೇವೆ. ನಾವು ಅಧಿಕಾರಕ್ಕೆ ಬಂದು 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದೇವೆ. ಈಗ ಒಟ್ಟು 30 ಸಾವಿರ ಮೆ.ವ್ಯಾ ಉತ್ಪಾದನೆ ಆಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಮೆ.ವ್ಯಾ ಗೆ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಆ ಮೂಲಕ ರೈತರ ಬಹು ದೊಡ್ಡ ಸಂಕಷ್ಟಕ್ಕೆ ಪರಿಹಾರ ಒದಗಿಸಿಕೊಡುತ್ತಿದ್ದೇವೆ.ನಾವು ಚುನಾವಣೆಗೂ ಮೊದಲು ಕೊಟ್ಟಿದ್ದ ಭರವಸೆಗಳಲ್ಲಿ ಬಹುಪಾಲನ್ನು ಈಗಾಗಲೇ ಈಡೇರಿಸಿ ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ್ದದ್ದೆಲ್ಲವನ್ನೂ ಈಡೇರಿಸಿ ನುಡಿದಂತೆ ನಡೆಯುವ ನಮ್ಮ ಪರಂಪರೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
20 ಮೆಗಾವ್ಯಾಟ್ ಸೌರ ಸ್ಥಾವರವು ಕರ್ನಾಟಕದ ಶುದ್ಧ ಇಂಧನ ಪರಿವರ್ತನೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು ಕೃಷಿ ಫೀಡರ್‌ಗಳನ್ನು ಸೌರೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಈ ಯೋಜನೆಯು ರೈತರ ಪಂಪ್ ಸೆಟ್‌ಗಳಿಗೆ ಹಗಲು ಹೊತ್ತಿನ ವಿದ್ಯುತ್ ಒದಗುವಂತೆ ನೋಡಿಕೊಂಡು ನೀರಾವರಿಯನ್ನು ವರ್ಧಿಸಿ ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ.
ಈ ಯೋಜನೆಯಲ್ಲಿ ರಾಜ್ಯಾದ್ಯಂತ 389 ಸಬ್‌ಸ್ಟೇಷನ್‌ಗಳು ಮತ್ತು 1,555 ಕೃಷಿ ಫೀಡರ್‌ಗಳನ್ನು ಹಂತ ಹಂತವಾಗಿ ಸೌರೀಕರಣಗೊಳಿಸಲಾಗುತ್ತಿದ್ದು, 2025 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಸಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ಇದು 2,396 ಮೆಗಾವ್ಯಾಟ್ ಶುದ್ಧ ಶಕ್ತಿಯನ್ನು ಒದಗಿಸುವುದೇ ಅಲ್ಲದೆ 6,32,794 ನೀರಾವರಿ ಪಂಪ್ ಸೆಟ್‌ಗಳಿಗೆ ನೇರ ಪ್ರಯೋಜನ ನೀಡುತ್ತದೆ ಮತ್ತು ಸಾವಿರಾರು ರೈತರಿಗೆ ಇಂಧನ ದೊರೆಯುವ ಉತ್ತಮ ಮಾರ್ಗವಾಗಿದೆ.
ಇದೇ ಯೋಜನೆಯ ಭಾಗವಾಗಿ, 13 ಮೆಗಾವ್ಯಾಟ್ ತೊಂಡೆಭಾವಿ ಸೌರ ಯೋಜನೆಯನ್ನು ಸಹ ಉದ್ಘಾಟಿಸಲಾಯಿತು. ಈ ಯೋಜನೆಯು 8 ಕೃಷಿ ಫೀಡರ್‌ಗಳಿಗೆ ವಿದ್ಯುತ್ ಒದಗಿಸುತ್ತದೆ ಮತ್ತು ಗೌಡಗೆರೆ, ಹಳೇಹಳ್ಳಿ, ಕಲ್ಲಿನಾಯಕನಹಳ್ಳಿ, ಅಲಕಾಪುರ, ಬೇವಿನಹಳ್ಳಿ, ಅಲೀಪುರ, ತೊಂಡೆಬಾವಿ, ಪುರ, ಜರಬಂಡಹಳ್ಳಿ ಮತ್ತು ಶ್ಯಾಂಪುರ ಸೇರಿದಂತೆ 10 ಹೋಬಳಿಗಳಲ್ಲಿನ 69 ಹಳ್ಳಿಗಳಲ್ಲಿ 3,484 ನೀರಾವರಿ ಪಂಪ್ ಸೆಟ್‌ಗಳಿಗೆ ಬೆಂಬಲ ನೀಡುತ್ತದೆ. ಇದು ಸ್ಥಿರವಾದ ಸೌರಶಕ್ತಿ ಚಾಲಿತ ವಿದ್ಯುತ್ ಒದಗಿಸುವ ಮೂಲಕ ಮತ್ತು ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಪ್ರದೇಶದ ನೀರಾವರಿ ಅಗತ್ಯಗಳಲ್ಲಿ ಪ್ರಮುಖ ಪಾಲನ್ನು ಪೂರೈಸಲಿದ್ದು ಗ್ರಾಮೀಣ ಜನಜೀವನ ಮಟ್ಟವನ್ನು ಸುಧಾರಣೆ ಮಾಡುತ್ತದೆ.


Click it and Unblock the Notifications