ರಾಜ್ಯದಲ್ಲಿ ಇತ್ತೀಚೆಗೆ ದಿನ ಹೋದಂತೆ ಚಳಿ (Cold) ಹೆಚ್ಚಾಗುತ್ತಿದೆ. ಅಲ್ಲದೇ ಹವಾಮಾನ ಇಲಾಖೆ ಕೂಡಾ ಈ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಇದೀಗ ಮತ್ತೆ ಚಳಿ, ಒಣಹವೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದ್ದು, ಭಾರೀ ಹೆಚ್ಚಾಗುವ ನಿರೀಕ್ಷೆಯಿದೆ. ಹಾಗಿದ್ರೆ ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಚಳಿ ಹೆಚ್ಚಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹವಾಮಾನ ಇಲಾಖೆ ತಜ್ಞರ ಪ್ರಕಾರ, ಕರ್ನಾಟಕದಲ್ಲಿ ಮುಂದಿನ 7 ದಿನಗಳು ಒಣಹವೆ ಇರಲಿದ್ದು, ಚಳಿ ಹೆಚ್ಚಾಗಲಿದೆ ಎಂದು ವರದಿಯಾಗಿದೆ. ಅಲ್ಲದೇ ಕೆಲವೆಡೆ ಮಂಜಿನ ವಾತಾವರಣ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಹವಾಮಾನ ಇಲಾಖೆ ಸೂಚನೆ ಏನು?
ಬೆಂಗಳೂರು ಹವಾಮಾನ ಕೇಂದ್ರದ ಪ್ರಕಾರ, ರಾಜ್ಯದಲ್ಲಿ ಮತ್ತಷ್ಟು ದಿನ ಚಳಿ ಹೆಚ್ಚಾಗಲಿದೆ ಎಂದು ವರದಿಯಾಗಿದೆ. ಅದರಲ್ಲೂ ಬೀದರ್, ವಿಜಯಪುರ, ಧಾರವಾಡದಲ್ಲಿ ತಾಪಮಾನದಲ್ಲಿ ಮತ್ತಷ್ಟು ಇಳಿಕೆಯಾಗಲಿದೆ" ಎಂದು ವರದಿಯಾಗಿದೆ.
7 ದಿನ ಮುಂದುವರೆಯಲಿದೆ ಒಣಹವೆ
ಹವಾಮಾನ ಇಲಾಖೆಯ ವರದಿ ಪ್ರಕಾರ, ವರ್ಷಾಂತ್ಯದವರೆಗೂ ಒಣಹವೆ ಮುಂದುವರೆಯಲಿದೆ ಎಂದು ಹೇಳಲಾಗಿದೆ. ಡಿಸೆಂಬರ್ 24 ರಿಂದ ಡಿಸೆಂಬರ್ 31ರವರೆಗೂ ಒಣಹವೆ ಮುಂದುವರೆಯುತ್ತದೆ. ಕನಿಷ್ಠ ತಾಪಮಾನ ಉತ್ತರ ಒಳನಾಡಿನಲ್ಲಿ 10 ಡಿಗ್ರಿ ಸೆಲ್ಸಿಯಸ್‌ನಿಂದ 12 ಡಿಗ್ರಿ ಸೆಲ್ಸಿಯಸ್‌ವರೆಗೂ, ದಕ್ಷಿಣ ಒಳನಾಡಿನಲ್ಲಿ 12-14 ಡಿಗ್ರಿ ಸೆಲ್ಸಿಯಸ್, ಕರಾವಳಿ ಜಿಲ್ಲೆಗಳಲ್ಲಿ 19-21 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಇರಲಿದೆ ಎಂದು ಹೇಳಲಾಗಿದೆ.
ಈ ಜಿಲ್ಲೆಗಳಲ್ಲಿ ಶೀತಗಾಳಿಯ ಅಬ್ಬರ
ಬೇರೆ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಇಳಿಕೆ ಕಂಡರೆ, ರಾಜ್ಯದ ಎರಡು ಜಿಲ್ಲೆಗಳಲ್ಲಿ ಡಿಸೆಂಬರ್ 24, 25 ರಂದು ಶೀತಗಾಳಿ ಬೀಸಲಿದೆ. ಬೀದರ್, ಕಲಬುರಗಿ ಜಿಲ್ಲೆಯಲ್ಲಿ ಶೀತಗಾಳಿ ಹೆಚ್ಚಾಗಲಿದೆ ಎಂದು ವರದಿಯಾಗಿದೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲಿ ಶೀತಗಾಳಿ ಬೀಸಲಿದ್ದು, ಕರಾವಳಿಯಲ್ಲಿ ಮಾತ್ರ ಮೋಡ ಕವಿದ ವಾತಾವರಣವಿರಲಿದೆ ಎಂದು ಸೂಚನೆ ನೀಡಲಾಗಿದೆ.
ಇನ್ನು ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಯಾದಗಿರಿ, ರಾಯಚೂರು, ಗದಗ, ಧಾರವಾಡ, ಹಾವೇರಿ ಮತ್ತು ಕೊಪ್ಪಳದಲ್ಲಿ ಒಣ ಹವೆ ಜೊತೆಗೆ ಸಾಧಾರಣ ಚಳಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ವಾಹನ ಸವಾರರೇ ಹುಷಾರ್
ಇನ್ನು ಕೆಲವು ಭಾಗದಲ್ಲಿ ಮಂಜಿನ ವಾತಾವರಣ ಹೆಚ್ಚಾಗಲಿದ್ದು, ವಾಹನ, ಬಸ್ ರೈಲು, ವಿಮಾನ ಹಾರಾಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಅಲ್ಲದೇ ಮಂಜು ಹೆಚ್ಚಾಗುವ ಹಿನ್ನೆಲೆ ರಸ್ತೆಗಳು ಸರಿಯಾಗಿ ಕಾಣದೇ ಇರಬಹುದು, ಅಲ್ಲದೇ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಬೆಂಗಳೂರಿನ ಹವಾಮಾನ ಹೇಗಿದೆ?
ಇನ್ನು ಬೆಂಗಳೂರಿನಲ್ಲಿ ಚಳಿ ಹೆಚ್ಚಾಗುವ ನಿರೀಕ್ಷೆಯಿದೆ. ಅಲ್ಲದೇ ಮಂಜು ಹೆಚ್ಚಾಗುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ತಾಪಮಾನ ಇಳಿಕೆಯಾಗಲಿದ್ದು, 13 ಡಿಗ್ರಿ ಸೆಲ್ಸಿಯಸ್‌ನಿಂದ 15 ಡಿಗ್ರಿ ಸೆಲ್ಸಿಯಸ್‌ವರೆಗೂ ಕನಿಷ್ಠ ತಾಪಮಾನ ಇರಲಿದೆ ಎನ್ನಲಾಗಿದೆ. ಚಳಿ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಜನರು ಕೂಡಾ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.


Click it and Unblock the Notifications