ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟೋ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ. ಆದರೆ ಇಂದು ಅದೇ ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸಮಸ್ಯೆಗಳಿಂದ (Bengaluru Traffic Police) ತುಂಬಿ ತುಳುಕುತ್ತಿದೆ. ರಸ್ತೆಗಳಲ್ಲಿ ದಿನಕ್ಕೆ ಲಕ್ಷಗಟ್ಟಲೆ ವಾಹನಗಳು ಸಂಚರಿಸುತ್ತದೆ. ಈಗೀಗ ಬೆಂಗಳೂರು ಬಗ್ಗೆ ಕೇಳಿದ್ರೆ ಸಾಕು, ಕೆಲವರು ಅಯ್ಯೋ ಟ್ರಾಫಿಕ್ ಅಂದು ಬಿಡುತ್ತಾರೆ. ಆದ್ರೆ ಇದೀಗ ಬೆಂಗಳೂರು ಟ್ರಾಫಿಕ್ ಪೋಲಿಸರು ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊಸ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸ್ (BTP) ಇಲಾಖೆಯು 'ಕೋಬ್ರಾ ಬೀಟ್' (Cobra Beat) ಎಂಬ ಹೊಸ ಕ್ರಮವನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಪ್ರತಿ ಸಂಚಾರ ಪೊಲೀಸ್ ಠಾಣೆಯಿಂದ ಒಬ್ಬ ಕೋಬ್ರಾ (ಬಿಟಿಪಿಯ ಮೊದಲ ಪ್ರತಿಸ್ಪಂದಕರು) ಸಿಬ್ಬಂದಿಗೆ ಎರಡು ಮಾರ್ಗಗಳನ್ನು ಸೂಚಿಸಿ, ಆ ಮಾರ್ಗಗಳಲ್ಲಿ ಗಸ್ತು ತಿರುಗುವಂತೆ ಹೇಳಲಾಗುತ್ತದೆ. ಅದರಲ್ಲಿ ಯಾವ ಸಮಯಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆಯೋ, ಅದಕ್ಕೆ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಟ್ರಾಫಿಕ್ ಸಮಸ್ಯೆಗೆ ಹೊಸ ಪರಿಹಾರ:
ಟ್ರಾಫಿಕ್ ಪೊಲೀಸರ ಈ ಕ್ರಮವು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುವ ಅಂಶಗಳನ್ನು ನಿಭಾಯಿಸಲು ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ಸಹಕಾರಿಯಾಗಲಿದೆ. ಇತ್ತೀಚೆಗಷ್ಟೇ ಇಲಾಖೆಯು ಅವೈಜ್ಞಾನಿಕ ಸ್ಥಳಗಳಲ್ಲಿರುವ 103 ಬಸ್ ನಿಲ್ದಾಣಗಳನ್ನು ಗುರುತಿಸಿ, ಅವುಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಪ್ರಾರಂಭಿಸಿತ್ತು. ಅಲ್ಲದೇ ಬೆಂಗಳೂರಿನಾದ್ಯಂತ ಸುಗಮ ಸಂಚಾರಕ್ಕಾಗಿ ಸಿಗ್ನಲ್ ಸಿಂಕ್ರೊನೈಸೇಶನ್ ವಿಧಾನವನ್ನೂ ಅಳವಡಿಸಿಕೊಳ್ಳಲಾಗಿದೆ.
ಕೋಬ್ರಾ ಬೀಟ್ ಯಾವ ರೀತಿ ಕೆಲಸ ಮಾಡುತ್ತದೆ?
ಪ್ರತಿಯೊಂದು ಸಂಚಾರ ಪೊಲೀಸ್ ಠಾಣೆಯೂ ತನ್ನ ವ್ಯಾಪ್ತಿಗೆ ಅನುಗುಣವಾಗಿ ಮೂರರಿಂದ ನಾಲ್ಕು 'ಕೋಬ್ರಾ' ಬೀಟ್ ಪೊಲೀಸರನ್ನು ಹೊಂದಿರುತ್ತದೆ. ಪ್ರತಿ ಠಾಣೆ ಕೂಡಾ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ಕೋಬ್ರಾ ಸಿಬ್ಬಂದಿಗೆ ಎರಡು ಪ್ರಮುಖ ಮತ್ತು ಹೆಚ್ಚು ಸಂಚಾರವಿರುವ ರಸ್ತೆಗಳನ್ನು ತೋರಿಸಲಾಗುತ್ತದೆ. ಈ ರಸ್ತೆಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವುದು ಅವರ ಕೆಲಸವಾಗಿರುತ್ತದೆ.
ಟ್ರಾಫಿಕ್ ಪೊಲೀಸರು ಹೆಚ್ಚು ಜನಸಂದಣಿ, ಹೆಚ್ಚು ವಾಹನಗಳು ಓಡಾಡುವ ಜಾಗಗಳಲ್ಲಿ ಈ ಕೋಬ್ರಾ ಬೀಟ್ ಪೊಲೀಸರನ್ನು ನೇಮಿಸಲು ಆದ್ಯತೆ ನೀಡಲಾಗಿದೆ. ಇನ್ನು ದಕ್ಷಿಣ ವಿಭಾಗದ ಡಿಸಿಪಿ ಗೋಪಾಲ್ ಎಂ. ಬೈಕೋಡ್ ಈ ಕ್ರಮದ ಬಗ್ಗೆ ಮಾತನಾಡಿ, "ಕೋಬ್ರಾಗಳು ಗರಿಷ್ಠ ದಟ್ಟಣೆಯ ಸಂದರ್ಭದಲ್ಲಿ ಅದಕ್ಕೆ ಪರಿಹಾರವನ್ನು ನೀಡುತ್ತಾರೆ. ಇದು ಸುಗಮ ಸಂಚಾರಕ್ಕೆ ನೆರವಾಗುತ್ತದೆ" ಎಂದು ಹೇಳಿದ್ದಾರೆ.
"ಇಂತಹ ಸಂಚಾರ ದಟ್ಟಣೆಗಳು ಕೆಲವೊಮ್ಮೆ ಅಸ್ತವ್ಯಸ್ತವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ವಾಹನಗಳ ನಿಲುಗಡೆಗಳು ಕಾರಣವಾಗಿರುತ್ತದೆ. ಏಕೆಂದರೆ ಅವು ರಸ್ತೆಯ ಅಗಲವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತವೆ." ಎಂದು ಅವರು ವಿವರಿಸಿದರು. "ಅಲ್ಲದೇ, ಒಂದು ವಾಹನದ ಪಾರ್ಕಿಂಗ್‌ನಿಂದಾಗಿ 10 ಸೆಕೆಂಡುಗಳ ವಿಳಂಬಕ್ಕೆ ಕಾರಣವಾದರೆ, ಅದೇ ರೀತಿ ಆರು ವಾಹನಗಳಿಂದ ಒಂದು ನಿಮಿಷದಷ್ಟು ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ." ಎಂದು ಅವರು ಹೇಳಿದರು.
ಸಂಚಾರ ದಟ್ಟಣೆ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಕಣ್ಗಾವಲು ವಹಿಸುವುದಲ್ಲದೇ, ಕೋಬ್ರಾ ಸಿಬ್ಬಂದಿ ವಾಹನಗಳಿಗೆ ಲಾಕ್ ಹಾಕಿ ಮತ್ತು ದಂಡದ ನೋಟಿಸ್‌ಗಳನ್ನು ನೀಡುವ ಅಧಿಕಾರವನ್ನು ಹೊಂದಿದ್ದಾರೆ.


Click it and Unblock the Notifications