ರಾಜ್ಯದಲ್ಲಿ ಕಳೆದ ತಿಂಗಳು ಪೂರ್ತಿ ಚಳಿಯೋ ಚಳಿ (Cold). ಮೈಕೊರೆಯುವಂತಹ ಚಳಿಯಲ್ಲಿ ಜನ ಜೀವನ ನಡೆಸುವಂತಾಗಿದ್ದು. ಅದರಲ್ಲೂ ಬೆಂಗಳೂರಂತೂ ವಿಪರೀತ ಚಳಿಯಿಂದಾಗಿ ಗಢ ಗಢ ನಡುಗುತ್ತಿತ್ತು. ಅಲ್ಲದೇ ಮಂಜು ಕೂಡಾ ಅಲ್ಲಲ್ಲಿ ಆವರಿಸಿತ್ತು. ಆದ್ರೆ ಹೊಸ ವರ್ಷ ಬರುತ್ತಿದ್ದಂತೆ ಇದೀಗ ಚಳಿ ಜೊತೆಗೆ ಮಳೆರಾಯನ ಆಗಮನದ ಮುನ್ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆ ಪ್ರಕಾರ, ಕರ್ನಾಟಕದ (Karnataka) ಕೆಲವು ಜಿಲ್ಲೆಗಳಲ್ಲಿ ಇಂದು (ಜ.03) ಸಾಧಾರಣ ಮಳೆಯಾಗುವ (Rain Alert) ನಿರೀಕ್ಷೆಯಿದೆ.

ಕಳೆದ ತಿಂಗಳಿಂದ ರಾಜ್ಯದಲ್ಲಿ ಶುರುವಾದ ಚಳಿ, ಇದೀಗ ವರುಣನ ಆಗಮನದ ಸೂಚನೆಯನ್ನು ನೀಡುತ್ತಿದೆ. ಆದ್ದರಿಂದ ಈ ವಾರ ರಾಜ್ಯದಲ್ಲಿ ಮಿಶ್ರ ವಾತಾವರಣ ಇರಲಿದೆ. ಆದರೆ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆ?
ಈಶಾನ್ಯ ಮಾನ್ಸೂನ್ ಆಕ್ಟಿವ್ ಆಗಿರುವ ಹಿನ್ನೆಲೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಜಿಲ್ಲೆಗಳಲ್ಲಿ ವಿಪರೀತ ಚಳಿ
ಇನ್ನು ದಾವಣಗೆರೆ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಬೀದರ್, ಬೆಳಗಾವಿ, ವಿಜಯಪುರ, ಕಲಬುರಗಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಬಳ್ಳಾರಿ ಯಲ್ಲಿ ಚಳಿ ಹಾಗೇ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಮಕರ ಸಂಕ್ರಾಂತಿ ಸಮಯದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಕೇರಳದಲ್ಲಿ ಮಳೆ ಸೂಚನೆ:
ಕೇರಳದಲ್ಲೂ ಹವಾಮಾನದಲ್ಲಿ ಭಾರೀ ಬದಲಾವಣೆಯಾಗಿದ್ದು, ಕೇಂದ್ರ ಹವಾಮಾನ ಇಲಾಖೆ ಇಂದು ಎಂಟು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ಆ ಪ್ರಕಾರ, ಪತ್ತನಂತಿಟ್ಟ, ಎರ್ನಾಕುಲಂ, ಇಡುಕ್ಕಿ, ಪಾಲಕ್ಕಾಡ್, ಕೋಝಿಕ್ಕೋಡ್, ವಯನಾಡು, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ 15.6 ರಿಂದ 64.4 ಮಿ.ಮೀ.ವರೆಗಿನ ಮಧ್ಯಮ ಮಳೆ ಬೀಳುವ ಸಾಧ್ಯತೆ ಉದ್ದು, "ಗ್ರೀನ್ ಅಲರ್ಟ್" ಘೋಷಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಯಾವುದೇ ಮಳೆ ಅಲರ್ಟ್ ನೀಡಲಾಗಿಲ್ಲ.
ಇನ್ನು ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪದ ಕರಾವಳಿಗಳಲ್ಲಿ ಇಂದು (ಜನವರಿ 3, 2026) ಮೀನುಗಾರಿಕೆ ಮಾಡಲು ಯಾವುದೇ ನಿರ್ಬಂಧ ಹೇರಲಾಗಿಲ್ಲ. ಆದರೆ, ಕೇಂದ್ರ ಹವಾಮಾನ ಇಲಾಖೆಯು ಜನವರಿ 3 ರಂದು ನೈಋತ್ಯ ಹಾಗೂ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಗಂಟೆಗೆ 35-45 ಕಿ.ಮೀ. (ಕೆಲವೊಮ್ಮೆ 55 ಕಿ.ಮೀ.) ವೇಗದ ಗಾಳಿ ಮತ್ತು ಪ್ರತಿಕೂಲ ಹವಾಮಾನವಿರಲಿದೆ ಎಂದು ಎಚ್ಚರಿಕೆ ನೀಡಿದೆ.
ಕೇರಳ ಮಾತ್ರವಲ್ಲದೇ, ಜನವರಿ 6, 2026 ರವರೆಗೆ ದಕ್ಷಿಣ ತಮಿಳುನಾಡು ಕರಾವಳಿ, ಗಲ್ಫ್ ಆಫ್ ಮನ್ನಾರ್ ಹಾಗೂ ಕನ್ಯಾಕುಮಾರಿ ಪ್ರದೇಶಗಳಲ್ಲಿ 45-55 ಕಿ.ಮೀ. (ಕೆಲವೊಮ್ಮೆ 65 ಕಿ.ಮೀ.) ವೇಗದ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಮೀನುಗಾರರು ಜಾಗರೂಕರಾಗಿರಲು ಸೂಚಿಲಾಗಿದೆ.


Click it and Unblock the Notifications