ಸೌದಿ ಅರೇಬಿಯಾದಲ್ಲಿ ಮೂರು ತಿಂಗಳಿಂದ ಇದ್ದ ಲಾಕ್ ಡೌನ್ ಅನ್ನು ಭಾನುವಾರದಂದು (ಜೂನ್ 21, 2020) ತೆರವುಗೊಳಿಸಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಯಿಂದ ನಿರ್ಬಂಧ ತೆರವುಗೊಂಡಿದೆ. ಆದರೆ ಧಾರ್ಮಿಕ ಉದ್ದೇಶಗಳಿಗಾಗಿ ಪ್ರವಾಸ ಬರುವವರು, ಅಂತರರಾಷ್ಟ್ರೀಯ ಪ್ರವಾಸಿಗರು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ 50ಕ್ಕೂ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂಬ ನಿಯಮ ಮುಂದುವರಿದಿದೆ.
ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ ಮಾರ್ಚ್ ನಲ್ಲಿ ಸೌದಿ ಅರೇಬಿಯಾ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಕೆಲವು ಪಟ್ಟಣ ಹಾಗೂ ನಗರಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕರ್ಫ್ಯೂ ಹೇರಿತ್ತು. ಕಳೆದ ಮೇ ತಿಂಗಳಲ್ಲಿ ಘೋಷಣೆ ಮಾಡಿದ್ದಂತೆ ಮೂರು ಹಂತಗಳಲ್ಲಿ ಸಂಚಾರ ಮತ್ತಿತರ ವಿಚಾರಕ್ಕೆ ವಿನಾಯಿತಿ ನೀಡಲಾಗಿದೆ.
ಆದರೆ, ಮೇ 28ರಂದು ಸಂಚಾರಕ್ಕೆ ವಿನಾಯಿತಿ ನೀಡಿದ ಮೇಲೆ ಕೊರೊನಾ ಸೋಂಕಿತ ಪ್ರಕರಣದಲ್ಲಿ ಗಮನಾರ್ಹವಾದ ಹೆಚ್ಚಳವಾಗಿದೆ. ಈ ತನಕ ಒಟ್ಟು 1,54,223 ಪ್ರಕರಣಗಳು ದಾಖಲಾಗಿದ್ದರೆ, 1230 ಸಾವಿನ ಪ್ರಕರಣಗಳು ವರದಿಯಾಗಿವೆ. ಆರು ರಾಷ್ಟ್ರಗಳ ಗಲ್ಫ್ ಕೋ ಆಪರೇಷನ್ ಕೌನ್ಸಿಲ್ ಪೈಕಿ ಸೌದಿ ಅರೇಬಿಯಾದಲ್ಲೇ ಕೊರೊನಾ ಪ್ರಕರಣ ಹೆಚ್ಚು ದಾಖಲಾಗಿದೆ.

ವಾರ್ಷಿಕ ಹಜ್ ಯಾತ್ರೆಗೆ ಭೇಟಿ ನೀಡುವವರ ಸಂಖ್ಯೆಯನ್ನು ಮಿತಿಗೊಳಿಸಲು ಸೌದಿ ಅರೇಬಿಯಾ ಯೋಜನೆ ಮಾಡಿದೆ. ವಾರಗಳ ಕಾಲ ನಡೆಯುವ ಮೆಕ್ಕಾ ಮದೀನ ಯಾತ್ರೆಗೆ ಇಪ್ಪತ್ತೈದು ಲಕ್ಷ ಮಂದಿ ಭೇಟಿ ನೀಡುತ್ತಿದ್ದರು. ಮುಸ್ಲಿಮರಲ್ಲಿ ಯಾರಿಗೆಲ್ಲ ಸಾಧ್ಯವಿದೆಯೋ ಅಂಥವರು ಜೀವಮಾನದಲ್ಲಿ ಒಮ್ಮೆಯಾದರೂ ಕೈಗೊಳ್ಳಬೇಕಾದ ಪವಿತ್ರ ಯಾತ್ರೆ ಇದು.
ಸೌದಿ ಅರೇಬಿಯಾವು ಮಾರ್ಚ್ ನಲ್ಲಿ ಮನವಿ ಮಾಡಿ, ಹಜ್ ಯಾತ್ರೆಯನ್ನು ತಡೆಯುವ ಬಗ್ಗೆ ಕೇಳಿಕೊಂಡಿತ್ತು. ಜತೆಗೆ ಮುಂದಿನ ಆದೇಶದ ತನಕ ಉಮ್ರಾ ಯಾತ್ರೆಯನ್ನು ಅಮಾನತು ಮಾಡಲು ಸಹ ಹೇಳಿತ್ತು


Click it and Unblock the Notifications