ನವದೆಹಲಿ, ಜೂನ್ 15: ಕೊರೊನಾವೈರಸ್ ಜಗತ್ತಿನ ಆರ್ಥಿಕ ಪರಿಸ್ಥಿತಿಯನ್ನು ಹೈರಾಣಾಗಿಸಿದೆ. ಅನೇಕ ರಾಷ್ಟ್ರಗಳ ವ್ಯಾಪಾರೋದ್ಯಮ ಕುಸಿತವಾಗಿದೆ. ಇದರಿಂದ ಅನೇಕ ಮುಂದುವರೆದ ರಾಷ್ಟ್ರಗಳೇ ಹಿಂದೆಂದೂ ಕಂಡು ಕೇಳರಿಯದಂತ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿವೆ.
ಕೊರೊನಾವೈರಸ್ ಭಾರತದ ರಪ್ತು ಮತ್ತು ಆಮದು ಉದ್ಯಮದ ಮೇಲೆ ತೀವ್ರ ಪೆಟ್ಟು ಕೊಟ್ಟಿದೆ. ಕಳೆದ ನಲವತ್ತು ವರ್ಷಗಳಲ್ಲಿ ಭಾರತದ ರಪ್ತು ಮತ್ತು ಆಮದು ಪ್ರಮಾಣದಲ್ಲಿ ತೀವ್ರ ಏರುಪೇರುಗಳು ಸಂಭವಿಸಿ ಈ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ.
ಕೇಂದ್ರದ ವಾಣಿಜ್ಯ ಇಲಾಖೆ ಸೋಮವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಲಾಕ್‌ಡೌನ್ ಪ್ರಭಾವದಿಂದ ರಪ್ತು ಮತ್ತು ಆಮದಿನಲ್ಲಿ ತೀವ್ರ ಕುಸಿತ ಕಂಡು ಬಂದಿದೆ.
ಶೇ 36.5% ರಪ್ತು ಕುಸಿತ
ರಪ್ತು ಶೇ 36.5% ನಷ್ಟು ಕುಸಿದಿದ್ದರೆ, ಆಮದು 51% ನಷ್ಟು ಕುಸಿದಿದೆ ಎಂದು ಕೇಂದ್ರ ವಾಣಿಜ್ಯ ಇಲಾಖೆ ಹೇಳಿದೆ. ಇದರ ಪರಿಣಾಮವಾಗಿ ಭಾರತಕ್ಕೆ ಕೇವಲ ಮೂರೇ ತಿಂಗಳಲ್ಲಿ 3.1 ಬಿಲಿಯನ್ ಡಾಲರ್ ವ್ಯಾಪಾರ ನಷ್ಟವಾಗಿದೆ ಎಂದು ವಾಣಿಜ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಕೆಲವು ಮಾತ್ರ ನಿರೀಕ್ಷಿತ ಬೆಳವಣಿಗೆ
ಪ್ರಮುಖ ವಸ್ತುಗಳ ಪೈಕಿ, ಅಕ್ಕಿ, ಮಸಾಲೆಗಳು, ಕಬ್ಬಿಣದ ಅದಿರು, ಔಷಧಗಳು ಮಾತ್ರ ಮೇ ತಿಂಗಳಲ್ಲಿ ರಪ್ತಿನಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಆಮದು ಮಾಡಿಕೊಂಡ ವಸ್ತುಗಳ ಪೈಕಿ ಕಬ್ಬಿಣದ ಪೈರೈಟ್‌ಗಳು, ಯೋಜನಾ ಸರಕುಗಳು ಮೇ ತಿಂಗಳಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ದಾಖಲಿಸಿವೆ. ಉಳಿದಂತೆ ಇತರ ಎಲ್ಲ ಬಗೆಯ ರಪ್ತು ಆಮದು ನೆಲ ಕಚ್ಚಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಆರ್ಥಿಕತೆ ಕ್ಷೀಣಿಸುತ್ತಿರುವ ಸೂಚನೆ
ಸುಮಾರು ಎರಡು ತಿಂಗಳ ಅವಧಿಯ ರಾಷ್ಟ್ರವ್ಯಾಪಿ ಲಾಕ್‌ಡೌನ್ ಭಾರತದ ವ್ಯಾಪಾರೋದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ಇದು ಆರ್ಥಿಕತೆ ಕ್ಷೀಣಿಸುತ್ತಿರುವ ಸೂಚನೆಯನ್ನು ನೀಡುತ್ತದೆ ಎಂದು ವಾಣಿಜ್ಯ ಇಲಾಖೆ ಹೇಳಿದೆ.
13% ರಿಂದ 32% ರಷ್ಟು ಕುಸಿಯುತ್ತದೆ
ಕೊರೊನಾ ಕಾರಣದಿಂದ 2020 ರಲ್ಲಿ ಜಾಗತಿಕ ವ್ಯಾಪಾರವು 13% ರಿಂದ 32% ರಷ್ಟು ಕುಸಿಯುತ್ತದೆ ಎಂದು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ಅಂದಾಜಿಸಿದೆ. ಈ ಕುಸಿತವು 2008-09ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ವ್ಯಾಪಾರ ಕುಸಿತವನ್ನೂ ಮೀರಬಹುದು ಎಂದು ವಿಶ್ವ ವಾಣಿಜ್ಯ ಸಂಸ್ಥೆಯ ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.


Click it and Unblock the Notifications