ಡಿಸೆಂಬರ್ ತಿಂಗಳು ಬಂದ್ರೆ ಸಾಕು ದೇಶಾದ್ಯಂತ ಸಂಭ್ರಮದ ವಾತಾವರಣವೇ ಸೃಷ್ಟಿಯಾಗುತ್ತೆ. ಅದರಲ್ಲೂ ಬೆಂಗಳೂರಂತೂ ಕಲರ್‌ಫುಲ್ ಲೈಟ್‌ಗಳಿಂದ, ಬಣ್ಣ ಬಣ್ಣದ ಕಾಗದ, ಬಲೂನ್‌ಗಳಿಂದ ಕಂಗೊಳಿಸುತ್ತಿರುತ್ತದೆ. ಬೆಂಗಳೂರಿನಲ್ಲಿ (Bengaluru) ಡಿಸೆಂಬರ್ ತಿಂಗಳಲ್ಲಿ ಏನಾದರೊಂದು ವಿಶೇಷ ಇದ್ದೇ ಇರುತ್ತದೆ. ಬೆಂಗಳೂರು ನಗರವಂತೂ ಸದ್ಯ ಬ್ಯುಸಿ ಲೈಫ್‌ನಿಂದ ಹೊರಬಂದು ಹಬ್ಬದ ಸಂಭ್ರಮಕ್ಕೆ ಸಜ್ಜಾಗುತ್ತಿದೆ.

ಡಿಸೆಂಬರ್ ತಿಂಗಳು ಬಂದ್ರೆ ಸಾಕು, ಬೆಂಗಳೂರಿನ ಬೀದಿ ಬೀದಿಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುತ್ತವೆ, ಮ್ಯೂಸಿಕ್ ಅಂತೂ ಅಲ್ಲಲ್ಲಿ ಕೇಳಿಸುತ್ತಿರುತ್ತದೆ. ಅಲ್ಲದೇ ವಿಧವಿಧದ, ಕಲರ್ ಕಲರ್ ಬಟ್ಟೆಗಳನ್ನು ಹಾಕಿಕೊಂಡು ಜನರಂತೂ ಸದಾ ಸುತ್ತಾಡಿಕೊಂಡಿರುತ್ತಾರೆ. ಇದೀಗ ಅಂತಹ ಸುಂದರ ಕ್ಷಣದಲ್ಲಿ, ಬೆಂಗಳೂರು ಕೇಕ್ ಶೋ 2025 ಒಂದು ಪ್ರಮುಖ ಆಕರ್ಷಣೆಯಾಗಿದೆ.
ಬೆಂಗಳೂರಿನಲ್ಲಿ ಕೇಕ್ ಶೋ!
ಹೌದು, ಇದೀಗ ಬೆಂಗಳೂರಿನಲ್ಲಿ 51ನೇ ಆವೃತ್ತಿಯ ಕೇಕ್ ಶೋ ಆರಂಭವಾಗಿದೆ. ಇನ್ನು ಈ ಕೇಕ್ ಶೋ ಕೇವಲ ಕೇಕ್‌ಗಳ ರುಚಿ ನೋಡಲು ಮಾತ್ರವಲ್ಲ, ಕಲಾತ್ಮಕವಾಗಿ, ವಿಶೇಷ ವಿನ್ಯಾಸಗಳಲ್ಲಿ ಕೇಕ್‌ಗಳನ್ನು ರಚಿಸಲಾಗುತ್ತದೆ. ಇನ್ನು ಈ ಕೇಕ್ ಶೋನಲ್ಲಿ ತೋರಿಸಲಾಗಿರುವ ಕೇಕ್‌ಗಳ ಕಲಾಕೃತಿಗಳು ನೋಡುಗರನ್ನೇ ದಿಗ್ಭ್ರಮೆಗೊಳ್ಳುವಂತೆ ಮಾಡುತ್ತದೆ. ಅಲ್ಲದೇ ಹಬ್ಬದ ಸಂದರ್ಭದಲ್ಲಿ, ರಜಾದಿನಗಳಲ್ಲಿ ಕುಟುಂಬದೊಂದಿಗೆ ಮಜಾ ಮಾಡಲು ಈ ಶೋ ಬೆಸ್ಟ್ ಆಗಿದೆ.
ಕೇಕ್ ಶೋ ನಡೆಯುವ ದಿನಾಂಕ:
ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ (IBCA) ಮತ್ತು ಮೈಬೇಕರ್ಸ್‌ಮಾರ್ಟ್ (MyBakersMart) ಸಂಸ್ಥೆಗಳು ಆಯೋಜಿಸಿರುವ 51ನೇ ವಾರ್ಷಿಕ ಬೆಂಗಳೂರು ಕೇಕ್ ಶೋ 2025ರ ಡಿಸೆಂಬರ್ 12 ರಿಂದ, 2026ರ ಜನವರಿ 4 ರವರೆಗೆ ನಡೆಯಲಿದೆ. ಈ ಸುದೀರ್ಘ ಸಮಯದಲ್ಲಿ ಜನರು ಕ್ರಿಸ್ಮಸ್, ಹೊಸ ವರ್ಷ ಅಥವಾ ನಡುವಿನ ಯಾವುದೇ ದಿನಗಳಲ್ಲಿ ಕೇಕ್ ಶೋಗೆ ಭೇಟಿ ನೀಡಬಹುದು.
ಕೇಕ್ ಶೋ ಸಮಯ:
ಇನ್ನು ಕೇಕ್ ಶೋ ಪ್ರತಿದಿನ ಬೆಳಗ್ಗೆ 11:00 ರಿಂದ ರಾತ್ರಿ 9:00ರ ವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಈ ಕೇಕ್ ಶೋಗೆ ಹೋಗಲು ಬಯಸುವವರು ತಮ್ಮ ಸಮಯಕ್ಕನುಗುಣವಾಗಿ ಹೋಗಿ ಆನಂದಿಸಬಹುದು. ಬೆಂಗಳೂರು ಕೇಕ್ ಶೋ 2025ರಲ್ಲಿ ಪ್ರತಿ ವ್ಯಕ್ತಿಗೆ ₹150 ಪ್ರವೇಶ ಶುಲ್ಕ ವಿಧಿಸಲಾಗಿದೆ. ಇದು ಮೂರು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಅನ್ವಯವಾಗುತ್ತದೆ. ಟಿಕೆಟ್‌ಗಳು ಸಾಮಾನ್ಯವಾಗಿ ಸ್ಥಳದಲ್ಲೇ ಲಭ್ಯವಿದ್ದು, ಮುಂಗಡ ಬುಕಿಂಗ್ ಅಗತ್ಯವಿಲ್ಲ.
ಎಲ್ಲಿ ನಡೆಯುತ್ತಿದೆ ಕೇಕ್ ಶೋ?
ಈ ಕಾರ್ಯಕ್ರಮವು ಬೆಂಗಳೂರಿನ ಸುಪ್ರಸಿದ್ಧ ಪ್ಯಾಲೇಸ್ ಗ್ರೌಂಡ್ಸ್‌ನ ತ್ರಿಪುರ ವಾಸಿನಿ ಪ್ರದೇಶದಲ್ಲಿ ನಡೆಯುತ್ತಿದೆ. ಇನ್ನು ಇಲ್ಲಿಗೆ ಸಾರ್ವಜನಿಕ ಅಥವಾ ಖಾಸಗಿ ಸಾರಿಗೆ ಬಳಸಿಕೊಂಡು ಹೋಗಬಹುದು. ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಆಟೋ ಅಥವಾ ಕ್ಯಾಬ್‌ನಲ್ಲೂ ಇಲ್ಲಿಗೆ ಹೋಗಬಹುದು. ಬಿಎಂಟಿಸಿ ಬಸ್‌ಗಳು ಅಲ್ಲಿಗೆ ಹೋಗುವ ಕಾರಣ ಪ್ರಯಾಣ ಮತ್ತಷ್ಟು ಸುಲಭ. ಸ್ವಂತ ವಾಹನಗಳಲ್ಲಿ ಬರುವವರಿಗೆ, ಪ್ಯಾಲೇಸ್ ಗ್ರೌಂಡ್ಸ್ ಸಮೀಪ ಪಾರ್ಕಿಂಗ್ ಸೌಲಭ್ಯಗಳನ್ನೂ ನೀಡಲಾಗಿದೆ. ಅಂತೂ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಕೇಕ್ ಶೋ ಆರಂಭಗೊಂಡಿದೆ.


Click it and Unblock the Notifications