ಕೊರೊನಾವೈರಸ್ ಭೀತಿಯು ವಿಶ್ವದೆಲ್ಲೆಡೆ ಮೂಡಿರುವಂತೆ ಭಾರತದಲ್ಲಿಯೂ ಆವರಿಸಿದೆ. ಈಗಾಗಲೇ ಭಾರತದಲ್ಲಿ 120ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಹೀಗೆ ಭೀತಿಯ ನಡುವೆ ಗೋ ಮೂತ್ರ ಹಾಗೂ ಸಗಣಿಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ.
ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಡಂಕುಣಿ ಎಂಬಲ್ಲಿ ಹಾಲು ಮಾರಾಟಗಾರರು ಗೋ ಮೂತ್ರ, ಸಗಣಿ ಮಾರಾಟಕ್ಕೆ ಇಳಿದಿದ್ದಾರೆ. ಮೌದಿ ಅಲಿ ಎಂಬ ಹಾಲು ಉತ್ಪಾದಕನು ದೆಹಲಿ ಮತ್ತು ಕೊಲ್ಕತ್ತಾಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ಗೋ ಮೂತ್ರ, ಸಗಣಿ ಮಾರಾಟ ಮಾಡುತ್ತಿದ್ದಾರೆ. ಇದರ ಬೆಲೆ ಲೀಟರ್‌ಗೆ 500 ರುಪಾಯಿ.

ದೆಹಲಿಯಲ್ಲಿ ಇತ್ತೀಚೆಗಷ್ಟೇ ಹಿಂದೂ ಮಹಾಸಭಾ ಆಯೋಜಿಸಿದ್ದ ಗೋ ಮೂತ್ರ ಪಾರ್ಟಿಯಿಂದ ಈ ವಿಚಾರ ತಿಳಿದುಕೊಂಡ ಅಲಿ ಈ ಬಿಜಿನೆಸ್‌ಗೆ ಇಳಿದಿದ್ದಾನೆ. ಹಸುವಿನ ಮೂತ್ರ ಹಾಗೂ ಸಗಣಿ ಮೇಲೆ ಪೋಸ್ಟರ್ ಕೂಡ ಅಂಟಿಸಲಾಗಿದ್ದು, ''ಹಸುವಿನ ಮೂತ್ರ ಕುಡಿಯಿರಿ ಮತ್ತು ಕೊರೊನಾವೈರಸ್ ಅನ್ನು ನಿವಾರಿಸಿ''ಎಂದು ಪೋಸ್ಟರ್ ಲೇಬಲ್ ಅಂಟಿಸಲಾಗಿದೆ.
''ನನ್ನ ಬಳಿ ಎರಡು ಹಸುಗಳಿವೆ, ಒಂದು ಭಾರತೀಯ ಹಸು ಮತ್ತು ಇನ್ನೊಂದು ಜರ್ಸಿ ಹಸು. ನಾನು ಹಾಲು ಮಾರಾಟ ಮಾಡಿ ಹಣ ಸಂಪಾದಿಸುತ್ತೇನೆ. ಹಾಗಾಗಿ ಗೋ ಮೂತ್ರ ಪಾರ್ಟಿಯನ್ನು ಟಿವಿಯಲ್ಲಿ ನೋಡಿದ ನಂತರ, ಗೋ ಮೂತ್ರ ಮತ್ತು ಸಗಣಿಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ನಾನು ಅರಿತುಕೊಂಡೆ. ನನ್ನ ವ್ಯವಹಾರದಲ್ಲಿ ಹಸುಗಳ ಮೂತ್ರವನ್ನು ಬಳಸುತ್ತಿದ್ದೇನೆ'' ಎಂದು ಅಲಿ ಹೇಳಿದ್ದಾರೆ.
ಅಲಿಯ ಅಂಗಡಿಯಲ್ಲಿ ಒಂದು ಲೀಟರ್ ಗೋ ಮೂತ್ರಕ್ಕೆ 500 ರುಪಾಯಿ ದರವಿದ್ದು, ಜರ್ಸಿ ಹಸುಗಳ ಒಂದು ಕಿಲೋ ಸಗಣಿ ಅಗ್ಗದ ದರದಲ್ಲಿ 300 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಜರ್ಸಿ ಹಸು ಭಾರತೀಯ ಹಸುವಿನಂತೆ ಶುದ್ಧ ತಳಿಯಲ್ಲ. ಆದ್ದರಿಂದ ಅದರ ಮೂತ್ರಕ್ಕೆ ಹೆಚ್ಚು ಬೇಡಿಕೆಯಿಲ್ಲ ಎನ್ನುತ್ತಾರೆ ಹಾಲು ಮಾರಾಟಗಾರ ಮೌದಿ ಅಲಿ.


Click it and Unblock the Notifications