ದೇಶವ್ಯಾಪಿ ಕೊರೊನಾ ಲಾಕ್‌ಡೌನ್‌ದಿಂದಾಗಿ ಎಲ್ಲಾ ಉದ್ಯಮಗಳು ನೆಲಕಚ್ಚಿದ್ರೂ ಆಹಾರ ಮತ್ತು ದಿನಸಿ ಪದಾರ್ಥಗಳ ಬೇಡಿಕೆ ಮತ್ತು ಪೂರೈಕೆಗೆ ಯಾವುದೇ ಕೊರತೆಯಾಗಿಲ್ಲ. ಜನರು ಬಹುತೇಕ ಕಡೆ ಅಗತ್ಯಕ್ಕಿಂತ ಹೆಚ್ಚಿನದ್ದನ್ನೇ ಶೇಖರಿಸಿಡುತ್ತಿದ್ದಾರೆ.
ಲಾಕ್‌ಡೌನ್ ಘೋಷಣೆಗೂ ಮುನ್ನ ಜನರು ಮುಗಿಬಿದ್ದು ದಿನಸಿ ಪದಾರ್ಥಗಳನ್ನು ಖರೀದಿಸಿದ್ರು. ಇದರ ಪರಿಣಾಮವಾಗಿ ಮಾರಾಟದಲ್ಲಿ ಬಾರೀ ಏರಿಕೆ ಕಂಡುಬಂದಿದೆ.
ದೀಪಾವಳಿ ಹಬ್ಬದ ವೇಳೆ ಖರೀದಿಗಿಂತ ಹೆಚ್ಚಿನ ಮಾರಾಟ
ಲಾಕ್‌ಡೌನ್ ಅಂದ ಕೂಡಲೇ ಜನರು ಹಿಂದೆ ಮುಂದೆ ಯೋಚನೆ ಮಾಡದೆ ಭಾರೀ ಸಂಖ್ಯೆಯಲ್ಲಿ ಖರೀದಿಗೆ ಮುಂದಾದ್ರು. ಇದರಿಂದಾಗಿ ಫ್ಯೂಚರ್ ಗ್ರೂಪ್, ಮೋರ್, ರಿಲಯನ್ಸ್ ಫ್ರೆಶ್, ಸ್ಪೆನ್ಸರ್ಸ್ ರೀಟೇಲ್, ನೇಚರ್ಸ್ ಬಾಸ್ಕೆಟ್ ನಂತಹ ಕಂಪನಿಗಳು ನೀಡಿರುವ ಅಂಕಿ ಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ 15ರಿಂದ 20 ಪರ್ಸೆಂಟ್‌ರಷ್ಟು ಮಾರಾಟ ಏರಿದೆ. ಇದು ಹಬ್ಬದ ವೇಳೆ ಜನರು ಖರೀದಿಸುತ್ತಿದ್ದ ಪ್ರಮಾಣಕ್ಕಿಂತ ಹೆಚ್ಚು.
ರಿಲಯನ್ಸ್ ಫ್ರೆಶ್‌ನಲ್ಲೂ ಭರ್ಜರಿ ಮಾರಾಟ
ರಿಲಯನ್ಸ್ ಫ್ರೆಶ್‌ನಲ್ಲಿ ಜನರು 44 ಪರ್ಸೆಂಟ್ರಷ್ಟು ಹೆಚ್ಚುವರಿ ಖರೀದಿ ಮಾಡಿದ್ದಾರೆ. ಅಂದರೆ ಜನವರಿ-ಮಾರ್ಚ್ ಅವಧಿಯಲ್ಲಿ 10,043 ಕೋಟಿ ರುಪಾಯಿ ಮೌಲ್ಯದ ವಸ್ತುಗಳು ಖರೀದಿಯಾಗಿ, ದಾಖಲೆಗೆ ಕಾರಣವಾಗಿದೆ.
ಆನ್‌ಲೈನ್‌ನಲ್ಲೂ ಮಾರಾಟ ಏರಿಕೆ
ಗ್ರಾಫರ್ಸ್, ಬಿಗ್‌ಬಾಸ್ಕೆಟ್‌ನಂತಹ ಆನ್‌ಲೈನ್ ಖರೀದಿ ತಾಣದಲ್ಲೂ ಜನ ಮುಗಿಬಿದ್ದು ಖರೀದಿಸಿದ್ದಾರೆ. ಮಾರ್ಚ್- ಏಪ್ರಿಲ್‌ನಲ್ಲಿ ಈ ಸಂಸ್ಥೆಗಳು ದಾಖಲೆಯ ಮಾರಾಟ ಕಂಡಿವೆ. ವಿಶೇಷವೆಂದರೆ ಆರಂಭದಲ್ಲಿ ಧಾನ್ಯ, ಹಿಟ್ಟು, ಅಕ್ಕಿ ಹೀಗೆ ಕೊಳ್ಳುತ್ತಿದ್ದ ಜನ ಈಗ ಯೋಚನೆ ಬದಲಿಸಿದಂತಿದೆ. ತಕ್ಷಣ ಸಿದ್ಧಪಡಿಸಬಹುದಾದ ನೂಡಲ್ಸ್, ಪಾಸ್ತಾ, ಕುರುಕಲು, ಬ್ರೆಡ್ ಮಾರಾಟ ಪ್ರಮಾಣ ಹೆಚ್ಚಿದೆ. ಗ್ರಾಫರ್ಸ್‌ನಲ್ಲಿ ಒಟ್ಟು ಖರೀದಿಯ ಪ್ರಮಾಣ ಈ ಅವಧಿಯಲ್ಲಿ 416 ಕೋಟಿ ರುಪಾಯಿಗೇರಿದೆ. ಇತರೆ ಆನ್‌ಲೈನ್ ಮಾರಾಟ ಕೇಂದ್ರದಲ್ಲೂ ಜನರು ಬುಕ್ಕಿಂಗ್ ಮಾಡುತ್ತಿದ್ದಾರೆ.


Click it and Unblock the Notifications