ಗ್ರಾಮೀಣ ಭಾಗದ ಆರ್ಥಿಕತೆಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೊರೊನಾ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿರುವುದು ಕಂಡುಬರುತ್ತಿದೆ. GVAಯಲ್ಲಿ (ಉಳಿದೆಲ್ಲ ನೆಗೆಟಿವ್ ತೋರಿಸುತ್ತಿದೆ) ಇರುವ ಪೈಕಿ ಕೃಷಿ ವಲಯ ಮಾತ್ರ 3.4% ಸಕಾರಾತ್ಮಕ ಬೆಳವಣಿಗೆ ತೋರಿಸುತ್ತಿದೆ. ಇನ್ನೆಲ್ಲವೂ ಲಾಕ್ ಡೌನ್ ಪ್ರಭಾವವನ್ನೇ ಸೂಚಿಸುತ್ತಿವೆ.
ಸೆಪ್ಟೆಂಬರ್ 11ನೇ ತಾರೀಕು ಆರ್ ಬಿಐ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ಕಿರು ಸಾಲ ವಲಯದ ಅತಿ ದೊಡ್ಡ ಅಪಾಯದ ಬಗ್ಗೆ ಎಚ್ಚರಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಆದಾಯ ಸೃಷ್ಟಿಗೆ ಹಾಗೂ ಜೀವನ ನಡೆಸುವುದಕ್ಕೆ ಮುಖ್ಯವಾದ ಬೆನ್ನೆಲುಬು ಈ ಕಿರು ಸಾಲ ವಲಯ. ಈಗ ಅದೇ ಅಪಾಯಕ್ಕೆ ಸಿಲುಕಿಕೊಳ್ಳಲಿದೆ ಎಂದು ಆರ್ ಬಿಐ ಎಚ್ಚರಿಸಿತ್ತು.
ಕೊರೊನಾದಿಂದ ದೀರ್ಘಾವಧಿ ದೊಡ್ಡ ಅಪಾಯಗಳಿವೆ. ಪೂರೈಕೆ ಜಾಲ ಹಾಗೂ ವ್ಯಾಪಾರ- ವ್ಯವಹಾರ ನಡೆಸುವುದಕ್ಕೆ ಸಮಸ್ಯೆಯಾಗುವುದನ್ನು ಹೊರತುಪಡಿಸಿ ಬದುಕು ನಡೆಸುವುದೇ ಕಷ್ಟವಾಗುತ್ತದೆ. ಅದರ ಪರಿಣಾಮವಾಗಿ ಕುಟುಂಬಗಳ ಆದಾಯದಲ್ಲಿ ಭಾರೀ ಇಳಿಕೆ ಆಗಲಿದೆ ಎಂದು ತಿಳಿಸಲಾಗಿತ್ತು.
ಸಣ್ಣ ವರ್ತಕರು, ದಿನಗೂಲಿ ನೌಕರರ ಅವಲಂಬನೆ
ಸಣ್ಣ ಪ್ರಮಾಣದ ವರ್ತಕರು, ದಿನಗೂಲಿ ನೌಕರರು, ಅಂದಿನ ದುಡಿಮೆಯನ್ನೇ ನಂಬಿಕೊಂಡು ಇರುವವರು ಇಂಥವರೇ ಕಿರು ಸಾಲ ಪಡೆಯುವಂಥವರು (ಮುಖ್ಯವಾಗಿ ಸ್ವಸಹಾಯ ಗುಂಪುಗಳಿಂದ ನೆರವು ಪಡೆಯುತ್ತಾರೆ. ಇದನ್ನು ನಡೆಸುವವರು ಮಹಿಳೆಯರು). "2020ರ ಏಪ್ರಿಲ್ ನಲ್ಲಿ ಲಾಕ್ ಡೌನ್ ನಿಂದ ಬಹಳ ದೊಡ್ಡ ಪೆಟ್ಟು ಬಿದ್ದಿರುವುದೇ ಇವುಗಳಿಗೆ". ಒಟ್ಟಾರೆ ಉದ್ಯೋಗಗಳ ಪೈಕಿ ಈ ವಿಭಾಗದಲ್ಲಿ 32% ಬರುತ್ತದೆ. ಈ ಪೈಕಿ 75% ಮಂದಿಗೆ 2020ರ ಏಪ್ರಿಲ್ ನಲ್ಲಿ ಸಮಸ್ಯೆಯಾಗಿದೆ. ಅದೇ ತಿಂಗಳಲ್ಲಿ ಸಾಲ ವಸೂಲಿ ಪ್ರಮಾಣ 3%ಗೆ ಕಡಿಮೆ ಆಗಿತ್ತು. ಮೇ ತಿಂಗಳಲ್ಲಿ ಅದು 21% ಮತ್ತು ಜೂನ್ ನಲ್ಲಿ 58% ಆಯಿತು. ಆದರೂ ಈ ವರ್ಷದ ಮಾರ್ಚ್ ನಲ್ಲಿ ಇದ್ದ 83%ಗೆ ಹೋಲಿಸಿದರೆ (ಲಾಕ್ ಡೌನ್ ಘೋಷಣೆ ಆಗಿದ್ದು ಮಾರ್ಚ್ 25) ಬಹಳ ಕಡಿಮೆಯೇ. ಸಾಲ ಮರುಪಾವತಿಯಿಂದ ವಿನಾಯಿತಿ ಪಡೆದವರಲ್ಲಿ ಕಿರು ಸಾಲ ಪಡೆದವರ ಪ್ರಮಾಣ ಹೆಚ್ಚು.
ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದು ಎನ್ ಬಿಎಫ್ ಸಿ, ಮೈಕ್ರೋ ಫೈನಾನ್ಸ್
ಮಾರ್ಚ್ 31, 2020ರ ಹೊತ್ತಿಗೆ ಕಿರು ಸಾಲ ನೀಡುವ ಸಂಸ್ಥೆಗಳಿಗೆ ಬರಬೇಕಾಗಿದ್ದ ಒಟ್ಟು ಸಾಲ ಮೊತ್ತ 2.32 ಲಕ್ಷ ಕೋಟಿ ರುಪಾಯಿ. ಮಾರ್ಚ್ 31, 2019ರ ಹೊತ್ತಿಗೆ ಅದು 1.79 ಲಕ್ಷ ಕೋಟಿ ಇತ್ತು. ಆರ್ ಬಿಐ ತಿಳಿಸುವಂತೆ ಅತಿ ದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದ್ದು ಎನ್ ಬಿಎಫ್ ಸಿ ಹಾಗೂ ಕಿರು ಸಾಲ ಸಂಸ್ಥೆಗಳು. ಏಕೆಂದರೆ, ಇವೆರಡೂ ಯಾವುದೇ ಖಾತ್ರಿ ಪಡೆಯದೆ, ಕಡಿಮೆ ಆದಾಯದ ಗುಂಪುಗಳಿಗೆ ಸಾಲ ನೀಡುತ್ತವೆ. ಮತ್ತು ಇವು ಗ್ರಾಮೀಣ ಭಾಗದಲ್ಲಿ ಹೆಚ್ಚು (ಪೋರ್ಟ್ ಫೋಲಿಯೋದ 75ರಷ್ಟು). ಬಹುತೇಕ ಸಾಲವನ್ನು (55.8%) ನೀಡುವುದು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ. ಸಾಲ ವಸೂಲಾತಿಯಲ್ಲಿ ಎನ್ ಬಿಎಫ್ ಸಿಗಳಿಗೆ ಶೇಕಡಾ 40ರಷ್ಟು ಹಾಗೂ ಕಿರು ಹಣಕಾಸು ಸಂಸ್ಥೆಗಳಿಗೆ 80ರಷ್ಟು ಕಡಿಮೆ ಆಗಿತ್ತು. ಈ ಮಧ್ಯೆ ಮುದ್ರಾ ಸಾಲ ಯೋಜನೆ ಕೂಡ ಸಮಸ್ಯೆಗೆ ಸಿಲುಕಿಕೊಂಡಿತು. ಈ ಸಾಲ ಕೂಡ (ಹತ್ತು ಲಕ್ಷ ರುಪಾಯಿ ತನಕ) ಯಾವುದೇ ಅಡಮಾನ ಅಥವಾ ಖಾತ್ರಿ ಪಡೆಯದೆ ನೀಡುವ ಸಾಲ. ಸಣ್ಣ ಉದ್ಯಮಗಳಿಗೆ, ಮುಖ್ಯವಾಗಿ ಮಧ್ಯಮ, ಸಣ್ಣ, ಕಿರು ಸಂಸ್ಥೆಗಳಿಗೆ (MSME's) ಸಾಲ ನೀಡಲಾಗುತ್ತದೆ.
ಬ್ಯಾಡ್ ಡೆಟ್ಸ್ ಹಾಗೂ ಎನ್ ಪಿಎ
ಹಣಕಾಸು ಸಚಿವಾಲಯದ ಅಂಕಿ- ಅಂಶವೇ ತಿಳಿಸುವ ವರದಿಯೊಂದರ ಪ್ರಕಾರ, ಸಾರ್ವಜನಿಕ ಬ್ಯಾಂಕ್ ಗಳಲ್ಲಿನ ಬ್ಯಾಂಡ್ ಡೆಟ್ಸ್ FY18ರಲ್ಲಿ 2.12 ಲಕ್ಷ ಕೋಟಿ ಆಗಿದೆ. ಆ ನಂತರ FY19ರಲ್ಲಿ 3.05 ಲಕ್ಷ ಕೋಟಿ ಹಾಗೂ FY20ರಲ್ಲಿ 3.82 ಲಕ್ಷ ಕೋಟಿ ಮುಟ್ಟಿದೆ. ಅದೇ ಅವಧಿಯಲ್ಲಿ ಅನುತ್ಪಾದಕ ಆಸ್ತಿ (NPA) 7,277 ಕೋಟಿ ರು., 11,483 ಕೋಟಿ ರು., ಹಾಗೂ 18,835.77 ಕೋಟಿ ರುಪಾಯಿ ಆಗಿದೆ. ಗ್ರಾಮೀಣ ಭಾಗದಲ್ಲಿ ಇವುಗಳ ಪ್ರಮಾಣ ಏನು ಎಂಬುದು ನಿಖರವಾಗಿ ಗೊತ್ತಿಲ್ಲ. ಆದರೆ 51% ನಷ್ಟು ಎಂಎಸ್ ಎಂಇಗಳು ಇರುವುದು ಗ್ರಾಮೀಣ ಭಾಗದಲ್ಲೇ. ಜೂನ್ ತಿಂಗಳಲ್ಲಿ ಕೇಂದ್ರದಿಂದ ಎರಡು ಪರ್ಸೆಂಟ್ ಬಡ್ಡಿ ವಿನಾಯಿತಿಯನ್ನು ಮುದ್ರಾ ಸಾಲದ ಅಡಿ ಬರು ಶಿಶು ಯೋಜನೆಗಳಿಗೆ ಘೋಷಿಸಲಾಯಿತು. ಅಮ್ದ ಹಾಗೆ ಮುದ್ರಾ ಸಾಲದಿಂದ ಹೆಚುತ್ತಿರುವ ಎನ್ ಪಿಎ ಕಾರಣಕ್ಕೆ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಹಣಕಾಸು ಸಂಸ್ಥೆಗಳು ನಗದು ಕೊರತೆ ಎದುರಿಸುವಂತಾಗುತ್ತದೆ.
ವಲಸಿಗರು ಕಳುಹಿಸುತ್ತಿದ್ದ ಮೊತ್ತ ವರ್ಷಕ್ಕೆ 2 ಲಕ್ಷ ಕೋಟಿ ರು.
ನಬಾರ್ಡ್ 2018ರ ಆಗಸ್ಟ್ ನಲ್ಲಿ ಬಿಡುಗಡೆ ಮಾಡಿದ ಸಮೀಕ್ಷೆ ಪ್ರಕಾರ, ಕೃಷಿಯಿಂದ ಬರುವ ಆದಾಯ ಶೇಕಡಾ 47.5, ವ್ಯವಸಾಯದಿಂದ ಕುಟುಂಬಗಳಿಗೆ ಬರುವ ತಿಂಗಳ ಆದಾಯ ಶೇಕಡಾ 35 ಮಾತ್ರ. ಉಳಿದದ್ದು ಬರುವುದು ಕೃಷಿಯೇತರ ಸೇರಿ ಇತರ ಚಟುವಟಿಕೆಗಳಿಂದ ಶೇಕಡಾ 54ರಷ್ಟು ಸರಾಸರಿ ಕೂಲಿಯಿಂದ ಬರುತ್ತದೆ. 32% ಸಂಬಳ ಮತ್ತು ಕೃಷಿಯೇತರ ಚಟುವಟಿಕೆಯಿಂದ 12% ಬರುತ್ತದೆ. ನಗರ ಪ್ರದೇಶಗಳಿಗೆ ವಲಸೆ ಹೋಗಿ, ಅಲ್ಲಿಂದ ಹಣವನ್ನು ಕಳುಹಿಸುವವರಿಂದ ಗ್ರಾಮೀಣ ಭಾಗದ ಕುಟುಂಬಗಳ ಆದಾಯ ಹೆಚ್ಚಾಗಿತ್ತು. ಆದರೆ ಲಕ್ಷಾಂತರ ಮಂದಿ ವಲಸಿಗಳು ರಾತ್ರೋರಾತ್ರಿ ಕೆಲಸ ಕಳೆದುಕೊಂಡರೋ ಅದರಿಂದ ಆದಾಯಕ್ಕೆ ದೊಡ್ಡ ಪೆಟ್ಟು ಬಿತ್ತು. ಒಂದು ಅಂದಾಜಿನ ಪ್ರಕಾರ ವಲಸಿಗರು ಒಂದು ವರ್ಷಕ್ಕೆ ಕಳುಹಿಸುತ್ತಿದ್ದ ಮೊತ್ತ 2 ಲಕ್ಷ ಕೋಟಿ ರುಪಾಯಿ. ಲಾಕ್ ಡೌನ್ ನಂತರ ಈ ಮೊತ್ತದಲ್ಲಿ 80% ಇಳಿಕೆ ಆಗಿದೆ.
ಗ್ರಾಮೀಣ ಭಾಗದಲ್ಲಿ ಚೇತರಿಕೆ ಆಗಬೇಕು
ಇನ್ನು ನಗರ ಪ್ರದೇಶದಲ್ಲೇ ಇದ್ದುಕೊಂಡು, ಕೆಲಸ ಮಾಡುತ್ತಾ ಗ್ರಾಮೀಣ ಭಾಗಗಳಿಗೆ ಹಣ ಕಳುಹಿಸುತ್ತಿದ್ದವರಿಗೂ ಆದಾಯದಲ್ಲಿ ಖೋತಾ ಆಗಿ, ಅದರಿಂದಲೂ ಪರಿಣಾಮ ಆಗಿದೆ. ಆಗಸ್ಟ್ ಕೊನೆಗೆ ಸುರಿದ ಮಳೆಗೆ ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಖಾರೀಫ್ ಬೆಳೆಯು ನಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಿರುವ ಕೊರೊನಾ ಸೋಂಕಿತ ಪ್ರಕರಣಗಳು ಆತಂಕ ಹೆಚ್ಚಿಸಿವೆ. ಕನಿಷ್ಠ 12 ರಾಜ್ಯಗಳಿಗೆ ಗ್ರಾಮೀಣ ಭಾಗಗಳಿಂದ ಬರಬೇಕಾದ GSDP ನಷ್ಟ 69ರಿಂದ 100% ಆಗಿದೆ. ಈ ರಾಜ್ಯಗಳು ಪ್ರಮುಖವಾಗಿ ಭತ್ತ, ಗೋಧಿ, ಕಬ್ಬು, ಆಲೂಗಡ್ಡೆ, ಜೋಳ ಮತ್ತಿತರ ಬೆಳೆಗಳನ್ನು ಬೆಳೆಯುತ್ತವೆ. ದೇಶದ ಜಿಡಿಪಿ ಹಾಗೂ ಉದ್ಯೋಗ ಸೃಷ್ಟಿಯನ್ನು ಗಣನೆಗೆ ತೆಗೆದುಕೊಂಡಾಗ ಗ್ರಾಮೀಣ ಭಾಗದ ಕೊಡುಗೆ ಅತಿ ಮುಖ್ಯ. ಆದ್ದರಿಂದ ಕೊರೊನಾದಿಂದ ಆಗಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಗ್ರಾಮೀಣ ಭಾಗದಲ್ಲಿ ಚೇತರಿಕೆಗೆ ಹೆಚ್ಚಿನ ಗಮನ ನೀಡಬೇಕು.


Click it and Unblock the Notifications