ಕೊರೊನಾ ಮಹಾಮಾರಿ ಉದಯವಾಗಲು ಕಾರಣವಾದ ಚೀನಾ ಎಂಬ ದೈತ್ಯ ರಾಷ್ಟ್ರದಲ್ಲಿ ಈಗ ಎಲ್ಲವೂ ಸರಿ ಇಲ್ಲ ಎನ್ನಲಾಗುತ್ತಿದೆ. ಒಂದೇಡೆ ಅಮೆರಿಕ, ಯುರೋಪ್ ಮೂಲದ ಉದ್ಯಮಗಳು ಚೀನಾದಿಂದ ಕಾಲ್ಕಿಳ್ಳಲು ಪ್ರಾರಂಭ ಮಾಡುತ್ತಿವೆ. ಇನ್ನೊಂದೆಡೆ ಅಮೆರಿಕ ಚೀನಾದೊಂದಿಗೆ ಬಹಿರಂಗವಾಗಿ ಆರ್ಥಿಕ ಸಮರ ನಡೆಸುತ್ತಿದೆ. ಇದರಿಂದ ಚೀನಾ ಪೆಟ್ಟು ತಿನ್ನುತ್ತಿದೆ ಎಂಬ ವರದಿಗಳು ಹೆಚ್ಚೆಚ್ಚು ಬರುತ್ತಿವೆ.
ಚೀನಾದಲ್ಲಿ ಈ ರೀತಿ ಪರಿಸ್ಥಿತಿ ಉದ್ಭವಿಸಿರುವುದರಿಂದ ಇದರ ಲಾಭ ಪಡೆಯಲು ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ಅನೇಕ ರಾಷ್ಟ್ರಗಳು ಹವಣಿಸುತ್ತಿವೆ. ಯುರೋಪ್ ಮೂಲದ ಉದ್ಯಮಗಳನ್ನು ಭಾರತಕ್ಕೆ ಕರೆತರಲು ಭಾರತ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜಯ ಸಿಗುತ್ತಿಲ್ಲ ಎನ್ನಲಾಗಿದೆ.
ಈ ಕುರಿತು ಹಾಂಗ್ ಕಾಂಗ್ ಮೂಲದ ಗುಣಮಟ್ಟ ನಿಯಂತ್ರಣ ಮತ್ತು ಪೂರೈಕೆ ಸರಪಳಿ ಪರಿಶೀಲನಾ ಕಂಪನಿಯಾದ ಕಿಮಾ ಸಮೀಕ್ಷೆ ಬಿಡುಗಡೆ ಮಾಡಿದ್ದು, ಚೀನಾದಿಂದ ಉದ್ಯಮಗಳನ್ನು ಸೆಳೆಯಲು ಭಾರತಕ್ಕಿಂತ ಆಗ್ನೇಯ ಎಷ್ಯಾ ರಾಷ್ಟ್ರವಾದ ವಿಯೆಟ್ನಾಂ ಮುಂದೆ ಇದೆ ಎಂದು ಹೇಳಿದೆ. ಇದರಿಂದ ಭಾರತ ಪಾಠ ಕಲಿಯಬೇಕಿದೆ ಎಂದು ಅದು ಹೇಳಿದೆ.
ಆಗ್ನೇಯ ಏಷ್ಯಾಕ್ಕೆ ಶೇ 45 ರಷ್ಟು
ಚೀನಾದಿಂದ ಹೊರ ಹೋಗಲು ಬಯಸುತ್ತಿರುವ ಕಂಪೆನಿಗಳಿಗೆ ಆಗ್ನೇಯ ಏಷ್ಯಾಕ್ಕೆ ಶೇ 45 ರಷ್ಟು (ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಫಿಲಿಪೈನ್ಸ್ ಪ್ರಮುಖ ಸ್ಥಾನದಲ್ಲಿದೆ), ಮತ್ತು ದಕ್ಷಿಣ ಏಷ್ಯಾದಲ್ಲಿ ಶೇ 52 ರಷ್ಟು ಬೇಡಿಕೆಯಿದೆ ಎಂದು ವರದಿ ಮಾಡಿದೆ. ಕೊರೊನಾವೈರಸ್ ಚೀನಾವನ್ನು ಬಿಟ್ಟು, ಜಗತ್ತಿನ ಬೇರೆ ದೇಶಗಳಲ್ಲಿ ಪಸರಿಸಿದಾಗ ಈ ಬೇಡಿಕೆ ಹೆಚ್ಚಾಯಿತು.
56 ಕಂಪನಿಗಳು ವಿಯೆಟ್ನಾಂಗೆ ಬಂದಿವೆ
ಆದರೆ, ಆಗ್ನೇಯ ಏಷ್ಯಾದ ವಿಯೆಟ್ನಾಂ ಹೀಗೆ ಚೀನಾದಿಂದ ಕಾಲ್ಕಿಳ್ಳುತ್ತಿರುವ ಕಂಪೆನಿಗಳನ್ನು ತನ್ನತ್ತ ಸೆಳೆಯಲು ಎಲ್ಲ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. 2020 ರಲ್ಲಿ 56 ಕಂಪನಿಗಳು ಚೀನಾದಿಂದ ತನ್ನ ನೆಲೆಗಳನ್ನು ಸ್ಥಳಾಂತರಿಸಿವೆ ಎಂದು ಕಿಮಾ ಹೇಳಿದೆ. ವಿಯೆಟ್ನಾಂ ಅವುಗಳಲ್ಲಿ 26 ಕಂಪೆನಿಗಳನ್ನು ತನ್ನತ್ತ ಸೆಳೆದುಕೊಂಡಿದೆ. ತೈವಾನ್ 11 ಮತ್ತು ಥೈಲ್ಯಾಂಡ್ 8 ಪಡೆದಿದೆ. ಕೇವಲ ಮೂರು ಕಂಪನಿಗಳು ಭಾರತಕ್ಕೆ ಬಂದಿವೆ ಎಂದು ಕಿಮಾ ಹೇಳಿದೆ.
ಕೊರೊನಾವೈರಸ್‌ನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ
ವಿಯೆಟ್ನಾಂ, ಕರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಮಾದರಿ ದೇಶವಾಗಿ ಹೊರಹೊಮ್ಮಿದೆ. ಈ ದೇಶದಲ್ಲಿ ಕೇವಲ 327 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಸುಮಾರು 10 ಕೋಟಿ ಜನಸಂಖ್ಯೆ ಹೊಂದಿರುವ ದೇಶಕ್ಕೆ ಇದು ಶ್ಲಾಘನೀಯ ಸಾಧನೆ. ಇಲ್ಲಿ ಪಶ್ಚಿಮ ಬಂಗಾಳಕ್ಕೆ ಹೋಲಿಸಬಹುದಾದ ಜನಸಂಖ್ಯೆ ಇದೆ. ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಬೆಳಿಗ್ಗೆ ತನಕ 8,613 ಪ್ರಕರಣಗಳು 400 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ವಿಯೆಟ್ನಾಂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಉದ್ಯಮಸ್ನೇಹಿಯಾಗಿ ಬದಲಾಗಿದೆ. ತನ್ನನ್ನು ಹೆಚ್ಚು ಹೂಡಿಕೆ ತಾಣವನ್ನಾಗಿ ಮಾಡಲು ವಿಯೆಟ್ನಾಂ ಯುರೋಪಿಯನ್ ಒಕ್ಕೂಟದೊಂದಿಗಿನ ತನ್ನ ವ್ಯಾಪಾರ ಒಪ್ಪಂದವನ್ನು ಅಂಗೀಕರಿಸಿತು. ಹೀಗಾಗಿ ಚೀನಾದಿಂದ ಹೊರ ಹೋಗುವ ಕಂಪೆನಿಗಳ ಕಣ್ಣು ಸಹಜವಾಗಿ ಈ ದೇಶದ ಮೇಲೆ ಬಿದ್ದಿದೆ.
ಭಾರತದ ಪ್ರಯತ್ನ ಸಾಲದು
ಕರ್ನಾಟಕ, ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳು ಚೀನಾದಿಂದ ಹೊರ ಬರುವ ಕಂಪೆನಿಗಳನ್ನು ಸೆಳೆಯುವುದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಿದವು ಆದರೆ, ಹೊರಬರುತ್ತಿರುವ ಕಂಪನಿಗಳು ಭಾರತದತ್ತ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಜಪಾನಿನ ಹಣಕಾಸು ಗುಂಪು ನೋಮುರಾ ನಡೆಸಿದ ಅಧ್ಯಯನದ ಪ್ರಕಾರ, ಈ ಕಂಪನಿಗಳ ಗಮ್ಯಸ್ಥಾನವು ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಉಳಿದಿದೆ. ಜವಳಿ ಕಂಪೆನಿಗಳು ಬಾಂಗ್ಲಾದೇಶದ ಕಡೆಗೆ ಮುಖ ಮಾಡಿವೆ. ಚೀನಾದೊಂದಿಗೆ ಸ್ಪರ್ಧೆ ಮಾಡಲು ಬಯಸುವ ಭಾರತ ಅಲ್ಲಿಂದ ಉದ್ಯಮಗಳನ್ನು ಸೆಳೆಯಲು ಹಿಂದೆ ಉಳಿದಿದೆ ಎನ್ನಲಾಗುತ್ತಿದೆ. (ಕೃಪೆ; ಇಂಡಿಯಾ ಟುಡೆ).


Click it and Unblock the Notifications